ಚೆನ್ನೈ: ಹರ್ಮನ್ ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡ ಕೇವಲ 11 ನಿಮಿಷಗಳ ಅಂತರದಲ್ಲಿ ನಾಟಕೀಯ ಪ್ರದರ್ಶನ ನೀಡುವ ಮೂಲಕ 4-3 ಗೋಲ್ಗಳಿಂದ ಮಲೇಷ್ಯಾವನ್ನು ಮಣಿಸಿ ದಾಖಲೆಯ ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ (Asian Champions Trophy) ಗೆದ್ದುಕೊಂಡಿತು. ಇಲ್ಲಿನ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಜುಗ್ರಾಜ್ ಸಿಂಗ್ ಅವರ ಪೆನಾಲ್ಟಿ ಕಾರ್ನರ್ ಪ್ರಯತ್ನದಿಂದ ಭಾರತಕ್ಕೆ ಆರಂಭಿಕ ಮುನ್ನಡೆ ಸಿಕ್ಕಿತು, ನಂತರ ಮಲೇಷ್ಯಾ ಮೊದಲ ಕ್ವಾರ್ಟರ್ ಮುಕ್ತಾಯದ ಕೊನೆಯಲ್ಲಿ ಸಮಬಲ ಸಾಧಿಸಿತು ಮತ್ತು ನಂತರ ಎರಡನೇ ಕ್ವಾರ್ಟರ್ನಲ್ಲಿ ಎರಡು ಗೋಲುಗಳನ್ನು ಗಳಿಸಿ ಮೊದಲಾರ್ಧದಲ್ಲಿ ಎರಡು ಗೋಲುಗಳಿಂದ ಮುನ್ನಡೆ ಸಾಧಿಸಿತು.
ಮೂರನೇ ಕ್ವಾರ್ಟರ್ ಮುಗಿಯುವ ತನಕ 1-3 ಹಿನ್ನಡೆಯಲ್ಲಿದ್ದ ಭಾರತ ಸೋಲಿನ ಸುಳಿಗೆ ಸಿಲುಕಿತ್ತು. ಅಂತಿಮವಾಗಿ ಕೊನೇ ನಿಮಿಷಗಳಲ್ಲಿ ಭಾರತ ತಂಡ ಮಲೇಷ್ಯಾಗೆ ತಿರುಗೇಟು ನೀಡಿ ಮೂರು ಗೋಲ್ಗಳನ್ನು ಬಾರಿಸುವ ಮೂಲಕ 4-3 ಅಂತರದ ಗೆಲುವು ಪಡೆದು ಹೊಸ ದಾಖಲೆ ಸೃಷ್ಟಿಸಿತು
ಮಲೇಷ್ಯಾ ತಂಡ ಆಕ್ರಮಣಕಾರಿ ಮನೋಭಾವದೊಂದಿಗೆ ಫೈನಲ್ ಪಂದ್ಯವನ್ನು ಪ್ರಾರಂಭಿಸಿತು. ಅವರ ಆಟವನ್ನು ನಿಯಂತ್ರಿಸಲು ಆತಿಥೇಯರಿಗೆ ಕಷ್ಟವಾಯಿತು. ಆದರೆ ನಿಧಾನಗತಿಯ ಆರಂಭದ ಹೊರತಾಗಿಯೂ ಕೊನೇ ಹಂತದಲ್ಲಿ ಸಿಡಿದೇಳುವ ಮೂಲಕ ಸ್ಥಳೀಯ ಅಭಿಮಾನಿಗಳ ಬೆಂಬಲದೊಂದಿಗೆ ಟ್ರೋಪಿ ಗೆದ್ದುಕೊಂಡಿತು.
ಫೇವರಿಟ್ ತಂಡವಾಗಿತ್ತು ಭಾರತ
ಟೂರ್ನಿಯಲ್ಲಿ ಸತತ ನಾಲ್ಕು ಗೆಲುವುಗಳೊಂದಿಗೆ ಭಾರತ ಫೇವರಿಟ್ ತಂಡವಾಗಿ ಕಣಕ್ಕಿಳಿದಿತ್ತು. ಮೆನ್ ಇನ್ ಬ್ಲೂ ತಂಡ ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿತ್ತಯ. ಹರ್ಮನ್ ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಸೆಮಿಫೈನಲ್ ನಲ್ಲಿ ಜಪಾನ್ ತಂಡವನ್ನು 5-0 ಅಂತರದಿಂದ ಮಣಿಸಿತ್ತು. “ಇದು ಮಲೇಷ್ಯಾ ವಿರುದ್ಧ ಗೆಲ್ಲಲೇಬೇಕಾದ ಪಂದ್ಯ. ಇದು ನಮಗೆ ನಿಜವಾಗಿಯೂ ಮುಖ್ಯವಾಗಿದೆ” ಎಂದು ಭಾರತದ ಕೋಚ್ ಕ್ರೇಗ್ ಫುಲ್ಟನ್ ಹೇಳಿದ್ದರು.
ಜಪಾನ್ ತಂಡಕ್ಕೆ 3ನೇ ಸ್ಥಾನ
ಚೆನ್ನೈನಲ್ಲಿ ನಡೆದ ಮೂರನೇ ಸ್ಥಾನದ ಪ್ಲೇಆಫ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು 5-3 ಗೋಲುಗಳಿಂದ ಸೋಲಿಸಿದ ನಂತರ ಜಪಾನ್ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೂರನೇ ಸ್ಥಾನಪಡೆಯಿತು ರಿಯೋಮಾ ಓಕಾ (3ನೇ ನಿ.), ರ್ಯೋಸಿ ಕಟೊ (9ನೇ ನಿ.), ಕೆಂಟಾರೊ ಫುಕುಡಾ (28ನೇ ನಿ.), ಶೋಟಾ ಯಮಡಾ (53ನೇ ನಿ.) ಮತ್ತು ಕೆನ್ ನಾಗಯೋಶಿ (58ನೇ ನಿ.) ಗಳಿಸಿದ ಗೋಲುಗಳ ನೆರವಿನಿಂದ ಭಾರತ ಎರಡು ಬಾರಿ ರನ್ನರ್ ಅಪ್ ಸ್ಥಾನ ಪಡೆಯಿತು. ಕೊರಿಯನ್ನರ ಪರ ಜೊಂಗ್ಹ್ಯುನ್ ಜಂಗ್ (15 ಮತ್ತು 33ನೇ ನಿಮಿಷ) ಮತ್ತು ಚಿಯೋಲಿಯನ್ ಪಾರ್ಕ್ (26ನೇ ನಿಮಿಷ) ಗೋಲು ಗಳಿಸಿದರು.