Site icon Vistara News

Ind vs wi : 421 ರನ್​ಗಳಿಗೆ ಡಿಕ್ಲೇರ್ ಘೋಷಿಸಿದ ಭಾರತ, ವಿಂಡೀಸ್​ನ ಆರಂಭಿಕ ವಿಕೆಟ್​ಗಳಿಗಾಗಿ ಬೇಟೆ ಶುರು

Yashaswi Jaiswal

ಡೊಮಿನಿಕಾ (ವೆಸ್ಟ್​ ಇಂಡೀಸ್): ವೆಸ್ಟ್​ ಇಂಡೀಸ್ ವಿರುದ್ಧದ ಟೆಸ್ಟ್​ ಸರಣಿಯ (Ind vs wi) ಮೊದಲ ಇನಿಂಗ್ಸ್​ನಲ್ಲಿ 421 ರನ್ ಬಾರಿಸಿರುವ ಭಾರತ ತಂಡ ಡಿಕ್ಲೇರ್ ಘೋಷಿಸಿದೆ. 271 ರನ್​ಗಳ ಮುನ್ನಡೆಯಲ್ಲಿರುವ ರೋಹಿತ್ ಶರ್ಮಾ ಬಳಗ ಆತಿಥೇಯ ತಂಡದ ಆರಂಭಿಕ ವಿಕೆಟ್​ಗಳಿಗಾಗಿ ಬೇಟೆ ಆರಂಭಿಸಿದೆ. ಪಂದ್ಯದ ಮೂರನೇ ದಿನವಾದ ಶುಕ್ರವಾರ ಭಾರತ ತಂಡದ ಬ್ಯಾಟರ್​ಗಳಾದ ಯಶಸ್ವಿ ಜೈಸ್ವಾಲ್​ (171) ಹಾಗೂ ವಿರಾಟ್​ ಕೊಹ್ಲಿ (76 ರನ್​) ಮಿಂಚಿದರು. ಪಿಚ್​ ತಿರುವು ಪಡೆಯುತ್ತಿರುವುದನ್ನು ಗಮನಿಸಿದ ನಾಯಕ ರೋಹಿತ್​ ದೊಡ್ಡ ಮುನ್ನಡೆ ಇಲ್ಲದ ಹೊರತಾಗಿಯೂ ಡಿಕ್ಲೇರ್​ ಘೋಷಿಸಿ ಗೆಲುವಿಗಾಗಿ ಪ್ರಯತ್ನ ಆರಂಭಿಸಿದ್ದಾರೆ.

ಇಲ್ಲಿನ ವಿಂಡ್ಸರ್ ಪಾರ್ಕ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಂಡೀಸ್​ ತಂಡ ಮೊದಲ ಇನಿಂಗ್ಸ್​ನಲ್ಲಿ ಪೇರಿಸಿದ್ದ 150 ರನ್​ಗಳಿಗೆ ಪ್ರತಿಯಾಗಿ ಬ್ಯಾಟ್​ ಮಾಡಿದ್ದ ಭಾರತ ತಂಡ 2 ವಿಕೆಟ್​ಗೆ 312 ರನ್​ ಮಾಡಿತ್ತು. ರೋಹಿತ್​ ಶರ್ಮಾ ದೀರ್ಘ ಕಾಲದ ಬಳಿಕ (103) ಶತಕ ಬಾರಿಸಿದ್ದರೆ ಯಶಸ್ವಿ ಜೈಸ್ವಾಲ್​ 143 ರನ್​ ಬಾರಿಸಿ ಔಟಾಗದೇ ಉಳಿದಿದ್ದರು. ಶುಭ್​ಮನ್​ ಗಿಲ್​ 6 ರನ್​ಗಳಿಗೆ ಔಟಾಗಿದ್ದರು. ನಾಯಕ ವಿರಾಟ್​ ಕೊಹ್ಲಿ 36 ರನ್ ಬಾರಿಸಿ ಮೂರನೇ ದಿನಕ್ಕೆ ಆಟ ಮುಂದುವರಿಸಿದ್ದರು.

ಮೂರನೇ ದಿನವಾದ ಶುಕ್ರವಾರ ಜೈಸ್ವಾಲ್ ಹಾಗೂ ವಿರಾಟ್​ ಕೊಹ್ಲಿ ಹಿಂದಿನ ದಿನದಂತೆಯೇ ಆಟ ಮುಂದುವರಿಸಿದರು. ಆದರೆ, ತಂಡದ ಮೊತ್ತ 350 ಅಗಿದ್ದಾಗ ಜೈಸ್ವಾಲ್​ ಔಟಾದರು. 171 ಬಾರಿಸಿ ಪೆವಿಲಿಯನ್​ ಕಡೆಗೆ ಹೊರಟ ಅವರಿಗೆ ತಂಡದ ಇತರ ಸದಸ್ಯರಿಂದ ಉತ್ತಮ ಗೌರವ ದೊರೆಯಿತು. ಆದರೆ, ಪದಾರ್ಪಣಾ ಪಂದ್ಯದಲ್ಲಿಯೇ ದ್ವಿಶತಕ ಬಾರಿಸಿ ಸಾಧನೆ ಮಾಡುವ ಅವಕಾಶ ಇಲ್ಲವಾಯಿತು.

ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಟೆಸ್ಟ್​ ಸ್ಪೆಷಲಿಸ್ಟ್​ ಅಜಿಂಕ್ಯ ರಹಾನೆ ಹೆಚ್ಚು ಹೊತ್ತು ಅಡಲಿಲ್ಲ. ಅವರು 11 ಎಸೆತಗಳನ್ನು ಎದುರಿಸಿ 3 ರನ್ ಬಾರಿಸಿ ಔಟಾದರು. ಕೇಮರ್​ ರೋಚ್​ ಅವರ ಎಸೆತಕ್ಕೆ ಬ್ಲಾಕ್​ವುಡ್​ಗೆ ಕ್ಯಾಚ್ ನೀಡಿ ಅವರು ನಿರ್ಗಮಿಸಿದರು. ಈ ವೇಳೆ ಭಾರತ ತಂಡ 356 ರನ್​ ಬಾರಿಸಿತ್ತು.

ಈ ವೇಳೆ ಜತೆಯಾದ ರವೀಂದ್ರ ಜಡೇಜಾ (37) ಹಾಗೂ ವಿರಾಟ್ ಕೊಹ್ಲಿ ಭೋಜನ ವಿರಾಮದ ತನಕ ಆಡಿದರು. ಆದರೆ, ಎರಡನೇ ಅವಧಿ ಆರಂಭವಾಗುತ್ತಿದ್ದಂತೆ ವಿರಾಟ್​ ಕೊಹ್ಲಿ ಔಟಾದರು. ಕಾರ್ನ್​ವಾಲ್​ಗೆ ಅವರು ವಿಕೆಟ್​ ಒಪ್ಪಿಸಿದರು. 182 ಎಸೆತಗಳಲ್ಲಿ 76 ರನ್​ ಬಾರಿಸಿದ್ದ ಕೊಹ್ಲಿಯ ಶತಕದ ಅವಕಾಶ ಇಲ್ಲವಾಯಿತು.

ಇದನ್ನೂ ಓದಿ : Asian Games 2023 : ಧವನ್​ಗೆ ಸಿಗದ ಚಾನ್ಸ್​; ಏಷ್ಯನ್​ ಗೇಮ್ಸ್​ ಭಾರತ ತಂಡಕ್ಕೆ ಹೊಸ ನಾಯಕ!

ಕೊಹ್ಲಿ ಬಳಿಕ ಇಶಾನ್​ ಕಿಶನ್​ ಕಣಕ್ಕೆ ಇಳಿದರು. 19 ಎಸೆತ ಎದುರಿಸಿದ ಅವರು ರನ್​ ಖಾತೆ ತೆರಯಲಿಲ್ಲ. ಈ ವೇಳೇ ರೋಹಿತ್​ ಶರ್ಮಾ ಡಿಕ್ಲೇರ್ ಘೋಷಿಸಿದರು.

ಕಳೆದ ತಿಂಗಳು ಡಬ್ಲ್ಯುಟಿಸಿ ಫೈನಲ್ ಸೋಲಿನ ನಂತರ ಭಾರತ ತಂಡಕ್ಕೆ ಮರಳಿದ ರವಿಚಂದ್ರನ್ ಅಶ್ವಿನ್ ತಮ್ಮ 33 ನೇ ಐದು ವಿಕೆಟ್ ಸಾಧನೆ ಮಾಡಿದ್ದರು.

Exit mobile version