Site icon Vistara News

INDvsAUS : ಟೆಸ್ಟ್​ ಪಂದ್ಯದ ಮೊದಲ ದಿನ ಭಾರತದ ಮೇಲುಗೈ; ಇನಿಂಗ್ಸ್​ ಮುನ್ನಡೆ ಹಾದಿಯಲ್ಲಿ ರೋಹಿತ್​ ಪಡೆ

Team india

#image_title

ನಾಗ್ಪುರ: ಬೌಲಿಂಗ್​ ಹಾಗೂ ಬ್ಯಾಟಿಂಗ್​ನಲ್ಲಿ ಸಮತೋಲಿತ ಪ್ರದರ್ಶನ ನೀಡಿದ ಭಾರತ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ (INDvsAUS) ಮೊದಲ ಪಂದ್ಯದ ಮೊದಲ ದಿನ ಮೇಲುಗೈ ಸಾಧಿಸಿದೆ. ಫೆಬ್ರವರಿ 9ರಂದು ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 63. 5 ಓವರ್​ಗಳಲ್ಲಿ 177 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಆಡಿದ ಭಾರತ ತಂಡ ದಿನದಾಟ ಮುಕ್ತಾಯದ ವೇಳೆಗೆ 24 ಓವರ್​ಗಳಲ್ಲಿ ಒಂದು ವಿಕೆಟ್​​ ಕಳೆದುಕೊಂಡು 77 ರನ್​ ಗಳಿಸಿದೆ. ಟೀಮ್​ ಇಂಡಿಯಾಗೆ ಇನಿಂಗ್ಸ್ ಮುನ್ನಡೆ ಪಡೆಯಲು ಇನ್ನೂ 101 ರನ್​ಗಳ ಅಗತ್ಯವಿದೆ.

ಇಲ್ಲಿನ ವಿದರ್ಭ ಕ್ರಿಕೆಟ್​ ಅಸೋಸಿಯೇಷನ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಭಾರತ ಸ್ಪಿನ್ನರ್​ಗಳಾದ ರವೀಂದ್ರ ಜಡೇಜಾ (47 ರನ್​ಗಳಿಗೆ 5 ವಿಕೆಟ್​) ಹಾಗೂ ಆರ್​. ಅಶ್ವಿನ್​ (42 ರನ್​ಗಳಿಗೆ 3 ವಿಕೆಟ್​) ಪ್ರವಾಸಿ ತಂಡದ ಮೇಲೆ ಸವಾರಿ ಮಾಡಿದರು. ಇದರೊಂದಿಗೆ ಮೊದಲು ಬ್ಯಾಟ್​ ಮಾಡಿ ಆತಿಥೇಯ ತಂಡಕ್ಕೆ ದೊಡ್ಡ ಮೊತ್ತದ ಸವಾಲೊಡ್ಡುವ ಆಸೀಸ್​ ಪಡೆಯ ಯೋಜನೆ ನುಚ್ಚು ನೂರಾಯಿತು.

ಆರಂಭಿಕರಾಗಿ ಬ್ಯಾಟ್​ ಹಿಡಿದು ಬಂದ ಡೇವಿಡ್​ ವಾರ್ನರ್​ (1) ಹಾಗೂ ಉಸ್ಮಾನ್ ಖವಾಜ (1) ವಿಕೆಟ್​ಗಳನ್ನು ಕ್ರಮವಾಗಿ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್​ ತಮ್ಮದಾಗಿಸಿಕೊಂಡರು. ಆರಂಭಿಕ ಕುಸಿತದಿಂದ ತಂಡವನ್ನು ಕಾಪಾಡಲು ಬಂದ ಮರ್ನಸ್​ ಲಾಬುಶೇನ್​ (49) ಸ್ವಲ್ಪ ಹೊತ್ತು ಕ್ರೀಸ್​ನಲ್ಲಿ ತಳವೂರಿದರೂ ಜಡೇಜಾ ಸ್ಪಿನ್​ ಮೋಡಿಗೆ ಒಳಗಾಗಿ ಔಟಾದರು. ಅವರು ಒಂದು ರನ್​ನಿಂದ ಅರ್ಧ ಶತಕದಿಂದ ವಂಚಿತರಾದರು. ಸ್ಟಾರ್​ ಬ್ಯಾಟರ್​ ಸ್ಟೀವ್​ ಸ್ಮಿತ್​ (37) ನಿಧಾನಗತಿಯ ಬ್ಯಾಟಿಂಗ್​ನೊಂದಿಗೆ ಭಾರತ ಬೌಲರ್​ಗಳ ಏಕಾಗ್ರತೆಗೆ ಭಂಗ ತಂದರೂ ಜಡೇಜಾ ಅವರ ಮೋಹಕ ಸ್ಪಿನ್​ಗೆ ಬೌಲ್ಡ್​ ಆಗಿ ಮರಳಿದರು. ಮ್ಯಾಟ್​ ರನ್​ಶಾ ಅವರನ್ನು ಶೂನ್ಯಕ್ಕೆ ಔಟ್​ ಮಾಡಿದ ಜಡೇಜಾ ಭಾರತದ ಮುನ್ನಡೆಗೆ ಕಾರಣರಾದರು. ಅದರ ಜತೆಗೆ ಅವರು ಫೀಟರ್​ ಹ್ಯಾಂಡ್ಸ್​ಕಾಂಬ್​ (31) ವಿಕೆಟ್​ ಕೂಡ ತಮ್ಮದಾಗಿಸಿಕೊಂಡರು.

ಇದಾದ ಬಳಿಕ ಕರಾಮತ್ತೊ ತೋರಿದ ಆರ್​. ಅಶ್ವಿನ್​ ವಿಕೆಟ್​ಕೀಪರ್​ ಬ್ಯಾಟರ್​ ಅಲೆಕ್ಸ್​ ಕ್ಯೇರಿ (36) ವಿಕೆಟ್​ ಕೂಡ ತಮ್ಮದಾಗಿಸಿಕೊಂಡರು. ನಾಯಕ ಪ್ಯಾಟ್​ ಕಮಿನ್ಸ್​ 6 ರನ್​ಗೆ ಸೀಮಿತಗೊಂಡರೆ ಬಾಲಂಗೋಚಿ ಬ್ಯಾಟರ್​​ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯಲಿಲ್ಲ.

ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ನಾಯಕ ರೋಹಿತ್ ಶರ್ಮ ವೇಗದ ಬ್ಯಾಟಿಂಗ್​ ಮೂಲಕ (56) ಅರ್ಧ ಶತಕ ಬಾರಿಸಿದರು. ಆದರೆ, ಕೆ. ಎಲ್​ ರಾಹುಲ್​ 20 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು. ಅಶ್ವಿನ್​ ನೈಟ್​ ವಾಚ್​ಮನ್​ ಆಗಿ ಕ್ರೀಸ್​ಗೆ ಇಳಿದಿದ್ದಾರೆ.

ಇದನ್ನೂ ಓದಿ : INDvsAUS : ಐದು ತಿಂಗಳ ಹಿಂದೆ ಗಾಯಾಳು, ಈಗ ಐದು ವಿಕೆಟ್​ಗಳ ಸರದಾರ; ಜಡೇಜಾ ಸಾಧನೆಗೆ ಅಭಿಮಾನಿಗಳ ಮೆಚ್ಚುಗೆ

ಸ್ಕೋರ್​ ವಿವರ

ಆಸ್ಟ್ತೇಲಿಯಾ ಪ್ರಥಮ ಇನಿಂಗ್ಸ್​ : 63.5 ಓವರ್​ಗಳಲ್ಲಿ 177 (ಮರ್ನಸ್​ ಲಾಬುಶೇನ್​ 49, ಸ್ಟೀವ್ ಸ್ಮಿತ್​ 37, ಅಲೆಕ್ಸ್​ ಕ್ಯೇರಿ 36; ರವೀಂದ್ರ ಜಡೇಜಾ 47ಕ್ಕೆ5, ರವಿಚಂದ್ರನ್​ ಅಶ್ವಿನ್​ 42ಕ್ಕೆ3).

ಭಾರತ ಪ್ರಥಮ ಇನಿಂಗ್ಸ್​ : 24 ಓವರ್​ಗಳಲ್ಲಿ 1 ವಿಕೆಟ್​ಗೆ 77 (ರೋಹಿತ್ ಶರ್ಮ 56*, ಕೆ. ಎಲ್​ ರಾಹುಲ್​ 20; ಟಾಡ್​ ಮರ್ಫಿ 13ಕ್ಕೆ1).

Exit mobile version