Site icon Vistara News

CWG- 2022 | ನ್ಯೂಜಿಲೆಂಡ್‌ ಮಣಿಸಿದ ಭಾರತದ ವನಿತೆಯರ ಹಾಕಿ ತಂಡಕ್ಕೆ ಕಂಚು

CWG- 2022

ಬರ್ಮಿಂಗ್ಹಮ್‌ : ಸವಿತಾ ಪುನಿಯಾ ನೇತೃತ್ವದ ಭಾರತದ ಮಹಿಳೆಯರ ಹಾಕಿ ತಂಡ ಕಾಮನ್ವೆಲ್ತ್‌ ಗೇಮ್ಸ್‌ (CWG- 2022) ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ. ಭಾನುವಾರ ನಡೆದ ಕಂಚಿನ ಪದಕ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಪೆನಾಲ್ಟಿ ಶೂಟೌಟ್‌ ೨-೧ ಗೋಲ್‌ಗಳಿಂದ ಜಯ ಸಾಧಿಸಿದ ಭಾರತದ ವನಿತೆಯರು ಸಂಭ್ರಮಾಚರಣೆ ಮಾಡಿದರು. ಇದು ಭಾರತದ ವನಿತೆಯರ ಹಾಕಿ ತಂಡಕ್ಕೆ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಒಟ್ಟಾರೆಯಾಗಿ ಲಭಿಸುತ್ತಿರುವ ಮೂರನೇ ಪದಕವಾಗಿದೆ. ೨೦೦೨ರ ಮ್ಯಾಂಚೆಸ್ಟರ್ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಬಂಗಾರ ಗೆದ್ದಿದ್ದರೆ, ನಾಲ್ಕು ವರ್ಷದ ಬಳಿಕ ಬೆಳ್ಳಿ ಗೆದ್ದಿತ್ತು. ಇದೀಗ ೧೬ ವರ್ಷಗಳ ಕಾಯುವಿಕೆ ಬಳಿಕ ಭಾರತದ ಮಹಿಳೆಯರ ಹಾಕಿ ತಂಡಕ್ಕೆ ಪದಕವೊಂದು ಲಭಿಸಿದೆ.

ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಭಾರತದ ಸಲಿಮಾ ಟೆಟೆ (೨೯ನೇ ನಿಮಿಷ) ಗೋಲ್‌ ಬಾರಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದಿದ್ದರು. ಪಂದ್ಯ ಮುಕ್ತಾಯದ ೬೦ನೇ ನಿಮಿಷದ ತನಕವೂ ಇದೇ ಅಂತರ ಮುಂದುವರಿತ್ತು. ಹೀಗಾಗಿ ಭಾರತ ಪಂದ್ಯ ಗೆಲ್ಲುವುದು ಖಚಿತವಾಗಿತ್ತು. ಆದರೆ, ಕೊನೆಯ ೧೦ ನಿಮಿಷಗಳು ಬಾಕಿ ಇರುವಂತೆಯೇ ನ್ಯೂಜಿಲೆಂಡ್‌ ತಂಡದ ಒಲಿವಿಯಾ ಮೆರಿ (೬೦ನೇ ನಿಮಿಷ) ಗೋಲ್‌ ಬಾರಿಸುವ ಮೂಲಕ ೧-೧ ಗೋಲ್‌ಗಳ ಸಮಬಲ ಉಂಟಾಯಿತು. ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಭಾರತ ತಂಡದ ಗೋಲ್‌ಕೀಪರ್‌ ಸವಿತಾ ಅವರು ಎದುರಾಳಿ ತಂಡದ ಆಟಗಾರ್ತಿಯರು ಗೋಲ್‌ ಪೋಸ್ಟ್‌ನೊಳಗೆ ಚೆಂಡು ನುಗ್ಗಿಸಲು ಮಾಡಿದ ಮೂರು ಪ್ರಯತ್ನಗಳನ್ನು ತಡೆದರು. ಇದೇ ವೇಳೆ, ಭಾರತದ ನವನೀತ್‌ ಕೌರ್‌ ಹಾಗೂ ಸೋನಿಕಾ ಅವರು ಕಿವೀಸ್‌ ಗೋಲ್‌ಕೀಪರ್‌ ಗ್ರೇಸ್‌ ಒ, ಹೆನ್ಲಾನ್‌ ಅವರನ್ನು ವಂಚಿಸಿ ಎರಡು ಗೋಲ್‌ ಬಾರಿಸಿದರು. ಇದರೊಂದಿಗೆ ವಿಜಯ ಭಾರತದ ಪಾಲಾಯಿತು.

ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಪಂದ್ಯವನ್ನು ಸೋಲುವ ಮೂಲಕ ನಿರಾಸೆ ಎದುರಿಸಿದ್ದ ಭಾರತದ ವನಿತೆಯರ ತಂಡಕ್ಕೆ ಕಾಮನ್ವೆಲ್ತ್‌ ಗೇಮ್ಸ್‌ನ ಪದಕ ಸಮಾಧಾನ ತರಲಿದೆ. ಆ ಪಂದ್ಯದಲ್ಲೂ ಭಾರತ ಇಂಗ್ಲೆಂಡ್‌ ವಿರುದ್ಧ ಕೆಚ್ಚೆದೆಯ ಪ್ರದರ್ಶನ ನೀಡಿ ೩-೪ ಗೋಲ್‌ಗಳಿಂದ ಸೋಲು ಕಂಡಿತ್ತು.

ಸವಿತಾ ಪುನಿಯಾ ನೇತೃತ್ವದ ತಂಡವು ಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ಕಂಚಿನ ಪದಕದ ಪಂದ್ಯವನ್ನು ಆಡಬೇಕಾಯಿತು. ಆ ಪಂದ್ಯದಲ್ಲೂ ಭಾರತ ವಿವಾದಿತ ಪೆನಾಲ್ಟಿ ಶೂಟೌಟ್‌ ಮೂಲಕ ಸೋಲು ಕಂಡಿತ್ತು. ಪೆನಾಲ್ಟಿ ಸಮಯ ಆರಂಭವಾಗುವ ಮೊದಲೇ ಅಂಪೈರ್‌ ಎದುರಾಳಿ ತಂಡದ ಅಟಗಾರ್ತಿಯರಿಗೆ ಗೋಲ್‌ ಹೊಡೆಯಲು ಅವಕಾಶ ನೀಡಿದ್ದರು. ಆದರೆ, ಗೋಲ್‌ಕೀಪರ್‌ ಸವಿತಾ ಅವರು ಅದನ್ನು ತಡೆದಿದ್ದರು. ಆ ಬಳಿಕ ರೆಫರಿ ಆಸ್ಟ್ರೇಲಿಯಾದ ಆಟಗಾರ್ತಿಯರಿಗೆ ಮತ್ತೊಂದು ಅವಕಾಶ ನೀಡಿದ್ದರು. ಅದರಲ್ಲಿ ಅವರು ಗೋಲ್‌ ಬಾರಿಸಿದ್ದರು. ಒತ್ತಡಕ್ಕೆ ಬಿದ್ದ ಭಾರತೀಯರು ಗೋಲ್‌ ಬಾರಿಸಲು ವಿಫಲಗೊಂಡರೆ, ಅಸ್ಟ್ರೇಲಿಯಾ ೩-೦ ಅಂತರಿಂದ ಜಯ ಸಾಧಿಸಿತ್ತು. ಆಗಿರುವ ಪ್ರಮಾದಕ್ಕೆ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ ಭಾರತ ತಂಡದ ಕ್ಷಮೆ ಕೋರಿತ್ತು.

ಇದನ್ನೂ ಓದಿ | CWG- 2022 | ಬಾಕ್ಸಿಂಗ್‌ನಲ್ಲಿ ಎರಡನೇ ಬಂಗಾರದ ಪದಕ ಗೆದ್ದ ಅಮಿತ್ ಪಂಘಾಲ್‌

Exit mobile version