ಲೌಡರ್‌ಹಿಲ್ : ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ೨೦ ಸರಣಿಯ (IND vs WI T20) ನಾಲ್ಕನೇ ಪಂದ್ಯ ಶನಿವಾರ ರಾತ್ರಿ ಅಮೆರಿಕದ ಲೌಡರ್‌ಹಿಲ್ ಸ್ಟೇಡಿಯಮ್‌ನಲ್ಲಿ ನಡೆಯಲಿದೆ. ಈಗಾಗಲೇ ಮೂರು ಪಂದ್ಯಗಳು ಮುಕ್ತಾಯಗೊಂಡಿದ್ದು, ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ರೋಹಿತ್ ಶರ್ಮ ಬಳಗ ೨-೧ ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಭಾರತ ತಂಡ ಈ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ.
ಕಳೆದ ಮೂರು ಪಂದ್ಯಗಳಲ್ಲಿ ಭಾರತ ತಂಡದ ಪ್ರದರ್ಶನ ಅತ್ಯುತ್ತಮವಾಗಿತ್ತು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಅಲ್ಪ ಹಿನ್ನಡೆ ಅನುಭವಿಸಿದ್ದರು. ಶ್ರೇಯಸ್ ಅಯ್ಯರ್ ಮಾತ್ರ ಪ್ರದರ್ಶನ ವೈಫಲ್ಯ ಎದುರಿಸುತ್ತಿದ್ದು, ಅವರ ಬದಲಿಗೆ ದೀಪಕ್ ಹೂಡಾಗೆ ಅವಕಾಶ ನೀಡಿ ಎಂಬ ಒತ್ತಾಯ ಹೆಚ್ಚಾಗಿದೆ. ಪ್ರಮುಖವಾಗಿ ಶ್ರೇಯಸ್ ಅಯ್ಯರ್ ಅವರು ಅತಿ ವೇಗದ ಹಾಗೂ ಶಾರ್ಟ್ ಪಿಚ್ ಎಸೆತಗಳಿಗೆ ಔಟಾಗುತ್ತಿದ್ದಾರೆ ಎಂಬುದೇ ಹಿರಿಯ ಕ್ರಿಕೆಟಿಗರಿಗೆ ಇರುವ ಅಸಮಾಧಾನ.
ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಭಾರತ ತಂಡದ ಪರ ವಿಶ್ವಾಸ ಮೂಡಿಸುವಂಥ ಪ್ರದರ್ಶನ ನೀಡಿದ್ದಾರೆ. ಅದೇ ರೀತಿ ಬೌಲಿಂಗ್‌ನಲ್ಲೂ ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ.
ವಿಂಡೀಸ್ ವಿರುದ್ಧ ಇನ್ನು ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಈ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು ಏಷ್ಯಾ ಕಪ್ ಹಾಗೂ ಟಿ೨೦ ವಿಶ್ವ ಕಪ್‌ಗೆ ಅವಕಾಶ ಪಡೆಯಬಲ್ಲರು. ಹೀಗಾಗಿ ಪ್ರತಿಯೊಬ್ಬ ಆಟಗಾರನ ಪ್ರದರ್ಶನದ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಹಾಗೂ ಆಯ್ಕೆ ಸಮಿತಿ ಕಣ್ಣಿಟ್ಟಿರುತ್ತದೆ. ಹೀಗಾಗಿ ಪ್ರಭಾವಿ ಪ್ರದರ್ಶನ ನೀಡಲು ಎಲ್ಲ ಆಟಗಾರರು ಪ್ರಯತ್ನಿಸಲಿದ್ದಾರೆ.
ರೋಹಿತ್ ಲಭ್ಯ
ಮೂರನೇ ಪಂದ್ಯದ ವೇಳೆ ಬೆನ್ನು ನೋವಿಗೆ ಒಳಗಾಗಿದ್ದ ನಾಯಕ ರೋಹಿತ್ ಶರ್ಮ ಅವರು ನಾಲ್ಕನೇ ಪಂದ್ಯಕ್ಕೆ ಲಭ್ಯರಿದ್ದಾರೆ. ಭಾರತದ ಪಾಳೆಯಕ್ಕೆ ಇದು ಸಂತಸದ ಸುದ್ದಿ. ಅವರು ಉತ್ತಮ ಫಾರ್ಮ್‌ನಲ್ಲಿರುವುದು ಸರಣಿ ಜಯಕ್ಕೆ ಸಹಾಯ ಮಾಡಬಹುದು.
ಅತ್ತ ವೆಸ್ಟ್ ಇಂಡೀಸ್ ತಂಡವ ಸ್ಫೋಟಕ ಬ್ಯಾಟರ್‌ಗಳು ಹಾಗೂ ದೈತ್ಯ ವೇಗಿಗಳೊಂದಿಗೆ ಸರಣಿಯನ್ನು ಸಮಬಲ ಮಾಡಿಕೊಳ್ಳುವುದಕ್ಕೆ ಸಿದ್ಧತೆ ನಡೆಸುತ್ತಿದೆ. ಅಂತೆಯೇ ಲೌಡರ್‌ಹಿಲ್ ಪಿಚ್ ವಿಂಡೀಸ್ ಆಟಗಾರರಿಗೆ ಹೆಚ್ಚು ಪರಿಚಿತ. ಇಲ್ಲಿ ಒಟ್ಟು ಎಂಟು ಪಂದ್ಯಗಳನ್ನು ಆತಿಥೇಯ ತಂಡ ಆಡಿದೆ. ಅದರಲ್ಲಿ ೨೦೧೨ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಹಾಗೂ ೨೦೧೬ರಲ್ಲಿ ಭಾರತ ವಿರುದ್ಧ ಒಂದು ಪಂದ್ಯ ಗೆದ್ದಿದೆ. ೨೦೧೮ರಿಂದ ನಡೆದ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿದೆ. ೨೦೧೮ರಲ್ಲಿ ಬಾಂಗ್ಲಾದೇಶ ಹಾಗೂ ೨೦೧೯ರಲ್ಲಿ ಭಾರತ ವಿರುದ್ಧ ತಲಾ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಒಟ್ಟಾರೆ ೨೨ ಪಂದ್ಯಗಳು ಇದುವರೆಗೆ ನಡೆದ್ದಿದ್ದು, ಭಾರತ ೧೫ ಹಾಗೂ ವಿಂಡೀಸ್ ೭ ಪಂದ್ಯಗಳಲ್ಲಿ ಜಯ ಕಂಡಿದೆ.
ಪಿಚ್ ಮತ್ತು ಹವಾಗುಣ
ಲೌಡರ್‌ಹಿಲ್ ಪಿಚ್ ಟಿ೨೦ಗೆ ಪೂರಕವಾಗಿದೆ. ಸರಾಸರಿ ೧೬೦ ರನ್‌ಗಳು ಈ ಪಿಚ್‌ನಲ್ಲಿ ದಾಖಲಾಗುತ್ತವೆ. ಹವಾಮಾನ ಮುನ್ಸೂಚನೆ ಪ್ರಕಾರ ಶೇಕಡ ೫೦ರಿಂದ ೭೦ರವರೆಗೆ ಮಳೆ ಬರುವ ಸಾಧ್ಯತೆಗಳಿವೆ.
ಭಾರತ ತಂಡ
ರೋಹಿತ್ ಶರ್ಮ(ನಾಯಕ) , ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಇಶಾನ್ ಕಿಶನ್, ದಿನೇಶ್ ಕಾರ್ತಿಕ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್, ಭುವವೇಶ್ವರ್ ಕುಮಾರ್, ಹರ್ಷಲ್ ಪಟೇಲ್.
ವೆಸ್ಟ್ ಇಂಡೀಸ್: ನಿಕೋಲಸ್ ಪೂರನ್ (ನಾಯಕ) , ರೋವ್ಮನ್ ಪೊವೆಲ್, ಶಮ್ರಾ ಬ್ರೂಕ್ಸ್, ಡಾಮಿನಿಕ್ ಡ್ರೆಕ್ಸ್, ಶಿಮ್ರೋನ್ ಹೆಟ್ಮಾಯರ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಒಬೆದ್ ಮೆಕಾಯ್, ಕೀಮೊ ಪಾಲ್, ರೊಮಾರಿಯೊ ಶೆಫರ್ಡ್, ಒಡೆನ್ ಸ್ಮಿತ್, ಡೇವೊನ್ ಥಾಮಸ್, ಹೇಡನ್ ವಾಲ್ಶ್.