ಪರ್ತ್: ಸೂರ್ಯಕುಮಾರ್ ಯಾದವ್ (೬೮ ರನ್, ೪೦ ಎಸೆತ, ೬ ಫೋರ್, ೪ ಸಿಕ್ಸರ್) ಅವರ ಸ್ಫೋಟಕ ಅರ್ಧ ಶತಕದ ನೆರವು ಪಡೆದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ವಿಶ್ವ ಕಪ್ (IND vs SA) ಪಂದ್ಯದಲ್ಲಿ 133 ರನ್ ಬಾರಿಸಿದೆ. ಭಾರತ ತಂಡದ ಇತರ ಬ್ಯಾಟರ್‌ಗಳು ವೈಫಲ್ಯ ಕಂಡ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಏಕಾಂಗಿ ಹೋರಾಟ ನಡೆಸಿ ಎದುರಾಳಿ ತಂಡಕ್ಕೆ 134 ರನ್‌ಗಳ ಸ್ಪರ್ಧಾತ್ಮಕ ಗೆಲುವಿನ ಗುರಿಯೊಡ್ಡಲು ನೆರವಾದರು.
ಪರ್ತ್ ಸ್ಟೇಡಿಯಮ್‌ನಲ್ಲಿ ಭಾನುವಾರ ಸಂಜೆ ವೇಳೆ (ಭಾರತೀಯ ಕಾಲಮಾನ) ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಬಾರಿಸಿತು. ದಕ್ಷಿಣ ಆಫ್ರಿಕಾದ ಬೌಲರ್‌ಗಳಾದ ಲುಂಗಿ ಎನ್‌ಗಿಡಿ (೨೯ ರನ್‌ಗಳಿಗೆ ೪ ವಿಕೆಟ್), ವೇಯ್ನ್ ಪಾರ್ನೆಲ್ ೧೫ ರನ್‌ಗಳಿಗೆ ೩ ವಿಕೆಟ್ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಹೀಗಾಗಿ ಮೊದಲು ಬ್ಯಾಟ್ ಮಾಡಿ ದೊಡ್ಡ ಮೊತ್ತದ ಸವಾಲು ನೀಡುವ ಭಾರತ ತಂಡದ ಯೋಜನೆ ವಿಫಲಗೊಂಡಿತು.
ಆರಂಭಿಕರ ವೈಫಲ್ಯ
ಭಾರತ ತಂಡದ ಬಹುತೇಕ ಬ್ಯಾಟರ್‌ಗಳು ಈ ಪಂದ್ಯದಲ್ಲಿ ವೈಫಲ್ಯ ಕಂಡರು. ಕೆ. ಎಲ್ ರಾಹುಲ್ (೯) ಮತ್ತೊಮ್ಮೆ ನಿರಾಶಾದಾಯಕ ಪ್ರದರ್ಶನ ನೀಡಿದರೆ, ರೋಹಿತ್ ಶರ್ಮ ೧೫ ರನ್‌ಗಳಿಗೆ ಸೀಮಿತಗೊಂಡರು. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ೧೨ ರನ್‌ಗಳಿಗೆ ಔಟಾಗಿ ಮರಳಿದರು. ಹಾಲಿ ವಿಶ್ವ ಕಪ್‌ನಲ್ಲಿ ಮೊದಲ ಅವಕಾಶ ಪಡೆದ ದೀಪಕ್ ಹೂಡ ಶೂನ್ಯ ಸುತ್ತಿದರು.
ಸತತವಾಗಿ ವಿಕೆಟ್ ಉರುಳಿದ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಎದುರಾಳಿ ತಂಡದ ಬೌಲರ್‌ಗಳನ್ನು ನಿರಂತರವಾಗಿ ದಂಡಿದರು. ೩೦ ಎಸೆತಗಳಿಗೆ ೫೦ ರನ್ ಬಾರಿಸಿದ ಅವರು ೬೮ ರನ್‌ಗಳಿಗೆ ಪಾರ್ನೆಲ್ ಎಸೆತದಲ್ಲಿ ಕೇಶವ್ ಮಹಾರಾಜಾಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ (೨), ದಿನೇಶ್ ಕಾರ್ತಿಕ್ (೬), ರವಿಚಂದ್ರನ್ ಅಶ್ವಿನ್ (೭) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವ ಪ್ರಯತ್ನ ಮಾಡಲಿಲ್ಲ.
ಇದನ್ನೂ ಓದಿ | T20 World Cup | ನೆದರ್ಲೆಂಡ್ಸ್ ವಿರುದ್ಧ 6 ವಿಕೆಟ್ ಗೆಲುವು; ಅಂತೂ ಇಂತೂ ಖಾತೆ ತರೆದ ಪಾಕ್