ಮುಂಬಯಿ : ಮುಂಬರುವ ಏಷ್ಯಾ ಕಪ್ (Asia Cup) ಟೂರ್ನಿಗಾಗಿ ಸಿದ್ಧತೆ ನಡೆಸುತ್ತಿರುವ ಭಾರತ ತಂಡಕ್ಕೆ ಆಘಾತದ ಸುದ್ದಿಯೊಂದು ಅಪ್ಪಳಿಸಿದೆ. ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದು, ಮುಂದಿನ ಶನಿವಾರ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಅವರು ಲಭ್ಯರಾಗುವುದು ಅನುಮಾನ ಎನಿಸಿದೆ. ಭಾರತ ತಂಡ ಸೋಮವಾರ ಜಿಂಬಾಬ್ವೆ ವಿರುದ್ಧದ ಏಕ ದಿನ ಸರಣಿಯನ್ನು ಮುಗಿಸಿದ್ದು, ಈ ಪ್ರವಾಸಕ್ಕೆ ರಾಹುಲ್ ದ್ರಾವಿಡ್ ಅವರು ಹೋಗಿರಲಿಲ್ಲ. ತವರಲ್ಲೇ ಉಳಿದಿದ್ದ ಅವರಿಗೆ ಸೋಂಕು ತಗುಲಿದೆ ಎನ್ನಲಾಗುತ್ತಿದೆ
ದ್ರಾವಿಡ್ ಅವರು ಯಾವಾಗ ಭಾರತ ತಂಡದ ಸೇವೆಗೆ ಲಭಿಸುತ್ತಾರೆ ಎಂಬ ಮಾಹಿತಿ ಇನ್ನೂ ಇಲ್ಲ. ಹೀಗಾಗಿ ಏಷ್ಯಾ ಕಪ್‌ಗಾಗಿ ಯುಎಇಗೆ ಪ್ರವಾಸ ಮಾಡುವ ತಂಡದ ಜತೆಗೆ ಅವರು ಪ್ರಯಾಣಿಸುವರೇ ಎಂಬುದೂ ಗೊತ್ತಿಲ್ಲ. ಅತ್ತ ಜಿಂಬಾಬ್ವೆ ಪ್ರವಾಸ ಹೋಗಿದ್ದ ಭಾರತ ತಂಡದ ಜತೆ ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಪ್ರಯಾಣಿಸಿದ್ದರು. ಒಂದು ವೇಳೆ ದ್ರಾವಿಡ್ ಅಲಭ್ಯರಾದರೆ ತಂಡವನ್ನು ನಿಭಾಯಿಸುವ ಹೊಣೆಗಾರಿಕೆ ಲಕ್ಷ್ಮಣ್ ಅವರ ಹೆಗಲೇರುವ ಸಾಧ್ಯತೆಗಳಿವೆ.
ಅಗಸ್ಟ್ ೨೮ರಂದು ಪಾಕಿಸ್ತಾನ ವಿರುದ್ಧ ನಡೆಯಲಿರುವ ಪಂದ್ಯವೇ ಏಷ್ಯಾ ಕಪ್‌ನಲ್ಲಿ ಭಾರತ ತಂಡಕ್ಕೆ ಮೊದಲ ಹಣಾಹಣಿ. ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಮ್‌ನಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಕಳೆದ ವರ್ಷ ಇದೇ ಸ್ಟೇಡಿಯಮ್‌ನಲ್ಲಿ ನಡೆದ ವಿಶ್ವ ಕಪ್ ಹಣಾಹಣಿಯ ಸೋಲಿಗೆ ಪ್ರತ್ಯುತ್ತರ ನೀಡಲು ಭಾರತ ಸಜ್ಜಾಗಿದೆ. ಏತನ್ಮಧ್ಯೆ, ಕೋಚ್‌ಗೆ ಕೊರೊನಾ ಸೋಂಕು ತಗುಲಿರುವ ಸುದ್ದಿ ಬಂದಿದೆ.
ಇದನ್ನೂ ಓದಿ | Asia Cup- 2022 | ಭಾರತ ತಂಡವನ್ನು ಕಾಡಿದ್ದ ಪಾಕ್ ಬೌಲರ್ ಏಷ್ಯಾ ಕಪ್ ಟೂರ್ನಿಯಿಂದ ಔಟ್