Site icon Vistara News

2036 Olympics: ಭಾರತದ ಒಲಿಂಪಿಕ್ಸ್ ಆತಿಥ್ಯ ಖಚಿತ!; ಐಒಸಿ ಜತೆ ಮಾತುಕತೆ

PT Usha at the IAAF World Athletics Championships Doha 2019

ನವದೆಹಲಿ: 2036ರ ಒಲಿಂಪಿಕ್ಸ್‌(2036 Olympics) ಕ್ರೀಡಾಕೂಟದ ಆತಿಥ್ಯಕ್ಕಾಗಿ ಭಾರತ ಬಿಡ್(2036 Olympic Games bid)​ ಸಲ್ಲಿಸಲಿದೆ ಎನ್ನುವ ಮಾತುಗಳು ಕಳೆದ ವರ್ಷದಿಂದಲೇ ಕೇಳಿ ಬರುತ್ತಿದೆ. ಇದೀಗ ಬಿಡ್ ಪ್ರಕ್ರಿಯೆ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (IOC) ಮುಂಬರುವ ಒಲಿಂಪಿಕ್ ಕೂಟಗಳ ಆತಿಥ್ಯದ ವ್ಯವಹಾರಗಳ ಕಮಿಷನರ್‌ ಜತೆ ಮಾತುಕತೆ ನಡೆಸಲಿದೆ ಎಂದು ಭಾರತ ಒಲಿಂಪಿಕ್ ಸಂಸ್ಥೆ (IOA) ಭಾನುವಾರ ತಿಳಿಸಿದೆ.

ಕಳೆದ ವರ್ಷ ಅಕ್ಟೋಬರ್ 14ರಂದು ಮುಂಬೈನಲ್ಲಿ ನಡೆದ ಐಒಸಿ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು 2036ರ ಕ್ರೀಡಾಕೂಟದ ಆತಿಥ್ಯ ವಹಿಸುವುದಾಗಿ ಘೋಷಿಸಿದ್ದರು. 40 ವರ್ಷಗಳ ನಂತರ ಭಾರತದಲ್ಲಿ ನಡೆಯುವ ಐಒಸಿಯ ಸಭೆ ಇದಾಗಿತ್ತು.  ಈ ಹಿಂದೆ 1983 ನವದೆಹಲಿ ಐಒಸಿ 86ನೇ ಆವೃತ್ತಿಯ ಅಧಿವೇಶನವನ್ನು ನಡೆಸಿತ್ತು.

ಇದನ್ನೂ ಓದಿ 2036 Olympics | 2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಭಾರತ ಬಿಡ್​ ಸಲ್ಲಿಸಲಿದೆ; ಅನುರಾಗ್​ ಠಾಕೂರ್​ ವಿಶ್ವಾಸ

“ಭಾರತದಲ್ಲಿ ಒಲಿಂಪಿಕ್ಸ್‌ ಆಯೋಜಿಸಲು ನಾವೆಲ್ಲ ಕಾಯುತ್ತಿದ್ದೇವೆ. ನಮ್ಮ ದೇಶದಲ್ಲಿ ಒಲಿಂಪಿಕ್ಸ್‌ ನಡೆಯಬೇಕು ಎಂಬುದು 140 ಕೋಟಿ ಜನರ ಕನಸಾಗಿದೆ. 2036ರ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಭಾರತದಲ್ಲಿಯೇ(INDIA OLYMPIC) ಆಯೋಜಿಸಲು ಸಕಲ ಪ್ರಯತ್ನ ಮಾಡಲಾಗುವುದು” ಎಂದು ಮೋದಿ ಹೇಳಿದ್ದಾರೆ. ಆ ಮೂಲಕ 2036ರ ಒಲಿಂಪಿಕ್ಸ್‌ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳುವುದನ್ನು ಪ್ರಧಾನಿ ಮೋದಿ ದೃಢಪಡಿಸಿದ್ದರು. ಇದೀಗ ಐಒಸಿ ಜತೆ ಔಪಚಾರಿಕ ಮಾತುಕತೆ ಪ್ರಾರಂಭಿಸಿದೆ ಎಂದು ಐಒಎ ಅಧಿಕೃತ ಹೇಳಿಕೆ ನೀಡುವ ಮೂಲಕ ಭಾರತವೂ ಪ್ರಪ್ರಥಮ ಬಾರಿಗೆ ಒಲಿಂಪಿಕ್ಸ್​ ಆತಿಥ್ಯ ವಹಿಸಿಕೊಳ್ಳುವ ಕಾಲ ಸನ್ನಿಹಿತವಾದಂತೆ ತೋರುತ್ತಿದೆ.

ಒಲಿಂಪಿಕ್ಸ್​ ಬಿಡ್​ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ ಐಒಎ ಅಧ್ಯಕ್ಷೆ ಪಿ.ಟಿ. ಉಷಾ(PT Usha), ‘2030ರ ಯೂತ್ ಒಲಿಂಪಿಕ್ಸ್ ಮತ್ತು 2036ರ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸುವ ಬಗ್ಗೆ ಐಒಸಿ ಜತೆ ಮಾತುಕತೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಕೆಲವು ವರದಿಗಳ ಪ್ರಕಾರ ಈಗಾಗಕೇ ಗುಜರಾತ್​ನಲ್ಲಿ 2036ರ ಒಲಿಂಪಿಕ್ಸ್‌ ಕೂಟ ನಡೆಸುವ ಸಲುವಾಗಿ ಜಾಗವನ್ನು ಮೀಸಲಿರಿಸಿ ಕ್ರೀಡಾಂಗಣದ ಕೆಲಸ ಕಾರ್ಯಗಳು ಆರಂಭಗೊಂಡಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಕೇವಲ ವರದಿಯಷ್ಟೇ.

Exit mobile version