Site icon Vistara News

IND vs SA 2nd Test: ಪಂದ್ಯ ಗೆದ್ದು ನೂತನ ದಾಖಲೆ ಬರೆದ ಭಾರತ ತಂಡ

Jasprit Bumrah celebrates the wicket of Keshav Maharaj

ಕೇಪ್​ ಟೌನ್​: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್​(IND vs SA 2nd Test) ಪಂದ್ಯದಲ್ಲಿ 7 ವಿಕೆಟ್​ಗಳ ಗೆಲುವು ಸಾಧಿಸಿದ ಭಾರತ ತಂಡ ನೂತನ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದಿದೆ. ಕೇಪ್​ ಟೌನ್​ನಲ್ಲಿ ಟೆಸ್ಟ್​ ಪಂದ್ಯ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಿದೆ.

ಇದುವರೆಗಿನ ಕ್ರಿಕೆಟ್​ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್​ ಟೌನ್​ನಲ್ಲಿ ಏಷ್ಯಾದ ಯಾವುದೇ ತಂಡ ಟೆಸ್ಟ್​ ಪಂದ್ಯದಲ್ಲಿ ಗೆಲುವು ಕಂಡಿರಲಿಲ್ಲ. ಇದೀಗ ಈ ಸಾಧನೆಯನ್ನು ಭಾರತ ತಂಡ ಮಾಡಿದೆ. ಅದು ಕೂಡ ಹೊಸ ವರ್ಷದ ಮೊದಲ ಪಂದ್ಯದಲ್ಲೇ ಎನ್ನುವುದು ವಿಶೇಷ. ಒಟ್ಟಾರೆಯಾಗಿ ದಕ್ಷಿಣ ಆಫ್ರಿಕಾದಲ್ಲಿ ಭಾರತಕ್ಕೆ ಒಲಿದ 5ನೇ ಟೆಸ್ಟ್ ಗೆಲುವು ಇದಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತದ ಟೆಸ್ಟ್​ ಗೆಲುವು


ಜೊಹಾನ್ಸ್​ಬರ್ಗ್​ನಲ್ಲಿ 123 ರನ್​ ಗೆಲುವು, (2006)

ಡರ್ಬನ್​ನಲ್ಲಿ 87 ರನ್​ಗಳ ಗೆಲುವು, (2010)

ಜೋಹಾನ್ಸ್​ಬರ್ಗ್​ನಲ್ಲಿ 63 ರನ್​ ಗೆಲುವು, (2018)

ಸೆಂಚುರಿಯನ್​ನಲ್ಲಿ 113 ರನ್​ ಗೆಲುವು, (2021)

ಕೇಪ್​ ಟೌನ್​ನಲ್ಲಿ 7 ವಿಕೆಟ್​ ಗೆಲುವು, (2024)

ಸರಣಿ ಸೋಲದ ಭಾರತ


ಭಾರತ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಡ್ರಾ ದಲ್ಲಿ ಅಂತ್ಯಗೊಳಿಸಿದೆ. ಜತೆಗೆ ಎರಡನೇ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಸೋಲು ಕಾಣದ ದಾಖಲೆ ಬರೆದಿದೆ. ಇದಕ್ಕೂ ಮುನ್ನ ಧೋನಿ ನಾಯಕತ್ವದಲ್ಲಿ 2010-11ರಲ್ಲಿ ಮೊದಲ ಬಾರಿ ಭಾರತ ಸರಣಿಯಲ್ಲಿ ಸಮಬಲದ ಗೌರವ ಕಂಡಿತ್ತು. ಅದು ಮೂರು ಪಂದ್ಯಗಳ ಸರಣಿಯಾಗಿತ್ತು. ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ ದ್ವಿತೀಯ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಅಂತಿಮ ಪಂದ್ಯ ಡ್ರಾಗೊಂಡಿತ್ತು. ಸರಣಿ 1-1 ಸಮಬಲದೊಂದಿಗೆ ಡ್ರಾ ಗೊಂಡಿತ್ತು.

ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಟೆಸ್ಟ್​ ಪಂದ್ಯ ಕೇವಲ ಎರಡನೇ ದಿನಕ್ಕೆ ಮುಕ್ತಾಯ ಕಂಡಿತು. ಗುರುವಾರ ಮೂರು ವಿಕೆಟ್ ನಷ್ಟಕ್ಕೆ 62 ರನ್ ಮತ್ತು 36 ಹಿನ್ನಡೆಯೊಂದಿಗೆ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ಐಡೆನ್​ ಮಾರ್ಕ್ರಮ್​ ಅವರ ಶತಕದ ಸಾಹಸದಿಂದ 176 ರನ್​ಗೆ ಆಲೌಟ್​ ಆಯಿತು. 79 ರನ್ ಗೆಲುವಿನ ಗುರಿ ಪಡೆದ ಭಾರತ 3 ವಿಕೆಟ್​ ನಷ್ಟಕ್ಕೆ 80 ರನ್​ ಬಾರಿಸಿ 7 ವಿಕೆಟ್​ ಗೆಲುವು ಸಾಧಿಸಿತು. ಈ ಮೂಲಕ ಸರಣಿಯನ್ನು ಡ್ರಾದೊಂದಿಗೆ ಮುಕ್ತಾಯಗೊಳಿಸಿತು. ಮೊದಲ ಪಂದ್ಯದಲ್ಲಿ ಇನಿಂಗ್ಸ್​ ಸೋಲಿಗೆ ತುತ್ತಾಗಿತ್ತು.

ಇದನ್ನೂ ಓದಿ IND vs SA: ದಿಟ್ಟ ಹೋರಾಟ ನೀಡಿ ಸರಣಿ ಸಮಬಲ ಸಾಧಿಸಿದ ಭಾರತ

79 ರನ್​ ಚೇಸಿಂಗ್​ ವೇಳೆ ಭಾರತ ಪರ ಯಶಸ್ವಿ ಜೈಸ್ವಾಲ್​ ಬಿರುಸಿನ ಬ್ಯಾಟಿಂಗ್ ನಡೆಸಿ 6 ಬೌಂಡರಿ ನೆರವಿನಿಂದ 28 ರನ್​ ಬಾರಿಸಿದರು. ಶುಭಮನ್​ ಗಿಲ್​ 10, ವಿರಾಟ್​ ಕೊಹ್ಲಿ 12 ರನ್​ಗೆ ವಿಕೆಟ್​ ಕೈಚೆಲ್ಲಿದರು. 75 ರನ್​ಗೆ ಮೂರು ವಿಕೆಟ್​ ಬಿದ್ದು ಗೆಲುವಿಗೆ ಕೇವಲ 4 ರನ್​ ಬೇಕಿದ್ದರೂ ಒಂದು ಕ್ಷಣ ಭಾರತೀಯ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಯಿತು. ಏಕೆಂದರೆ ಮೊದಲ ಇನಿಂಗ್ಸ್​ನಲ್ಲಿ ಭಾರತ 153 ರನ್​ಗೆ 4 ವಿಕೆಟ್​ ಬಿದ್ದ ಬಳಿಕ ಒಂದೂ ರನ್​ ಮಾಡದೆ 6 ವಿಕೆಟ್​ ಕಳೆದುಕೊಂಡು ಆಲೌಟ್​ ಆಗಿತ್ತು. ಹೀಗಾಗಿ ಅಭಿಮಾನಿಗಳಿಗೆ ಆತಂಕ ಉಂಟಾಗಿತ್ತು. ಆದರೆ ನಾಲ್ಕನೇ ವಿಕೆಟ್​ಗೆ ಬಂದ ಶ್ರೇಯಸ್​ ಅಯ್ಯರ್​ ಬೌಂಡರಿ ಬಾರಿಸಿ ಭಾರತದ ಗೆಲುವನ್ನು ಸಾರಿದರು. ನಾಯಕ ರೋಹಿತ್​ ಅಜೇಯ 17 ರನ್​ ಬಾರಿಸಿದರು.

ಶತಕ ಬಾರಿಸಿದ ಮಾರ್ಕ್ರಮ್

ದ್ವಿತೀಯ ದಿನದಾಟದಲ್ಲಿ ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಕೂಡ ಮಾರ್ಕ್ರಮ್​ ಅವರು ಏಕಾಂಗಿಯಾಗಿ ನಿಂತು ತಂಡದ ಮೊತ್ತವನ್ನು ಹಿಗ್ಗಿಸುತ್ತಿದ್ದರು. ಇದೇ ವೇಳೆ ಬುಮ್ರಾ ಅವರ ಓವರ್​ನಲ್ಲಿ ರಾಹುಲ್​ ಸುಲಭ ಕ್ಯಾಚ್​ ಕೈ ಚೆಲ್ಲುವ ಮೂಲಕ ಜೀವದಾನ ನೀಡಿದರು. ಇದರ ಲಾಭವೆತ್ತಿದ ಮಾರ್ಕ್ರಮ್​ ಶತಕವನ್ನು ಬಾರಿಸಿ ಸಂಭ್ರಮಿಸಿದರು. ಭಾರತೀಯ ಬೌಲರ್ ಗಳನ್ನು ದಂಡಿಸಿದ ಮಾರ್ಕ್ರಮ್ 103 ಎಸೆತಗಳಲ್ಲಿ 106 ರನ್ ಗಳಿಸಿ ಸಿರಾಜ್​ಗೆ ವಿಕೆಟ್​ ಒಪ್ಪಿಸಿದರು. ಅವರ ಶತಕದ ಇನಿಂಗ್ಸ್​ನಲ್ಲಿ 17 ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಯಿತು.

Exit mobile version