ಬೆಂಗಳೂರು : ಅಂಧರ ಟಿ20 ವಿಶ್ವ ಕಪ್ (Blind Cricket World Cup) ಫೈನಲ್ನಲ್ಲಿ ಬಾಂಗ್ಲಾದೇಶ ತಂಡವನ್ನು 120 ರನ್ಗಳಿಂದ ಮಣಿಸಿದ ಭಾರತ ತಂಡ ಚಾಂಪಿಯನ್ಪಟ್ಟ ಅಲಂಕರಿಸಿದೆ. ಇದು ಭಾರತಕ್ಕೆ ಲಭಿಸುತ್ತಿರುವ ಮೂರನೇ ವಿಶ್ವ ಕಪ್. ಈ ಹಿಂದೆ 2012, 2017ರಲ್ಲಿ ಭಾರತ ಅಂಧರ ತಂಡ ಟ್ರೋಪಿ ಎತ್ತಿ ಹಿಡಿದಿತ್ತು.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಜಯ್ ಕುಮಾರ್ ರೆಡ್ಡಿ ನೇತೃತ್ವದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 277 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ ಮೂರು ವಿಕೆಟ್ ನಷ್ಟಕ್ಕೆ 157 ರನ್ ಬಾರಿಸಲು ಶಕ್ತಗೊಂಡು ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಭಾರತ ಪರ ಆರಂಭಿಕ ಬ್ಯಾಟರ್ ಸುನೀಲ್ ರಮೇಶ್ (136) ಹಾಗೂ ಅಜಯ್ ಕುಮಾರ್ ರೆಡ್ಡಿ (100) ಸ್ಫೋಟಕ ಶತಕಗಳನ್ನು ಬಾರಿಸಿದರು. ಹೀಗಾಗಿ ಎದುರಾಳಿ ತಂಡಕ್ಕೆ ದೊಡ್ಡ ಮೊತ್ತದ ಗುರಿಯೊಡ್ಡಲು ಸಾಧ್ಯವಾಯಿತು. ಅದೇ ರೀತಿ ಭಾರತದ ಬೌಲರ್ಗಳು ಎದುರಾಳಿ ತಂಡದ ಬ್ಯಾಟರ್ಗಳನ್ನು ರನ್ ಗಳಿಸದಂತೆ ನಿಯಂತ್ರಿಸಿ ಗೆಲುವು ತಮ್ಮದಾಗಿಸಿಕೊಂಡರು.
ಪ್ರಶಸ್ತಿ ವಿಜೇತ ಭಾರತ ತಂಡ ಮೂರು ಲಕ್ಷ ರೂಪಾಯಿ ಬಹುಮಾನ ಗೆದ್ದರೆ, ರನ್ನರ್ಅಪ್ ಬಾಂಗ್ಲಾದೇಶ ತಂಡಕ್ಕೆ 1.5 ಲಕ್ಷ ರೂಪಾಯಿ ದೊರೆಯಿತು. ಕರ್ನಾಟಕದ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಣೆ ಮಾಡಿದರು.
ಗೆಲುವಿನ ಬಳಿಕ ಪ್ರತಿಕ್ರಿಯೆ ಕೊಟ್ಟ ಭಾರತ ತಂಡದ ನಾಯಕ ಅಜರ್ ಕುಮಾರ್ ರೆಡ್ಡಿ, ಮೂರನೇ ಬಾರಿ ಟ್ರೋಫಿ ಗೆದ್ದಿರುವುದು ಸಂತಸದ ಸಂಗತಿ. ಅಂತೆಯೇ ನಮ್ಮನ್ನು ಕೂಡ ಕ್ರೀಡಾಪಟುಗಳಂತೆ ನೋಡಿಕೊಳ್ಳಿ. ಅನುಕಂಪ ಬೇಡ, ಎಂದರು.
ಇದನ್ನೂ ಓದಿ | INDvsBAN | ಭಾರತವನ್ನು ಕಾಡಿದ ಬಾಂಗ್ಲಾದೇಶದ ಆರಂಭಿಕರು, ಇನ್ನೂ ಇದೆ ಗೆಲುವಿನ ಅವಕಾಶ