Site icon Vistara News

Asian Games : ಕಬಡ್ಡಿಯಲ್ಲಿ ಪಾಕ್ ತಂಡಕ್ಕೆ ಹೀನಾಯ ಸೋಲುಣಿಸಿ ಫೈನಲ್​ಗೇರಿದ ಭಾರತ ತಂಡ

Asian Games Kabaddi

ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ ನಲ್ಲಿ (Asian Games) ಈಗಾಗಲೇ ಹಾಕಿ, ವಾಲಿಬಾಲ್ ಮತ್ತು ಸ್ಕ್ವಾಷ್ ನಲ್ಲಿ ಭಾರತ-ಪಾಕಿಸ್ತಾನ ಕೆಲವು ಸ್ಮರಣೀಯ ಮುಖಾಮುಖಿಗಳನ್ನು ಕಂಡಿದೆ. ಎಲ್ಲದರಲ್ಲೂ ಭಾರತ ಮೇಲುಗೈ ಸಾಧಿಸಿದೆ. ಪಾಕಿಸ್ತಾನ ತಂಡವನ್ನು ನಿರಾಯಸವಾಗಿ ಸೋಲಿಸಿ ಭಾರತೀಯ ಕ್ರೀಡಾಪ್ರೇಮಿಗಳಿಗೆ ಖುಷಿ ಕೊಟ್ಟಿದ್ದಾರೆ. ಇದೀಗ ಕಬಡ್ಡಿ ತಂಡವೂ ಅದೇ ಹಾದಿಯಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಸೆಮಿಫೈನಲ್​ ಪಂದ್ಯದಲ್ಲಿ ಅಮೋಘ ವಿಜಯ ಸಾಧಿಸಿದೆ. ಎಲ್ಲ ವಿಭಾಗದಲ್ಲೂ ಅಧಿಕಾರಯುತ ಪ್ರದರ್ಶನ ನೀಡಿದ ಭಾರತ ತಂಡ 60-13 ಅಂಕಗಳ ಬೃಹತ್ ಅಂತರದ ವಿಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಭಾರತ ತಂಡ ಏಷ್ಯನ್​ ಗೇಮ್ಸ್​ನ ಫೈನಲ್​ಗೇರಿದೆ. ಅಲ್ಲದೆ, ಕನಿಷ್ಠ ಪಕ್ಷ ಬೆಳ್ಳಿಯ ಪದಕವೊಂದನ್ನು ಖಚಿತಪಡಿಸಿಕಕೊಂಡಿದೆ. ಭಾರತ ತಂಡವು ಎಂಟನೇ ಬಾರಿ ಏಷ್ಯನ್ ಗೇಮ್ಸ್​ನ ಫೈನಲ್​ಗೇರಿದ ಸಾಧನೆಯನ್ನೂ ಇದೇ ವೇಳೆ ಮಾಡಿದೆ. 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡಿತ್ತು. ಹೀಗಾಗಿ ಕಂಚಿನ ಪದಕವನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ಸ್ಮರಣೀಯ ಪ್ರದರ್ಶನ ನೀಡಿ ಫೈನಲ್​ಗೇರಿದೆ. ಇರಾನ್​ ಚೈನಿಸ್ ತೈಪೆ ನಡುವಿನ ಇನ್ನೊಂದು ಸೆಮಿಫೈನಲ್ ಪಂದ್ಯದ ವಿಜೇತರ ನಡುವೆ ಸ್ವರ್ಣ ಪದಕಕ್ಕಾಗಿ ಭಾರತ ಸೆಣಸಾಡಲಿದೆ.

ಪಂದ್ಯದ ಆರಂಭದಲ್ಲಿ ಪಾಕಿಸ್ತಾನ ತಂಡ 4-0 ಲೀಡ್​ ಪಡೆದುಕೊಂಡು ವಿಶ್ವಾಸದಿಂದ ಮುನ್ನಡೆದಿತ್ತು. ಆದರೆ, ಭಾರತ ತಂಡ ತನ್ನ ತಂತ್ರಗಳನ್ನು ಬಳಸಿ ಪಾಕಿಸ್ತಾನ ಕೋರ್ಟ್ ಖಾಲಿ ಮಾಡಲು ಶುರು ಮಾಡಿತು. ಆ ಬಳಿಕ ಶುರು ಮಾಡಿದ ದಾಳಿಯನ್ನು ಕೊನೇ ತನಕ ನಿಲ್ಲಿಸದೇ ಗೆಲುವು ಸಾಧಿಸಿತು.

ಇದನ್ನೂ ಓದಿ: Asian Games : ಕಂಚಿನ ಪದಕ ಗೆದ್ದು 41 ವರ್ಷದ ಬಳಿಕ ದಾಖಲೆ ಬರೆದ ಷಟ್ಲರ್​ ಪ್ರಣಯ್​

ಪ್ರಥಮಾರ್ಧ ಮುಕ್ತಾಯದ ವೇಳೆಗೆ ಭಾರತ ತಂಡ 35-5 ಅಂಕಗಳ ಬೃಹತ್​ ಮುನ್ನಡೆ ಪಡೆದುಕೊಂಡಿತ್ತು. ಈ ವೇಳೆಗಾಗಲೇ ಭಾರತದ ಗೆಲುವು ನಿಶ್ಚಯಗೊಂಡಿತ್ತು. ದ್ವಿತೀಯಾರ್ಧದಲ್ಲಿ ಮತ್ತಷ್ಟು ಜಿದ್ದಿನಿಂದ ಆಡಿದ ಭಾರತ ತಂಡ ಮತ್ತೆ 25 ಅಂಕಗಳನ್ನು ಪಡೆದುಕೊಂಡಿದೆ. ಅಲ್ಲದೇ ದ್ವಿತೀಯಾರ್ಧದಲ್ಲಿ ಎದುರಾಳಿ ತಂಡಕ್ಕೆ ಕೇವಲ 8 ಅಂಕಗಳನ್ನು ಮಾತ್ರ ಬಿಟ್ಟುಕೊಟ್ಟಿತು.

ಮಹಿಳೆಯರ ತಂಡವೂ ಫೈನಲ್​ಗೆ

ಸೆಮಿಫೈನಲ್ ಪಂದ್ಯದಲ್ಲಿ ನೇಪಾಳವನ್ನು 61-17 ಅಂಕಗಳಿಂದ ಮಣಿಸಿದ ಭಾರತ ಮಹಿಳಾ ಕಬಡ್ಡಿ ತಂಡ ಫೈನಲ್ ಪ್ರವೇಶಿಸಿದೆ.. ರಿಕರ್ವ್ ಬಿಲ್ಲುಗಾರಿಕೆ ತಂಡಗಳು ಸೆಮಿಫೈನಲ್ ಪಂದ್ಯಗಳಲ್ಲಿ ಬಾಂಗ್ಲಾದೇಶವನ್ನು ಗೌರವಯುತವಾಗಿ ಸೋಲಿಸಿದ ಭಾರತ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದೆ. ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದಲ್ಲಿ ಹಿರಿಯ ಕುಸ್ತಿಪಟು ಬಜರಂಗ್ ಪೂನಿಯಾ ಸೆಮಿಫೈನಲ್ ಪಂದ್ಯದಲ್ಲಿ ಸೋತು ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ. ಬಿಲ್ಲುಗಾರಿಕೆಯಲ್ಲಿ ಮಹಿಳಾ ರಿಕರ್ವ್ ತಂಡವು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ವಿಯೆಟ್ನಾಂ ತಂಡವನ್ನು ಸೋಲಿಸಿತು. ಋತುರಾಜ್ ಗಾಯಕ್ವಾಡ್ ನೇತೃತ್ವದ ಪುರುಷರ ಕ್ರಿಕೆಟ್ ತಂಡವು ಏಷ್ಯನ್ ಕ್ರೀಡಾಕೂಟದ ಫೈನಲ್ಗೆ ಪ್ರವೇಶಿಸಿತು, ರಾಷ್ಟ್ರಕ್ಕೆ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿತು.

Exit mobile version