Site icon Vistara News

Ind vs wi : ಮಳೆಯ ಅಡಚಣೆ ನಡುವೆಯೂ ಭಾರತಕ್ಕೆ 301 ರನ್​ಗಳ ಮುನ್ನಡೆ

Mohammed Siraj

ಪೋರ್ಟ್​ ಆಫ್​ ಸ್ಪೇನ್​: ವೆಸ್ಟ್​ ಇಂಡೀಸ್ ಪ್ರವಾಸದ ಎರಡನೇ ಟೆಸ್ಟ್​ ಪಂದ್ಯದ ನಾಲ್ಕನೇ ದಿನವೂ ಮಳೆಯ ಅಡಚಣೆ ಉಂಟಾಗಿದೆ. ಆದಾಗ್ಯೂ ಭಾರತ ತಂಡ ಪಂದ್ಯದಲ್ಲಿ ಮಳೆಯಿಂದ ಪಂದ್ಯ ನಿಲ್ಲುವ ಮೊದಲು 301 ರನ್​ಗಳ ಮುನ್ನಡೆಯನ್ನು ಪಡೆದುಕೊಂಡಿದೆ. ಆತಿಥೇಯ ವೆಸ್ಟ್​ ಇಂಡೀಸ್ ತಂಡವನ್ನು ಮೊದಲ ಇನಿಂಗ್ಸ್​ನಲ್ಲಿ 255 ರನ್​ಗಳಿಗೆ ಕಟ್ಟಿ ಹಾಕಿದ್ದಲ್ಲದೆ, ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿ ಅತಿವೇಗದಲ್ಲಿ 118 ರನ್​ ಗಳಿಸಿದೆ. ಅದರೆ, ಮಳೆಯ ಕಾರಣಕ್ಕೆ ಪಂದ್ಯ ನಿಂತಿದೆ. ಇನ್ನೂ ಒಂದು ದಿನದ ಆಟ ಬಾಕಿ ಇರುವ ಕಾರಣ ಮಳೆ ಬಾರದೇ ಹೋದರೆ ಭಾರತ ತಂಡಕ್ಕೆ ಜಯ ಸಿಗುವ ಸಾಧ್ಯತೆಗಳು ಇವೆ.

ಪಂದ್ಯದ ನಾಲ್ಕನೇ ದಿನದ ಬೆಳಗ್ಗಿನ ಅವಧಿಯಲ್ಲಿ ಭಾರತ ತಂಡದ ಬೌಲರ್​ಗಳು ಮಾರಕ ದಾಳಿ ಸಂಘಟಿಸಿದರು. ಹೀಗಾಗಿ ಮೂರನೇ ದಿನ 229 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡ ನಾಲ್ಕೇ ದಿನ ಅದಕ್ಕೆ ಕೇವಲ 27 ರನ್​ ಸೇರಿಸಿ ಆಲ್ಔಟ್​ ಆಯಿತು. ಮೊಹಮ್ಮದ್ ಸಿರಾಜ್​ ಬಿರುಸಿನ ದಾಳಿ ನಡೆಸಿ 60 ರನ್​ಗಳನ್ನು ನೀಡಿ 5 ವಿಕೆಟ್ ಉರುಳಿಸಿದರು.

ರೋಹಿತ್ ಅರ್ಧ ಶತಕ

183 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್​ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶಿಸಿತು. ನಾಯಕ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 44 ಎಸೆತಗಳಲ್ಲಿ 57 ರನ್ ಬಾರಿಸಿದರು. ಜೈಸ್ವಾಲ್​ ಕೂಡ 30 ಎಸೆತಗಳಲ್ಲಿ 38 ರನ್ ಬಾರಿಸಿದರು. ಇವರಿಬ್ಬರು ಮೊದಲ ವಿಕೆಟ್​ಗೆ 98 ರನ್ ಬಾರಿಸುವ ಮೂಲಕ ತಂಡದ ರನ್​ ಮುನ್ನಡೆಯನ್ನು ಹಿಗ್ಗಿಸಿದರು. ಶುಭ್​ಮನ್​ ಗಿಲ್​ (10) ಹಾಗೂ ಇಶಾನ್​ ಕಿಶನ್​ (8) ಕ್ರೀಸ್​ನಲ್ಲಿ ಇದ್ದಾರೆ.

ಇದನ್ನೂ ಓದಿ : Ashes 2023 : ಇಂಗ್ಲೆಂಡ್​ ತಂಡದ ಗೆಲುವಿಗೆ ಮಳೆಯ ಅಡ್ಡಿ; ಮೂರನೇ ಪಂದ್ಯ ಡ್ರಾದಲ್ಲಿ ಅಂತ್ಯ

ಎರಡು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡದ ಭರ್ಜರಿ ಗೆಲುವು ದಾಖಲಿಸಿತ್ತು. ಎರಡನೇ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳುವುದು ಭಾರತ ತಂಡದ ಉದ್ದೇಶವಾಗಿತ್ತು. ಆದರೆ ಸತತವಾಗಿ ಸುರಿಯುತ್ತಿರುವ ಮಳೆ ಭಾರತದ ಗೆಲುವಿನ ಆಸೆಗೆ ಅಡ್ಡಿಪಡಿಸುವ ಸಾಧ್ಯತೆಗಳು ಇವೆ. ಭಾರತದ ಬ್ಯಾಟಿಂಗ್ ಹಾಗೂ ಬೌಲಿಂಗ್ ಗೆಲುವಿಗೆ ಪೂರಕವಾಗಿರುವ ಹೊರತಾಗಿಯೂ ಹವಾಮಾನದ ಬೆಂಬಲ ದೊರೆಯುತ್ತಿಲ್ಲ. ಮೂರನೇ ದಿನ ಹಾಗೂ ನಾಲ್ಕನೇ ದಿನ ಮಳೆ ಸುರಿಯದೇ ಹೋಗಿದ್ದರೆ ಭಾರತ ತಂಡದ ಗೆಲುವು ಬಹುತೇಕ ನಿಶ್ಚಿತವಾಗಿತ್ತು. ಕ್ಲೀನ್​ ಸ್ವೀಪ್​ ಸಾಧನೆಯೊಂದಿಗೆ ಮುಂದಿನ ಸರಣಿಗೆ ಭಾರತ ತಂಡ ಸಜ್ಜಾಗುತ್ತಿತ್ತು.

Exit mobile version