Site icon Vistara News

England Tour : ಭಾರತಕ್ಕೆ 257 ರನ್‌ ಮುನ್ನಡೆ

england tour

ಬರ್ಮಿಂಗ್‌ಹ್ಯಾಮ್‌: ಬೌಲರ್‌ಗಳ ಸಂಘಟಿತ ಹೋರಾಟದ ನೆರವು ಪಡೆದ ಪ್ರವಾಸಿ ಭಾರತ ತಂಡ ಮರುನಿಗದಿತ ಐದನೇ ಟೆಸ್ಟ್‌ ಪಂದ್ಯದಲ್ಲಿ (England Tour) ಇಂಗ್ಲೆಂಡ್‌ ವಿರುದ್ಧ ೨೫೭ ರನ್‌ಗಳ ಮುನ್ನಡೆ ಪಡೆದಿದೆ.

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರದ ಅಂತ್ಯಕ್ಕೆ ಭಾರತ ತಂಡ ಎರಡನೇ ಇನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿ ೩ ವಿಕೆಟ್‌ ಕಳೆದುಕೊಂಡು ೧೨೫ ರನ್‌ ಬಾರಿಸಿದೆ. ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ (೫೦) ಶತಕ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಅದಕ್ಕಿಂತ ಮೊದಲು ಇಂಗ್ಲೆಂಡ್‌ ತಂಡವನ್ನು ೨೮೪ ರನ್‌ಗಳಿಗೆ ಕಟ್ಟಿ ಹಾಕಿ ೧೩೨ ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಎರಡನೇ ಇನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಶುಬ್ಮನ್‌ ಗಿಲ್‌ (೪) ವಿಕೆಟ್‌ ಪತನದೊಂದಿಗೆ ಅರಂಭಿಕ ಆಘಾತ ಉಂಟಾಯಿತು. ಬಳಿಕ ಬಂದ ಹನುಮ ವಿಹಾರಿ ೧೧ ರನ್‌ಗಳಿಗೆ ಗಂಟು ಮೂಟೆ ಕಟ್ಟಿದರು. ವಿರಾಟ್‌ ಕೊಹ್ಲಿಯೂ ಫಾರ್ಮ್‌ ಕಂಡುಕೊಳ್ಳದೇ ೨೦ ರನ್‌ಗಳಿಗೆ ಔಟಾಗಿ ಡಗ್‌ಔಟ್‌ ಕಡೆಗೆ ಮರಳಿದರು. ಮೊದಲ ಇನಿಂಗ್ಸ್‌ನ ಶತಕ ವೀರ ರಿಷಭ್‌ ಪಂತ್‌ ೩೦ ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಬೈರ್‌ಸ್ಟೋವ್‌ ಶತಕ

ಎರಡನೇ ದಿನ ೮೪ ರನ್‌ಗಳಿಗೆ ೫ ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಜಾನಿ ಬೈರ್‌ಸ್ಟೋವ್‌ ನೆರವಾದರು. ಭಾರತೀಯ ಬೌಲರ್‌ಗಳಿಗೆ ಸಡ್ಡು ಹೊಡೆದ ಅವರು ೧೦೬ ರನ್‌ ಬಾರಿಸಿ ತಂಡದ ಮರ್ಯಾದೆ ಕಾಪಾಡಿದರು. ಈ ಮೂಲಕ ಅವರು ಸತತ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಶತಕ ಬಾರಿಸಿದ ಖ್ಯಾತಿ ಗಳಿಸಿದರು. ಈ ಹಿಂದೆ ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ ಎರಡು ಪಂದ್ಯಗಳಲ್ಲಿ ಮೂರಂಕಿ ಸಾಧನೆ ಮಾಡಿದ್ದರು. ಬೆನ್‌ ಸ್ಟೋಕ್ಸ್‌ ಹಾಗೂ ಸ್ಯಾಮ್‌ ಬಿಲ್ಲಿಂಗ್ಸ್‌ ಅವರ ೩೬ ರನ್‌ಗಳ ಕೊಡುಗೆಯೊಂದಿಗೆ ಆತಿಥೇಯ ಬಳಗ ೨೮೪ ರನ್‌ಗಳನ್ನು ಪೇರಿಸಿತು.

ಭಾರತ ತಂಡದ ಪರ ಮೊಹಮ್ಮದ್‌ ಸಿರಾಜ್‌ ೬೬ಕ್ಕೆ ೪ ವಿಕೆಟ್‌ ಕಬಳಿಸಿದರೆ, ಬುಮ್ರಾ ೩ ವಿಕೆಟ್‌ ತಮ್ಮದಾಗಿಸಿಕೊಂಡರು. ಮೊಹಮ್ಮದ್‌ ಶಮಿ ೨ ಹಾಗೂ ಶಾರ್ದುಲ್‌ ಠಾಕೂರ್‌ ೧ ವಿಕೆಟ್‌ ಪಡೆದರು.

ಸ್ಕೋರ್‌ ವಿವರ

ಭಾರತ ಮೊದಲ ಇನಿಂಗ್ಸ್‌: ೪೧೬

ಇಂಗ್ಲೆಂಡ್‌ ಮೊದಲ ಇನಿಂಗ್ಸ್‌: ೬೧.೩ ಓವರ್‌ಗಳಲ್ಲಿ ೨೮೪ ( ಜಾನಿ ಬೈರ್‌ಸ್ಟೋವ್‌ ೧೦೬, ಸ್ಯಾಮ್‌ ಬಿಲಿಂಗ್ಸ್‌ ೩೬, ಬೆನ್‌ ಸ್ಟೋಕ್ಸ್‌ ೨೫; ಮೊಹಮ್ಮದ್‌ ಸಿರಾಜ್‌ ೬೬ಕ್ಕೆ ೪, ಜಸ್‌ಪ್ರಿತ್‌ ಬುಮ್ರಾ ೬೮ಕ್ಕೆ೩, ಮೊಹಮ್ಮದ್‌ ಸಿರಾಜ್‌ ೭೮ಕ್ಕೆ೨)

ಭಾರತ ಎರಡನೇ ಇನಿಂಗ್ಸ್‌: ೪೫ ಓವರ್‌ಗಳಲ್ಲಿ ೩ ವಿಕೆಟ್‌ಗೆ ೧೨೫ (ಚೇತೇಶ್ವರ್‌ ಪೂಜಾರ ೫೦ ಬ್ಯಾಟಿಂಗ್‌, ರಿಷಭ್‌ ಪಂತ್‌ ೩೦ ಬ್ಯಾಟಿಂಗ್‌, ವಿರಾಟ್‌ ಕೊಹ್ಲಿ ೨೦; ಆಂಡರ್ಸನ್‌ ೨೬ಕ್ಕೆ೧, ಸ್ಟುವರ್ಟ್‌ ಬ್ರಾಡ್‌ ೩೮ಕ್ಕೆ೧, ಬೆನ್‌ ಸ್ಟೋಕ್ಸ್‌ ೨೨ಕ್ಕೆ೧).

ಇದನ್ನೂ ಓದಿ: England Tour : ಬುಮ್ರಾ ಹೆಸರಿಗಷ್ಟೇ ನಾಯಕನಾ?

Exit mobile version