Site icon Vistara News

IND vs SA : ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಸೋಲು, ಸರಣಿ 1-1 ಸಮಬಲ

Tony zorzi

ಗ್ಕೆಬರ್ಹಾ (ದ. ಆಫ್ರಿಕಾ): ಇಲ್ಲಿನ ಪೋರ್ಟ್ ಎಲಿಜಬೆತ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಪ್ರವಾಸದ (IND vs SA) ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್​ಗಳ ಸೋಲಿಗೆ ಒಳಗಾಗಿದೆ. ಭಾರತ ತಂಡ ಮೊದಲ ಪಂದ್ಯವನ್ನು ಗೆದ್ದಿದ್ದ ಕಾರಣ ಸರಣಿಯು 1-1 ಅಂತರದಿಂದ ಸಮಬಲಗೊಂಡಿದೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್​ ನಾಂಡ್ರೆ ಬರ್ಗರ್ (30 ರನ್​ಗೆ 3 ವಿಕೆಟ್​) ಅವರ ಮಾರಕ ಸ್ಪೆಲ್ ಮತ್ತು ಟೋನಿ ಡಿ ಜೊರ್ಜಿ (119 ರನ್​) ಅವರ ಅಮೋಘ ಶತಕದ ಆಟಕ್ಕೆ ಭಾರತ ತಂಡ ತಲೆಬಾಗಿತು.

ಇಲ್ಲಿನ ಸೇಂಟ್ ಜಾರ್ಜ್ಸ್ ಪಾರ್ಕ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತ ಭಾರತ ಮೊದಲು ಬ್ಯಾಟ್ ಮಾಡಿ 46.2 ಓವರ್​ಗಳಲ್ಲಿ 211 ರನ್​ಗಳ ಸಾಧಾರಣ ಮೊತ್ತಕ್ಕೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆತಿಥೇಯ ತಂಡ ಇನ್ನೂ 45 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್​ ಕಳೆದುಕೊಂಡು 215 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಕಳಪೆ ಪ್ರದರ್ಶನ ನೀಡಿತು. ಕೆಲವು ದಿನಗಳ ಹಿಂದೆ ಜೊಹಾನ್ಸ್​ಬರ್ಗ್​ನಲ್ಲಿ ನಡೆದ ಚೊಚ್ಚಲ ಏಕದಿನ ಪಂದ್ಯದಲ್ಲಿ ವಿಕೆಟ್ ಪಡೆಯದ ನಾಂಡ್ರೆ ಬರ್ಗರ್, ಪಂದ್ಯದ ಎರಡನೇ ಎಸೆತದಲ್ಲಿ ಭಾರತದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿದರು. ದಕ್ಷಿಣ ಆಫ್ರಿಕಾದ ವೇಗಿ ಎಸೆದ 12 ನೇ ಓವರ್ ತಿಲಕ್ ವರ್ಮಾ ಔಟಾದರು. ಅವರ ಗಳಿಕೆ 10 ರನ್​. ಭಾರತದ ಯುವ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಮೂರನೇ ವಿಕೆಟ್​ಗೆ ನಾಯಕ ಕೆಎಲ್ ರಾಹುಲ್ ಅವರೊಂದಿಗೆ 68 ರನ್​ಗಳ ಜೊತೆಯಾಟ ನೀಡಿದರು. ಆದರೆ ಲಿಜಾದ್ ವಿಲಿಯಮ್ಸ್ ಅವರ ಎಸೆತಕ್ಕೆ ಸಾಯಿ ಔಟಾದರು.

ಇದನ್ನೂ ಓದಿ : IPL 2024 Auction : ಮಿನಿ ಹರಾಜಿನ ಐದು ದುಬಾರಿ ಆಟಗಾರರು ಇವರು

ಆಫ್ರಿಕಾ ವೇಗಿ ಬ್ಯೂರನ್ ಹೆಂಡ್ರಿಕ್ಸ್ ಸಂಜು ಸ್ಯಾಮ್ಸನ್ ಅವರ ಅಮೂಲ್ಯ ವಿಕೆಟ್ ಸೇರಿದಂತೆ ಎರಡು ವಿಕೆಟ್ ಪಡೆದರು. ಸ್ಪಿನ್ನರ್​ಗಳಾದ ಕೇಶವ್ ಮಹಾರಾಜ್ ಮತ್ತು ಐಡೆನ್ ಮಾರ್ಕ್ರಮ್ ಮೂರು ವಿಕೆಟ್​ಗಳನ್ನು ಹಂಚಿಕೊಳ್ಳುವ ಮೂಲಕ ಭಾರತದ ಬ್ಯಾಟಿಂಗ್ ಬಲ ಕುಗ್ಗಿಸಿದರು. ಬರ್ಗರ್ ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದರು. ಅರ್ಷ್ದೀಪ್ ಸಿಂಗ್ 18 ರನ್​ಗಳ ನೆರವಿನಿಂದ ಭಾರತ ಅಲ್ಪ ಮೊತ್ತಕ್ಕೆ ಔಟಾಯಿತು.

ರೀಜಾ ಟೋನಿ ಶತಕದ ಜತೆಯಾಟ

ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರರಾದ ರೀಜಾ ಹೆಂಡ್ರಿಕ್ಸ್ ಮತ್ತು ಟೋನಿ ಡಿ ಜೋರ್ಜಿ ತಮ್ಮ 212 ರನ್ಗಳ ಗುರಿಯಲ್ಲಿ 130 ರನ್​ಗಳನ್ನು ಗಳಿಸಿ ಶತಕದ ಜತೆಯಾಟವಾಡಿದರು. ಹೆಂಡ್ರಿಕ್ಸ್ ಅವರನ್ನು ಅರ್ಶ್​ದೀಪ್​ ಸಿಂಗ್ ಔಟ್ ಮಾಡಿದರು. ಅದಕ್ಕಿಂತ ಮೊದಲು 52 ರನ್ ಬಾರಿಸಿದ್ದರು. ಅವರ ಪಾಲುದಾರ ಜೋರ್ಜಿ ಒಂಬತ್ತು ಬೌಂಡರಿಗಳು ಮತ್ತು ಆರು ಸಿಕ್ಸರ್​ಗಳ ಸಮೇತ ಚೊಚ್ಚಲ ಏಕದಿನ ಶತಕವನ್ನು ಗಳಿಸಿದರು.

26ರ ಹರೆಯದ ಜೊರ್ಜಿ 122 ಎಸೆತಗಳಲ್ಲಿ 119* ರನ್ ಗಳಿಸಿದರೆ, ಮೂರನೇ ಕ್ರಮಾಂಕದ ರಾಸ್ಸಿ ವಾನ್ ಡೆರ್ ಡುಸೆನ್ (36) ರಿಂಕು ಸಿಂಗ್ ಸಿಂಗ್ ಬೌಲಿಂಗ್​ಗೆ ಔಟಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ಮತ್ತು 7.3 ಓವರ್ ಗಳು ಬಾಕಿ ಇರುವಾಗಲೇ ಭಾರತದ ಮೊತ್ತವನ್ನು ದಾಟಿತು.

ಡಿಸೆಂಬರ್ 21 ರಂದು ನಡೆಯಲಿರುವ ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಇತ್ತಂಡಗಳು ಬೋಲ್ಯಾಂಡ್​​ ಪಾರ್ಲ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

Exit mobile version