ಪುಣೆ: ಸೂರ್ಯಕುಮಾರ್ ಯಾದವ್ (51) ಹಾಗೂ ಅಕ್ಷರ್ ಪಟೇಲ್ (65) ಅವರ ಸ್ಫೋಟಕ ಅರ್ಧ ಶತಕಗಳ ಹೋರಾಟದ ಹೊರತಾಗಿಯೂ ಶ್ರೀಲಂಕಾ ವಿರುದ್ಧದ (INDvsSL) ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ 16 ರನ್ಗಳಿಂದ ಸೋಲಿಗೆ ಒಳಗಾಯಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿ 1-1 ಅಂತರದಿಂದ ಸಮಬಲದ ಸಾಧನೆ ಮಾಡಿತು. ಮೂರನೇ ಪಂದ್ಯದಲ್ಲಿ ಸರಣಿ ವಿಜೇತರ ನಿರ್ಣಯವಾಗಲಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ದಸುನ್ ಶನಕ ನೇತೃತ್ವದ ಶ್ರೀಲಂಕಾ ಬಳಗ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತು. ಪ್ರತಿಯಾಗಿ ಆಡಿದ ಭಾರತ ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 190 ರನ್ ಗಳಿಸಲು ಶಕ್ತಗೊಂಡು ಸೋಲೊಪ್ಪಿಕೊಂಡಿತು.
ಭಾರತ ಪರ ಆರಂಭಿಕ ಬ್ಯಾಟರ್ಗಳು ಸಂಪೂರ್ಣ ವೈಫಲ್ಯ ಕಂಡರು. ಇಶಾನ್ ಕಿಶನ್ (2), ಶುಬ್ಮನ್ ಗಿಲ್ (5) ಬೇಗನೆ ವಿಕೆಟ್ ಒಪ್ಪಿಸಿದರು. ಪದಾರ್ಪಣೆ ಪಂದ್ಯವಾಡಿದ ರಾಹುಲ್ ತ್ರಿಪಾಠಿ 5 ರನ್ಗಳಿಗೆ ಸೀಮಿತಗೊಂಡರು. ಬಳಿಕ ಬಂದ ಸೂರ್ಯಕುಮಾರ್ ಅರ್ಧ ಶತಕ ಸಿಡಿಸಿದರೆ ಹಾರ್ದಿಕ್ ಪಾಂಡ್ಯ 12 ರನ್ಗಳಿಗೆ ಔಟಾದರು. ಅಕ್ಷರ್ ಕೊನೇ ತನಕ ಹೋರಾಟ ನಡೆಸಿದರೂ ಅವರಿಗೆ ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಅದಕ್ಕಿಂತ ಮೊದಲು ಬ್ಯಾಟಿಂಗ್ ಆರಂಭಿಸಿದ ಲಂಕಾ ತಂಡಕ್ಕೆ ಆರಂಭಿಕ ಬ್ಯಾಟರ್ಗಳಾದ ಪಾಥಮ್ ನಿಸ್ಸಂಕ (33) ಹಾಗೂ ಕುಸಲ್ ಮೆಂಡಿಸ್ (52) ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 80 ರನ್ಗಳ ಜತೆಯಾಟ ನೀಡಿತು. ಭಾರತ ತಂಡ ಎದುರಾಳಿ ಬ್ಯಾಟರ್ಗಳಿಗೆ ಕಡಿವಾಣ ಹಾಕಿದರು. ಭಾನುಕಾ ರಾಜಪಕ್ಷ (3), ಧನಂಜಯ ಡಿ ಸಿಲ್ವಾ (3) ವಿಕೆಟ್ ಬೇಗನೆ ಔಟಾದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಚರಿತ್ ಅಸಲಂಕಾ (37) ಸ್ವಲ್ಪ ಹೊತ್ತು ಸಿಡಿದರು.. ಕೊನೆಯಲ್ಲಿ ನೋ ಬಾಲ್ ಜೀವದಾನ ಸಮೇತ ನಾಯಕ ದಸುನ್ ಶನಕ ಸ್ಫೋಟಕ ಬ್ಯಾಟಿಂಗ್ ನಡೆಸಿ 22 ಎಸೆತಗಳಿಗೆ 56 ರನ್ ಬಾರಿಸಿದರು.
ಸ್ಕೋರ್ ವಿವರ
ಶ್ರೀಲಂಕಾ : 20 ಓವರ್ಗಳಲ್ಲಿ 6 ವಿಕೆಟ್ಗೆ 20 ( ಕುಸಲ್ ಮೆಂಡಿಸ್ 52, ದಸುನ್ ಶನಕ 56, ಚರತ್ ಅಸಲಂಕಾ 37; ಉಮ್ರಾನ್ ಮಲಿಕ್ 48ಕ್ಕೆ3, ಅಕ್ಷರ್ ಪಟೇಲ್ 24ಕ್ಕೆ2).
ಭಾರತ: 20 ಓವರ್ಗಳಲ್ಲಿ 8 ವಿಕೆಟ್ಗೆ 190 (ಸೂರ್ಯಕುಮಾರ್ ಯಾದವ್ 51, ಅಕ್ಷರ್ ಪಟೇಲ್ 65, ದಸುನ್ ಶನಕ 4ರನ್ಗಳಿಗೆ 2 ವಿಕೆಟ್).
ಇದನ್ನೂ ಓದಿ | Arshdeep Singh | ಮೊದಲ ಓವರ್ನಲ್ಲೇ 3 ನೋ ಬಾಲ್; ಕಳಪೆ ದಾಖಲೆ ಬರೆದ ಯುವ ಬೌಲರ್ ಅರ್ಶ್ದೀಪ್ ಸಿಂಗ್