ನವ ದಹೆಲಿ : ಜಿಂಬಾಬ್ವೆ ವಿರುದ್ಧದ ಏಕದಿನ (IND vs ZIM ODI) ಸರಣಿಯಲ್ಲಿ ಆಡಲಿರುವ ಭಾರತ ತಂಡ ಶನಿವಾರ ಬೆಳಗ್ಗೆ ಜಿಂಬಾಬ್ವೆಗೆ ಪ್ರಯಾಣ ಬೆಳೆಸಿತು. ಕನ್ನಡಿಗ ಕೆ.ಎಲ್ ರಾಹುಲ್ ನೇತೃತ್ವದಲ್ಲಿ ೧೭ ಆಟಗಾರರು ಸರಣಿಗೆ ಆಯ್ಕೆಯಾಗಿದ್ದು, ಕೋಚ್ ಲಕ್ಷ್ಮಣ್ ಅವರೊಂದಿಗೆ ಏಕದಿನ ಸರಣಿಗಾಗಿ ಪ್ರಯಾಣ ಆರಂಭಿಸಿತು. ಸರಣಿಯ ಮೊದಲ ಪಂದ್ಯ ಆಗಸ್ಟ್ ೧೮ರಂದು ನಡೆದರೆ, ೨೦ ಹಾಗೂ ೨೨ರಂದು ಉಳಿದೆರಡು ಪಂದ್ಯಗಳು ನಡೆಯಲಿವೆ.
ಬಿಸಿಸಿಐ ಸಾಮಾಜಿಕ ಜಾಲತಾಣಗಳಲ್ಲಿ ಆಟಗಾರರು ಜಿಂಬಾಬ್ವೆಗೆ ತೆರಳಿದ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಪ್ರಸಿದ್ಧ್ ಕೃಷ್ಣ, ದೀಪಕ್ ಚಾಹರ್, ಶಿಖರ್ ಧವನ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಸಿರಾಜ್, ರುತುರಾಜ್ ಗಾಯಕ್ವಾಡ್ ಹಾಗೂ ರಾಹುಲ್ ತ್ರಿಪಾಠಿ ಚಿತ್ರದಲ್ಲಿದ್ದಾರೆ.
Zimbabwe 🇿🇼 bound! ✈️#TeamIndia | #ZIMvIND pic.twitter.com/GKsofzEvRe
— BCCI (@BCCI) August 12, 2022
ಭಾರತ ತಂಡ ಇಂಗ್ಲೆಂಡ್‌ಗೆ ಪ್ರವಾಸ ತೆರಳಿದ್ದ ವೇಳೆ, ಎರಡನೇ ತಂಡ ಐರ್ಲೆಂಡ್‌ಗೆ ಟಿ೨೦ ಸರಣಿಗಾಗಿ ಹೋಗಿತ್ತು. ಈ ವೇಳೆ ವಿವಿಎಸ್ ಲಕ್ಷ್ಮಣ್ ಅವರು ಕೋಚ್ ಆಗಿ ಪ್ರವಾಸಕ್ಕೆ ತೆರಳಿದ್ದರು. ಈ ಸರಣಿಯನ್ನು ೨-೦ ಅಂತರದಿಂದ ಭಾರತ ಕೈವಶ ಮಾಡಿಕೊಂಡಿತ್ತು.
ಆ ಬಳಿಕ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯಗಳ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ಅದಲ್ಲದೆ, ಐದು ಪಂದ್ಯಗಳ ಟಿ೨೦ ಸರಣಿಯಲ್ಲಿ ೪-೧ ಸಾಧನೆ ಮಾಡಿದೆ. ಇದೀಗ ಭಾರತ ಮುಂಬರುವ ಏಷ್ಯಾ ಕಪ್ ಟಿ೨೦ ಟೂರ್ನಿಗಾಗಿ ಸಿದ್ಧತೆ ನಡೆಸುತ್ತಿದೆ. ಏತನ್ಮಧ್ಯೆ ಪ್ರಮುಖ ಆಟಗಾರರನ್ನು ಹೊರತುಪಡಿಸಿದ ತಂಡವೊಂದು ಜಿಂಬಾಬ್ವೆಗೆ ಪ್ರವಾಸ ತೆರಳಿದೆ. ಈ ತಂಡದಲ್ಲಿ ಇರುವ ಕೆಲವು ಆಟಗಾರರು ಏಷ್ಯಾ ಕಪ್‌ಗೂ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರು ಸರಣಿ ಮುಗಿಸಿ ನೇರವಾಗಿ ಯುಎಇಗೆ ತೆರಳಲಿದ್ದಾರೆ.
ಜಿಂಬಾಬ್ವೆ ಸರಣಿಯು ಐಸಿಸಿ ವಿಶ್ವ ಕಪ್ ಸೂಪರ್ ಲೀಗ್‌ನ ಭಾಗವೂ ಆಗಿದೆ. ಹೀಗಾಗಿ ಆತಿಥೇಯ ಜಿಂಬಾಬ್ವೆ ತಂಡಕ್ಕೆ ಈ ಸರಣಿಯಿಂದಾಗಿ ಹೆಚ್ಚಿನ ಲಾಭವಾಗಲಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕ ದಿನ ವಿಶ್ವ ಕಪ್‌ಗೆ ನೇರ ಪ್ರವೇಶ ಪಡೆಯಲು ಅವಕಾಶ ಸಿಗಲಿದೆ.
ರಾಹುಲ್‌ಗೂ ಸವಾಲು
ಭಾರತ ತಂಡಕ್ಕೆ ಕೆ. ಎಲ್ ರಾಹುಲ್ ನಾಯಕರಾಗಿ ಆಯ್ಕೆಯಾಗಿದ್ದು, ಅವರಿಗೂ ಈ ಸರಣಿ ಸವಾಲೆನಿಸಿದೆ. ರೋಹಿತ್ ಶರ್ಮ ಬಳಿಕದ ಕಾಯಂ ನಾಯಕರ ಹುಡುಕಾಟದಲ್ಲಿರುವ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಯಾರು ಉತ್ತಮರು ಎಂಬ ಗೊಂದಲವಿದೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್ ರಾಹುಲ್ ನಡುವೆ ನಾಯಕತ್ವಕ್ಕಾಗಿ ಬಿಗ್ ಫೈಟ್ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ರಾಹುಲ್ ಕೂಡ ಉತ್ತಮ ಪ್ರದರ್ಶನದ ಜತೆಗೆ ನಾಯಕತ್ವದ ಸವಾಲನ್ನು ಉತ್ತಮವಾಗಿ ಸ್ವೀಕರಿಸಲಿದ್ದಾರೆ.
ಭಾರತ ತಂಡ
ಕೆ. ಎಲ್ ರಾಹುಲ್ ನಾಯಕ (ನಾಯಕ), ಶಿಖರ್ ಧವನ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.
ಇದನ್ನೂ ಓದಿ | legends cricket league | ಮತ್ತೊಮ್ಮೆ ಭಾರತ ತಂಡಕ್ಕೆ ನಾಯಕರಾದ ದಾದಾ!