ಟೋಕಿಯೊ: ಭಾರತದ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಇಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಷಿಪ್ಸ್‌ನಲ್ಲಿ (World Championships) ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದು ವಿಶ್ವ ಚಾಂಪಿಯನ್‌ಷಿಪ್ಸ್‌ನಲ್ಲಿ ಭಾರತದ ಡಬಲ್ಸ್ ತಂಡಕ್ಕೆ ಲಭಿಸುತ್ತಿರುವ ಮೊಟ್ಟಮೊದಲ ಪದಕವಾಗಿದ್ದು, ಭಾರತದ ಜೋಡಿ ಇತಿಹಾಸ ಸೃಷ್ಟಿಸಿದೆ.
ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಜೋಡಿ ಮಲೇಷ್ಯಾದ ಆರೋನ್ ಚಿಯಾ ಹಾಗೂ ಸೊ ಊಯಿ ವಿರುದ್ಧ ೨೨-೨೦, ೧೮-೨೧, ೧೬-೨೧ ಗೇಮ್‌ಗಳಿಂದ ಮಣಿದರು. ೭೭ ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಭಾರತದ ಜೋಡಿ ಮೊದಲ ಗೇಮ್ ಅನ್ನು ಪ್ರಯಾಸಿಂದ ಜಯಿಸಿತು. ಆದರೆ, ಎರಡನೇ ಗೇಮ್‌ನಲ್ಲಿ ಸೋಲು ಕಾಣುವಂತಾಯಿತು. ಮೂರನೇ ಗೇಮ್‌ನಲ್ಲಿ ಹಿನ್ನಡೆ ಕಂಡು ಸೋಲಿಗೆ ಒಳಗಾಯಿತು.
ಇವರ ಪದಕದೊಂದಿಗೆ ಒಟ್ಟಾರೆ World Championships ಇತಿಹಾಸದಲ್ಲಿ ಭಾರತಕ್ಕೆ ೧೩ನೇ ಪದಕ ಲಭಿಸಿದಂತಾಗಿದೆ. ಇದರಲ್ಲಿ ಪಿ. ವಿ ಸಿಂಧೂ ಐದು ಪದಕಗಳನ್ನು ಗೆದ್ದಿದ್ದರೆ, ಸೈನಾ ೨ ಪದಕ ಗೆದ್ದಿದ್ದಾರೆ. ಕಳೆದ ಆವೃತ್ತಿಯಲ್ಲಿ ಕಿಡಂಬಿ ಶ್ರೀಕಾಂತ್ ರಜತ ಪದಕ ಗೆದ್ದಿದ್ದರೆ, ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಅವರಿದ್ದ ಮಹಿಳೆಯರ ಡಬಲ್ಸ್ ಜೋಡಿ ಒಂದು ಪದಕ ಹಾಗೂ ಪ್ರಕಾಶ್ ಪಡುಕೊಣೆ ಅವರು ಒಂದು ಪದಕ ಗೆದ್ದಿದ್ದರು.
ಭಾರತದ ಈ ಬ್ಯಾಡ್ಮಿಂಟನ್ ತಾರೆಗಳು ವಾರಗಳ ಹಿಂದೆ ಮುಕ್ತಾಯಗೊಂಡಿದ್ದ ಬರ್ಮಿಂಗ್ಹಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿಯೂ ಚಾಂಪಿಯನ್‌ಪಟ್ಟ ಅಲಂಕರಿಸಿದ್ದರು.
ಇದನ್ನೂ ಓದಿ | CWG- 2022 | ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಬಂಗಾರ ಗೆದ್ದ ಚಿರಾಗ್- ಸಾತ್ವಿಕ್ ಜೋಡಿ