Site icon Vistara News

Rohit Sharma : ಟಿ20ಗೆ ಮರಳಿದ ರೋಹಿತ್, ವಿರಾಟ್​​; ಆಫ್ಘನ್ ವಿರುದ್ಧದ ಸರಣಿಗೆ ತಂಡ ಪ್ರಕಟ

Rohit sharma

ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat kohli) ಹಾಗೂ ಹಾಲಿ ನಾಯಕ ರೋಹಿತ್ ಶರ್ಮಾ (Rohit Sharma ) ಟಿ20 ಕ್ರಿಕೆಟ್​ಗೆ (T20 circket) ವಾಪಸಾಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಗಾಗಿ (INDvsAFG) 16 ಸದಸ್ಯರ ಬಲವಾದ ತಂಡದಲ್ಲಿ ಅವರು ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಇಬ್ಬರೂ 2024ರ ಟಿ 20 ವಿಶ್ವಕಪ್​ಗಾಗಿ ಕೆರಿಬಿಯನ್ ದ್ವೀಪ ಮತ್ತು ಯುಎಸ್ಎಗೆ ತೆರಳುತ್ತಾರೆ ಎಂಬ ಸ್ಪಷ್ಟ ಸೂಚನೆ ಸಿಕ್ಕಿದೆ.

ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಋತುರಾಜ್ ಗಾಯಕ್ವಾಡ್ ಗಾಯದ ಕಾರಣ ಸರಣಿಯಿಂದ ಹೊರಗುಳಿದಿದ್ದಾರೆ. ಇದೇ ವೇಳೆ ಕೇರಳದ ಬ್ಯಾಟರ್​​ ಸಂಜು ಸ್ಯಾಮ್ಸನ್​​ಗೆ ಮತ್ತೊಂದು ಬಾರಿ ತಂಡದ ಬಾಗಿಲು ತೆರೆದಿದೆ. ವೇಗದ ಬೌಲರ್​ಗಳಾದ ಜಸ್​ ಪ್ರಿತ್​ ಬುಮ್ರಾ ಹಾಗೂ ಸಿರಾಜ್​ಗೆ ವಿಶ್ರಾಂತಿ ನೀಡಲಾಗಿದೆ. ಮೊಹಮ್ಮದ್ ಶಮಿಯೂ ತಂಡದ ಭಾಗವಾಗಿಲ್ಲ. ಮಿಗಿಲಾಗಿ ವಿಕೆಟ್​ ಕೀಪಿಂಗ್​ಗೆ ಜಿತೇಶ್​ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಇದರಿಂದಾಗಿ ಕೆ. ಎಲ್​ ರಾಹುಲ್​ ತಂಡದ ಭಾಗವಾಗಿಲ್ಲ. ಸಂಜು ಸ್ಯಾಮ್ಸನ್​ ಇನ್ನೊಂದು ವಿಕೆಟ್​ ಕೀಪರ್ ಆಯ್ಕೆಯಾಗಿದೆ.

ಸ್ಪಿನ್ ಆಲ್ರೌಂಡರ್ ಸ್ಥಾನಕ್ಕೆ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ಆದ್ಯತೆ ನೀಡಿರುವುದರಿಂದ ರವೀಂದ್ರ ಜಡೇಜಾ ಅವರನ್ನು ಟಿ 20 ಪಂದ್ಯಗಳಿಗೆ ಕಡೆಗಣಿಸಲಾಗಿದೆ. ರೋಹಿತ್ ಶರ್ಮಾ ಅವರೊಂದಿಗೆ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಇಬ್ಬರು ಆರಂಭಿಕರಾಗಿದ್ದರೆ. ಜಿತೇಶ್ ಶರ್ಮಾ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್​ಗಿಂತ ಮುಂಚಿತವಾಗಿ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಟಿ 20 ಪಂದ್ಯಗಳಲ್ಲಿ ತಂಡದಿಂದ ಅವಕಾಶ ಪಡೆಯದ ಶಿವಂ ದುಬೆ ಕೂಡ ಪುನರಾಗಮನ ಮಾಡಿದ್ದಾರೆ. ಕೆರಿಬಿಯನ್ ಸರಣಿಯ ನಂತರ ಟಿ 20 ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನದ ಹೊರತಾಗಿಯೂ ತಿಲಕ್ ವರ್ಮಾ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ.

ಬೌಲಿಂಗ್ ವಿಭಾಗದಲ್ಲಿ ಯಜುವೇಂದ್ರ ಚಹಲ್ ಅವರನ್ನು ರವಿ ಬಿಷ್ಣೋಯ್ ಹಿಂದಿಕ್ಕಿದ್ದಾರೆ. ಅನುಭವಿ ವೇಗಿಗಳಾದ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರನ್ನು ಸಹ ಆಯ್ಕೆ ಮಾಡಲಾಗಿಲ್ಲ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆದಾರರು ಯುವ ವೇಗಿಗಳಾದ ಅರ್ಶ್​ದೀಪ್ ಸಿಂಗ್, ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್ ಅವರೊಂದಿಗೆ ಆಡಲು ನಿರ್ಧರಿಸಿದ್ದಾರೆ.

ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದ ಸಮಿತಿ ಭಾನುವಾರ ಸಭೆ ಸೇರಿ ತಂಡವನ್ನು ಆಯ್ಕೆ ಮಾಡಿದೆ. ಸಂಜೆ ವೇಳೆಗೆ ತಂಡ ಪ್ರಕಟವಾಗಿದೆ. ಈ ಮೂಲಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಭವಿಷ್ಯ ಕೂಡಾ ನಿರ್ಧಾರವಾಗಿದೆ. ಉಭಯ ಆಟಗಾರರ ಜತೆ ಚರ್ಚಿಸಲು ಆಯ್ಕೆ ಸಮಿತಿ ದಕ್ಷಿಣ ಆಫ್ರಿಕಾಗೂ ತೆರಳಿತ್ತು. ಅಲ್ಲಿನ ಮಾತುಕತೆಯ ಪ್ರಕಾರ ತಂಡ ಘೋಷಿಸಲಾಗಿದೆ.

ಇದನ್ನೂ ಓದಿ : Ambati Rayudu : ರಾಜಕೀಯದಿಂದ ಮತ್ತೆ ಕ್ರಿಕೆಟ್​ಗೆ ಬಂದ ಅಂಬಾಟಿ; ಈ ಬಾರಿ ಮುಂಬಯಿ ತಂಡ

ಇದೇ ವರ್ಷ ಟಿ20 ವಿಶ್ವಕಪ್ ನಡೆಯಲ್ಲಿದ್ದು ಇದನ್ನು ಕೂಡ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಸಮರ್ಥ ತಂಡವನ್ನು ಪ್ರಕಟಿಸಬೇಕಿದೆ. ರೋಹಿತ್​ ಮತ್ತು ಕೊಹ್ಲಿ ಈ ಸರಣಿಯಲ್ಲಿ ಆಡಿದರೆ ಉಭಯ ಆಟಗಾರರು ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವುದು ಖಚಿತ ಎನ್ನಬಹುದು. ಜ. 11ರಂದು ಮೊಹಾಲಿಯಲ್ಲಿ ಮೊದಲ ಪಂದ್ಯ ನಡೆಯಲಿದ್ದು, 14ರಂದು ಇಂದೋರ್ ಮತ್ತು 17ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.

ಟಿ20 ಸರಣಿಗೆ ಭಾರತ ತಂಡ ಪ್ರಕಟ

ರೋಹಿತ್ ಶರ್ಮಾ (ನಾಯಕ), ಎಸ್ ಗಿಲ್, ವೈ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷ್ದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್.

Exit mobile version