ಅಹಮದಾಬಾದ್: ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡ ಟೀಮ್ ಇಂಡಿಯಾದ ಯುವ ಡ್ಯಾಶಿಂಗ್ ಆಟಗಾರ ಶುಭಮನ್ ಗಿಲ್(shubman gill) ಅವರು ಪಾಕ್(IND vs PAK) ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಅವರ ಸ್ಥಾನದಲ್ಲಿ ಆಡಿದ್ದ ಇಶಾನ್ ಕಿಶನ್ ಈ ಪಂದ್ಯದಿಂದ ಹೊರಗುಳಿದರು.
ಶುಭಮನ್ ಗಿಲ್ ಅವರು ಡೆಂಗ್ಯೂ ಜ್ವರದಿಂದಾಗಿ ಆಸ್ಟ್ರೇಲಿಯಾ ಮತ್ತು ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ತೀವ್ರ ಜ್ವರದ ಕಾರಣ ಒಂದು ದಿನ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲೂ ಗಿಲ್ ಚಿಕಿತ್ಸೆ ಪಡೆದಿದ್ದರು. ಅಲ್ಲದೆ ಅವರಲ್ಲಿ ಪ್ಲೇಟ್ ಲೆಟ್ನ ಕೊರತೆಯೂ ಕಂಡು ಬಂದಿತ್ತು. ಆಗ ಅವರು ವಿಶ್ವಕಪ್ ಟೂರ್ನಿಯಿಂದ ಹೊರಬೀಳಲಿದ್ದಾರೆ ಎಂದು ಎಲ್ಲಡೆ ಸುದ್ದಿಯಾಗಿತ್ತು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದ ಗಿಲ್ ಡೆಂಗ್ಯೂ ಜ್ವರಕ್ಕೆ ಸಡ್ಡು ಹೊಡೆದು ಇದೀಗ ಮೈದಾನಕ್ಕೆ ಇಳಿದಿದ್ದಾರೆ.
ಗಿಲ್ ಅವರು ಗುರುವಾರ 5 ಗಂಟೆಗಳ ಕಾಲ ವಿಶೇಷ ಬ್ಯಾಟಿಂಗ್ ಅಭ್ಯಾಸ ನಡೆಸಿದಾಗ ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವುದು ಖಚಿತ ಎನ್ನಲಾಗಿತ್ತು. ಅಲ್ಲದೆ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ನಾಯಕ ರೋಹಿತ್ ಶರ್ಮ ಕೂಡ ಗಿಲ್ ಅವರು ಶೇ.90ರಷ್ಟು ಆಡುವ ಸಾಧ್ಯತೆ ಇದೆ ಎಂದಿದ್ದರು. ಇದೀಗ ಅವರು ತಂಡಕ್ಕೆ ಆಗಮಿಸಿದ್ದಾರೆ. ಗಿಲ್ ವೈದ್ಯ ರಿಜ್ವಾನ್ ಅವರ ಮಾರ್ಗದರ್ಶನದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು.
ಇದನ್ನೂ ಓದಿ IND vs PAK Live: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಭಾರತ; ಗಿಲ್ ಆಗಮನ
ಆತ್ಮವಿಶ್ವಾಸ ತುಂಬಿದ್ದ ಯುವಿ
2011ರ ವಿಶ್ವಕಪ್‌ನಲ್ಲಿ ಕ್ಯಾನ್ಸರ್ ಮಧ್ಯೆಯೂ ವಿಶ್ವಕಪ್ ಆಡಿ ಭಾರತಕ್ಕೆ ಕಪ್ ಗೆಲ್ಲಿಸಿಕೊಟ್ಟ ಯುವರಾಜ್ ಸಿಂಗ್ ಅವರು ಗಿಲ್ಗೆ ಆತ್ಮವಿಶ್ವಾಸ ತುಂಬಿದ್ದರು. “2011ರ ವಿಶ್ವಕಪ್‌ನಲ್ಲಿ(World Cup 2011) ನಾನು ಕ್ಯಾನ್ಸರ್ನಿಂದ ಬಳಲುತ್ತಿದ್ದೆ. ಈ ವಿಚಾರ ನನಗೆ ಮಾತ್ರ ತಿಳಿದಿತ್ತು. ಆದರೂ ನಾನು ಜಗ್ಗಲಿಲ್ಲ, ಕುಗ್ಗಲಿಲ್ಲ. ಪಂದ್ಯವನ್ನು ಆಡಲಿಳಿದೆ. ಇದನ್ನೇ ನೀನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ನಿನ್ನಿಂದ ಎಲ್ಲವು ಸಾಧ್ಯ. ಆತ್ಮವಿಶ್ವಾಸ ಇರಲಿ. ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯುವುದನ್ನು ಎದುರು ನೋಡುತ್ತಿರುವೆ” ಎಂದು ಹೇಳುವ ಮೂಲಕ ಯುವರಾಜ್ ಅವರು ಗಿಲ್ಗೆ ಆತ್ಮವಿಶ್ವಾಸ ತುಂಬಿದ್ದರು.
🚨 Toss & Team Update 🚨
— BCCI (@BCCI) October 14, 2023
Captain @ImRo45 has won the toss & #TeamIndia have elected to bowl against Pakistan.
1⃣ change for India as Shubman Gill is named in the team.
Here's our Playing XI 🔽
Follow the match ▶️ https://t.co/H8cOEm3quc#CWC23 | #INDvPAK | #MeninBlue pic.twitter.com/8itXCZA4xy
“ಶುಭಮ್ ಗಿಲ್ ಕೋ ಮೈನೆ ತಗ್ದಾ ಕರ್ ದಿಯಾ(ನಾನು ಶುಭಮನ್ ಗಿಲ್ ಅವರನ್ನು ಬಲಪಡಿಸಿದ್ದೇನೆ). ನಾನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವಾಗ ವಿಶ್ವಕಪ್‌ನಲ್ಲಿ ಆಡಿದ್ದೇನೆ ಎಂದು ಅವರಿಗೆ ಹೇಳಿದ್ದೇನೆ. ಇದನ್ನೂ ಅವರು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ. ತಂಡವನ್ನು ಸೇರಲು ಆಶಾದಾಯಕರಾಗಿದ್ದಾರೆ. ಜ್ವರ ಮತ್ತು ಡೆಂಗ್ಯೂ ಇದ್ದಾಗ ಕ್ರಿಕೆಟ್ ಪಂದ್ಯವನ್ನು ಆಡುವುದು ನಿಜವಾಗಿಯೂ ಕಠಿಣವಾಗಿದೆ ಎನ್ನುವುದು ನನಗೂ ತಿಳಿದಿದೆ. ಅಲ್ಲದೆ ನೋವನ್ನು ನಾನು ಕೂಡ ಅನುಭವಿಸಿದ್ದೇನೆ. ಖಂಡಿತವಾಗಿಯೂ ಗಿಲ್ ಪಾಕ್ ವಿರುದ್ಧ ಆಡುತ್ತಾರೆ” ಎಂದು ಯುವರಾಜ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದರು. ಯುವಿ ಅವರ ವಿಶ್ವಾಸ ಹುಸಿಯಾಗಲಿಲ್ಲ. ಗಿಲ್ ಈ ಪಂದ್ಯದಲ್ಲಿ ಆಡುತ್ತಿದ್ದಾರೆ.
ಉಭಯ ತಂಡಗಳ ಆಡುವ ಬಳಗ
ಭಾರತ: ಶುಭಮನ್ ಗಿಲ್, ರೋಹಿತ್ ಶರ್ಮ(ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಕೆ.ಎಲ್ ರಾಹುಲ್, ರವೀಂದ್ರ ಜಡೇಜ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹಾರಿಸ್ ರೌಫ್.