ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಕ್ರಿಕೆಟ್ ಜಗತ್ತಿಗೇ ಹಬ್ಬ. ಅಂದು ಎಲ್ಲರೂ ಟಿವಿ ಮುಂದೆ ಕುಳಿತು ಪಂದ್ಯವನ್ನು ಕೌತುಕದಿಂದ ವೀಕ್ಷಿಸುತ್ತಾರೆ. ಹೀಗಾಗಿ ಟಿವಿ ರೇಟಿಂಗ್ಸ್ ಏಕಾಏಕಿ ಹೆಚ್ಚಾಗುತ್ತದೆ. ಅಂತೆಯೇ ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾಣ ತಂಡಗಳ ನಡುವಿನ ಟಿ೨೦ ವಿಶ್ವ ಕಪ್ ಪಂದ್ಯವೂ ನೇರ ವೀಕ್ಷಣೆಯಲ್ಲಿ ಹೊಸ ದಾಖಲೆ ಮಾಡಿದೆ. ಆದರೆ, ಈ ಬಾರಿ ನೂತನ ದಾಖಲೆ ಸೃಷ್ಟಿಸಿರುವುದು ಟಿವಿ ವೀಕ್ಷಣೆಯಲ್ಲಿ ಅಲ್ಲ. ಲೈವ್ ಸ್ಟ್ರೀಮಿಂಗ್‌ನಲ್ಲಿ.
ಭಾನುವಾರ ನಡೆದ ಪಂದ್ಯ ಡಿಸ್ನಿ- ಹಾಟ್ ಸ್ಟಾರ್‌ನಲ್ಲಿ ಸುಮಾರು ೧.೮ ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಕಳೆದ ಏಷ್ಯಾ ಕಪ್‌ನಲ್ಲಿ ಸೃಷ್ಟಿಯಾಗಿದ್ದ ೧.೪ ಕೋಟಿ ಮಂದಿ ವೀಕ್ಷಣೆಯ ದಾಖಲೆಯನ್ನು ಮುರಿದಿದೆ.
ಪಾಕಿಸ್ತಾನ ತಂಡ ತನ್ನ ಇನಿಂಗ್ಸ್ ಮುಗಿಸುವ ವೇಳೆ ೧.೧ ಕೋಟಿ ಮಂದಿ ಪಂದ್ಯವನ್ನು ವೀಕ್ಷಿಸಿದ್ದರು. ಆದರೆ, ಭಾರತದ ಇನಿಂಗ್ಸ್ ಮುಕ್ತಾಯದ ವೇಳೆಗೆ ೧.೮ ಕೋಟಿ ವೀಕ್ಷಣೆಗೆ ಏರಿಕೆಯಾಗಿತ್ತು. ಅದೇ ರೀತಿ ಐನಾಕ್ಸ್ ಹಾಗೂ ಪಿವಿಆರ್ ಚಿತ್ರ ಮಂದಿರಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವನ್ನು ನೇರ ಪ್ರಸಾರ ಮಾಡಲಾಗಿತ್ತು. ಈ ಥಿಯಟರ್‌ಗಳಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಈ ಪಂದ್ಯದ ಟಿವಿ ವೀಕ್ಷಣೆಯ ಒಟ್ಟು ಸಂಖ್ಯೆ ಇನ್ನೂ ಪ್ರಕಟಗೊಂಡಿಲ್ಲ. ಮುಂದಿನ ವಾರ ಬಾರ್ಕ್ ಅದರ ಅಂಕಿ- ಸಂಖ್ಯೆಗಳನ್ನು ಬಿಡುಗಡೆ ಮಾಡಲಿದೆ.
ಇದನ್ನೂ ಓದಿ | Team India | ಪಾಕ್ ವಿರುದ್ಧ ಗೆದ್ದು ನೂತನ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ