ತರೋಬಾ (ವೆಸ್ಟ್ ಇಂಡೀಸ್) : ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೇ ಏಕ ದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 351 ರನ್ಗಳ ಬೃಹತ್ ಮೊತ್ತ ಪೇರಿಸಿದೆ. ಈ ಮೂಲಕ ಆತಿಥೇಯ ವಿಂಡೀಸ್ ಪಡೆಗೆ ದೊಡ್ಡ ಮೊತ್ತದ ಸವಾಲು ಒಡ್ಡಿದೆ. ಭಾರತ ತಂಡದ ಪರ ಇಶಾನ್ ಕಿಶನ್ (77) , ಶುಭ್ಮನ್ ಗಿಲ್ (85), ಸಂಜು ಸ್ಯಾಮ್ಸನ್ (51) ಮತ್ತು ಹಾರ್ದಿಕ್ ಪಾಂಡ್ಯ (ಅಜೇಯ 70) ಅರ್ಧ ಶತಕಗಳನ್ನು ಬಾರಿಸಿದರು. ಈ ಮೂಲಕ ಭಾರತ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.
ಇಲ್ಲಿನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಮೊದಲು ಪೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್ಗೆ ಆಹ್ವಾನ ಪಡೆದ ಭಾರತ ತಂಡ ಉತ್ತಮ ಆರಂಭವನ್ನು ಪಡೆಯಿತಲ್ಲದೆ, ಕೊನೇ ತನಕ ಅದೇ ವೇಗದಲ್ಲಿ ಆಡಿ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 351 ರನ್ ಬಾರಿಸಿತು.
ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಮೊದಲ ವಿಕೆಟ್ಗೆ 143 ರನ್ ಬಾರಿಸಿತು. ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ವಿಂಡೀಸ್ ಬೌಲರ್ಗಳನ್ನು ಸತತವಾಗಿ ದಂಡಿಸಿ ರನ್ ಪೇರಿಸಿದರು. ಈ ಜೋಡಿ ಉತ್ತಮ ಆರಂಭದಿಂದಾಗಿ ಭಾರತ ತಂಡದಲ್ಲಿ ಚೈತನ್ಯ ಮೂಡಿತು. ಆದರೆ ಯಾನಿಕ್ ಕ್ಯಾರಿಯಾ ಎಸೆತಕ್ಕೆ ದೊಡ್ಡ ಹೊಡೆತವನ್ನು ಬಾರಿಸಲು ಮುಂದಾದ ಕಿಶನ್ ಸ್ಟಂಪ್ ಔಟ್ ಆಗುವ ಮೂಲಕ ನಿರಾಸೆ ಎದುರಿಸಿದರು. ಮೂರನೇ ಪಂದ್ಯದಲ್ಲಿ ಆಡಲು ಅವಕಾಶ ಪಡೆದ ಋತುರಾಜ್ ಗಾಯಕ್ವಾಡ್ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದರು. ಆದರೆ ಅವರಿಗೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಕೇವಲ 8 ರನ್ಗಳಿಗೆ ಔಟಾದರು. ಅಲ್ಜಾರಿ ಜೋಸೆಫ್ ಎಸೆತಕ್ಕೆ ಬ್ರೆಂಡನ್ ಕಿಂಗ್ಗೆ ಕ್ಯಾಚ್ ನೀಡಿ ಅವರು ನಿರ್ಗಮಿಸಿದರು.
ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಸಂಜು ಸ್ಯಾಮ್ಸನ್ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 41 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ 2 ಫೋರ್ ಸಮೇತ 51 ರನ್ ಬಾರಿಸಿದರು. ಆದರೆ ರೊಮಾರಿಯೊ ಶಫರ್ಡ್ ಎಸೆತಕ್ಕೆ ಹೆಟ್ಮಾಯರ್ಗೆ ಕ್ಯಾಚ್ ನೀಡಿ ಔಟಾದರು. ಬಳಿಕ ಬಂದ ಹಾರ್ದಿಕ್ ಪಾಂಡ್ಯ ತಾಳ್ಮೆಯ ಆಟ ಪ್ರದರ್ಶಿಸಿದರು. ಏತನ್ಮಧ್ಯೆ, ಶುಭ್ಮನ್ ಗಿಲ್ ಗುಡಕೇಶ್ ಮೋತಿ ಎಸೆತಕ್ಕೆ ಕ್ಯಾರಿಯಾಗೆ ಕ್ಯಾಚ್ ನೀಡುವ ಮೂಲಕ ನಿರಾಸೆ ಎದುರಿಸಿದರು. 85 ರನ್ ಬಾರಿಸಿ ಶತಕದ ನಿರೀಕ್ಷೆಯಲ್ಲಿದ್ದ ಅವರು ಬೇಸರದ ಮೋರೆ ಹೊತ್ತುಕೊಂಡು ಪೆವಿಲಿಯನ್ಗೆ ಸಾಗಿದರು. ಬಳಿಕ ಸೂರ್ಯಕುಮಾರ್ ಯಾದವ್ 2 ಸಿಕ್ಸರ್ ಹಾಗೂ 2 ಫೊರ್ ಸಮೇತ 30 ಎಸೆತಗಳಲ್ಲಿ 35 ರನ್ ಬಾರಿಸಿದರು. ಕೊನೆಯದಾಗಿ ಆಡಲು ಬಂದ ಜಡೇಜಾ 8 ರನ್ ಬಾರಿಸಿದರು.
ಇದನ್ನೂ ಓದಿ: Stuart Broad: ಸ್ಟುವರ್ಟ್ ಬ್ರಾಡ್ಗೆ ಅಭಿನಂದನೆ ಸಲ್ಲಿಸಿದ ಯುವರಾಜ್ ಸಿಂಗ್
ವಿಂಡೀಸ್ ಪರ ಶಫರ್ಡ್ 2 ವಿಕೆಟ್ ಪಡೆದರೆ, ಕ್ಯಾರಿಯಾ, ಜೋಸೆಫ್ ಹಾಗೂ ಮೋತಿ ತಲಾ ಒಂದು ವಿಕೆಟ್ ಉರುಳಿಸಿದರು. ಭಾರತ ತಂಡ ಮೂರನೇ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಆಡಿಸಲಿಲ್ಲ.