ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ (Ind vs Wi ODI )೩೧೨ ರನ್ಗಳ ಗುರಿಯನ್ನು ಮೀರಿ ಗೆದ್ದಿರುವ ಭಾರತ ತಂಡ ಹೊಸ ದಾಖಲೆಯೊಂದನ್ನು ಸೃಷ್ಟಿಸಿದೆ. ಅದೇನೆಂದರೆ ಕೆರಿಬಿಯನ್ ಪಡೆಯ ವಿರುದ್ಧ ಮೊದಲ ಬಾರಿ ಗರಿಷ್ಠ ಮೊತ್ತವನ್ನು ಚೇಸ್ ಮಾಡಿ ಗೆಲುವು ಸಾಧಿಸಿರುವುದು. ಮೊದಲು ಬ್ಯಾಟ್ ಮಾಡಿದ್ದ ವೆಸ್ಡ್ ಇಂಡೀಸ್ ತಂಡ ೮ ವಿಕೆಟ್ ನಷ್ಟಕ್ಕೆ ೩೧೧ ರನ್ ಬಾರಿಸಿದ್ದರೆ, ಭಾರತ ೪೯.೪ ಓವರ್ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೩೧೨ ರನ್ ಬಾರಿಸಿ ಗೆಲುವು ಸಾಧಿಸಿದೆ. ಇದು ವೆಸ್ಟ್ ಇಂಡೀಸ್ ತವರಿನಲ್ಲಿ ಭಾರತ ತಂಡ ಆತಿಥೇಯರ ವಿರುದ್ಧದ ಗರಿಷ್ಠ ರನ್ ಚೇಸ್ ಗೆಲುವು.
ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಸಂಭ್ರಮ
ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ತಂಡ ಗೆಲುವಿಗೆ ಭರ್ಜರಿ ಸಾಹಸವನ್ನೇ ಮಾಡಿತ್ತು. ವಿಂಡೀಸ್ ತಂಡದ ಆರಂಭಿಕ ಬ್ಯಾಟರ್ ಶಾಯ್ ಹೋಪ್ (೧೧೫ ರನ್) ಅವರ ಸಮಯೋಚಿತ ಶತಕ ಹಾಗೂ ನಾಯಕ ನಿಕೋಲಸ್ ಪೂರನ್ (೭೪ ರನ್) ಅವರ ಅರ್ಧ ಶತಕದ ಆಟದಿಂದ ಭಾರತದ ಗೆಲುವಿಗೆ ೩೧೨ ರನ್ಗಳ ಗೆಲುವಿನ ಗುರಿ ಎದುರಾಗಿತ್ತು. ಆದರೆ, ಸಂಘಟಿತ ಹೋರಾಟ ನಡೆಸಿದ ಭಾರತ ತಂಡ ಬ್ಯಾಟರ್ಗಳು ವಿಂಡೀಸ್ ಪಾಲಾಗುತ್ತಿದ್ದ ವಿಜಯವನ್ನು ಕಸಿದುಕೊಂಡರು. ಶುಬ್ಮನ್ ಗಿಲ್ (೪೩), ಶ್ರೇಯಸ್ ಅಯ್ಯರ್ (೬೩), ಸಂಜು ಸ್ಯಾಮ್ಸನ್ (೫೪), ದೀಪಕ್ ಹೂಡಾ (೩೩) ತಂಡವನ್ನು ಮಧ್ಯಮ ಕ್ರಮಾಂಕದಲ್ಲಿ ಕಾಪಾಡಿದರು. ಕೊನೆಯಲ್ಲಿ ಸಿಡಿದೆದ್ದ ಆಲ್ರೌಂಡರ್ ಅಕ್ಷರ್ ಪಟೇಲ್ ೬೪ ರನ್ ಬಾರಿಸಿ ಭಾರತ ಜಯಕ್ಕೆ ನೆರವಾದರು.
ಇದನ್ನ ಓದಿ | ಸರಣಿಗೆ ಗೆದ್ದರೂ ಭಾರತಕ್ಕೆ ತಪ್ಪಲಿಲ್ಲ ದಂಡದ ಬಿಸಿ, ಹಳೆಯ ತಪ್ಪಿಗೆ ಸಿಕ್ಕಿತು ಶಿಕ್ಷೆ!