ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ನೆದರ್ಲ್ಯಾಂಡ್ಸ್ (Ind vs Ned) ವಿರುದ್ಧದ ವಿಶ್ವ ಕಪ್ ಪಂದ್ಯದಲ್ಲಿ ಭಾರತ ತಂಡ ಮತ್ತೊಂದು ಬಾರಿ ಬೃಹತ್ ಮೊತ್ತವನ್ನು ಪೇರಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 410 ರನ್ ಬಾರಿಸಿದೆ. ಭಾರತ ತಂಡದ ಪರವಾಗಿ ಶ್ರೇಯಸ್ ಅಯ್ಯರ್ ಹಾಗೂ ಕೆ ಎಲ್ ಶತಕ ಬಾರಿಸಿ ಮಿಂಚಿದ್ದಾರೆ. ಅಂದ ಹಾಗೆ ಇದು ವಿಶ್ವ ಕಪ್ ಇತಿಹಾದಲ್ಲಿ ಭಾರತ ತಂಡದ ಎರಡನೇ ಗರಿಷ್ಠ ಮೊತ್ತವಾಗಿದೆ.
ವಿಶ್ವಕಪ್ನಲ್ಲಿ ಭಾರತ 400 ರನ್ಗಳ ಗಡಿ ದಾಟಿದ್ದು ಇದು ಎರಡನೇ ಬಾರಿ. 2007ರಲ್ಲಿ ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ಬರ್ಮುಡಾ ವಿರುದ್ಧ ನಡೆದ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಸಾರಥ್ಯದ ಭಾರತ 5 ವಿಕೆಟ್ ನಷ್ಟಕ್ಕೆ 413 ರನ್ ಗಳಿಸಿತ್ತು.
ಬೆಂಗಳೂರಿನಲ್ಲಿ ನಡೆದ ಏಕದಿನ ವಿಶ್ವ ಕಪ್ ಪಂದ್ಯದಲ್ಲಿ ಎರಡನೇ ಬಾರಿಗೆ 400ಕ್ಕಿಂತ ಹೆಚ್ಚು ರನ್ ದಾಖಲಾಗಿದೆ. ಈ ತಿಂಗಳ ಆರಂಭದಲ್ಲಿ ನಡೆದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ವಿರುದ್ಧ ಆರು ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತ್ತು.
2013ರ ನವೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 6 ವಿಕೆಟ್ ನಷ್ಟಕ್ಕೆ 383 ರನ್ ಗಳಿಸಿತ್ತು. ಆ ದಾಖಲೆ ಮುರಿದು ಹೋಗಿದೆ. ಇದೇ ವೇಳೆ ಭಾರತ ತಂಡವು ಏಕದಿನ ಮಾದರಿಯಲ್ಲಿ ಐದನೇ ಬಾರಿಗೆ 400ಕ್ಕಿಂತ ಹೆಚ್ಚು ರನ್ ಬಾರಿಸಿತು. ಅದರ ವಿವರ ಈ ಕೆಳಗಿನಂತಿದೆ.
- ಇಂದೋರ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 50 ಓವರ್ ಗಳಲ್ಲಿ 5 ವಿಕೆಟ್ ಗೆ 418 (2011)
- ರಾಜ್ ಕೋಟ್ ನಲ್ಲಿ ಶ್ರೀಲಂಕಾ ವಿರುದ್ಧ 50 ಓವರ್ ಗಳಲ್ಲಿ 7 ವಿಕೆಟ್ ಗೆ 414 (2009)
- ಪೋರ್ಟ್ ಆಫ್ ಸ್ಪೇನ್ ನಲ್ಲಿ ಬರ್ಮುಡಾ ವಿರುದ್ಧ 50 ಓವರ್ ಗಳಲ್ಲಿ 5 ವಿಕೆಟ್ ಗೆ 413 (2007)
- ಬೆಂಗಳೂರಿನಲ್ಲಿ ನೆದರ್ಲೆಂಡ್ಸ್ ವಿರುದ್ಧ 50 ಓವರ್ ಗಳಲ್ಲಿ 4 ವಿಕೆಟ್ ಗೆ 410 (2023)
- ಚಟ್ಟೋಗ್ರಾಮ್ನಲ್ಲಿ ಬಾಂಗ್ಲಾದೇಶ ವಿರುದ್ಧ 50 ಓವರ್ಗಳಲ್ಲಿ 8 ವಿಕೆಟ್ಗೆ 409
ಈ ಸುದ್ದಿಯನ್ನೂ ಓದಿ: ind vs ned : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿಕ್ಸರ್ ಗಳ ದೀಪಾವಳಿ ರಾಕೆಟ್!
ಹೊಸ ದಾಖಲೆ ಬರೆದ ರಾಹುಲ್
ಭಾರತ ತಂಡದ ವಿಕೆಟ್ಕೀಪರ್ ಬ್ಯಾಟರ್ ಕ.ಎಲ್ ರಾಹುಲ್ ನೆದರ್ಲ್ಯಾಂಡ್ಸ್ ವಿರುದ್ಧದದ ವಿಶ್ವ ಕಪ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಅರು ಈ ಪಂದ್ಯದಲ್ಲಿ ಶತಕ ಬಾರಿಸಿದ ಎರಡನೇ ಆಟಗಾರ. ಅವರಿಗಿಂತ ಮೊದಲು ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ಶತಕ ಬಾರಿಸಿದ್ದಾರೆ. ಆದರೆ, ರಾಹುಲ್ ಪಾಲಿಗೆ ಈ ಶತಕ ವಿಶೇಷ ಸಾಧನೆಯಾಗಿದೆ.
ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ 62 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವೇಳೆ ಅವರು 2023 ರ (ಹಾಲಿ ಆವೃತ್ತಿಯ) ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ ಅವರ ದಾಖಲೆ ಅವರು ಮುರಿದರು.
ರಾಹುಲ್ 64 ಎಸೆತಗಳಲ್ಲಿ 102 ರನ್ ಗಳಿಸುವ ಹಾದಿಯಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳನ್ನು ಬಾರಿಸಿದರು, ಇದು ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಎರಡನೇ ಅತಿ ಹೆಚ್ಚು ಮೊತ್ತಕ್ಕೆ (410/4) ಮುನ್ನಡೆಸಿತು. ಇದು ರಾಹುಲ್ ಅವರ ಆರನೇ ಏಕದಿನ ಶತಕವಾಗಿದೆ. ಭಾರತದ 5ನೇ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಜೊತೆಗೂಡಿ 208 ರನ್ಗಳ ಜೊತೆಯಾಟವಾಡಿದ್ದು, ಇದು ಏಕದಿನ ವಿಶ್ವಕಪ್ನಲ್ಲಿ ನಾಲ್ಕನೇ ವಿಕೆಟ್ಗೆ ಅತಿ ಹೆಚ್ಚು ರನ್ಗಳ ಜೊತೆಯಾಟದ ದಾಖಲೆಯಾಗಿದೆ.
ವಿಶ್ವಕಪ್ ನಲ್ಲಿ ಭಾರತದ ಆಟಗಾರರ ವೇಗದ ಶತಕ (ಎಸೆತಗಳ ಪ್ರಕಾರ )
62 – ಕೆಎಲ್ ರಾಹುಲ್ ವಿರುದ್ಧ ನೆದರ್ಲ್ಯಾಂಡ್ಸ್ , ನ. 12, 2023
63 – ರೋಹಿತ್ ಶರ್ಮಾ ವಿರುದ್ಧ ಆಫ್ಘನ್ 2023
81 – ವೀರೇಂದ್ರ ಸೆಹ್ವಾಗ್ ವಿರುದ್ಧ ಬಿಇಆರ್, 2007
83 – ವಿರಾಟ್ ಕೊಹ್ಲಿ ವಿರುದ್ಧ ಬ್ಯಾನ್, 2011