Site icon Vistara News

World Championships | ಇತಿಹಾಸ ಸೃಷ್ಟಿಸಿದ ಭಾರತ ಪುರುಷರ ಡಬಲ್ಸ್‌ ಬ್ಯಾಡ್ಮಿಂಟನ್‌ ಜೋಡಿ

World Championships

ಟೋಕಿಯೊ : ಭಾರತದ ಬ್ಯಾಡ್ಮಿಂಟನ್‌ ಪುರುಷರ ಡಬಲ್ಸ್‌ ಜೋಡಿ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ ಭಾರತ ಪರ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. ಟೋಕಿಯೊದಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಷಿಪ್ಸ್‌ನ (World Championships) ಸೆಮಿಫೈನಲ್ಸ್‌ ಹಂತಕ್ಕೇರುವ ಮೂಲಕ ಪದಕವೊಂದನ್ನು ಖಾತರಿಪಡಿಸಿಕೊಂಡಿದ್ದಾರೆ. ಇದು ವಿಶ್ವ ಚಾಂಪಿಯನ್‌ಷಿಪ್ಸ್‌ನಲ್ಲಿ ಭಾರತದ ಡಬಲ್ಸ್‌ ತಂಡಕ್ಕೆ ಲಭಿಸುತ್ತಿರುವ ಮೊಟ್ಟಮೊದಲ ಪದಕವಾಗಿದೆ.

ಶುಕ್ರವಾರ ಬೆಳಗ್ಗೆ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತದ ಜೋಡಿ ಜಪಾನ್‌ನ ಟಕುರೊ ಹೊಕಿ ಮತ್ತು ಯುಗೊ ಕೊಬ್ಯಾಶಿ ವಿರುದ್ಧ ೨೪-೨೨, ೧೫-೨೧, ೨೧-೧೪ ಗೇಮ್‌ಗಳಿಂದ ಸಾಧಿಸುವ ಮೂಲಕ ಉಪಾಂತ್ಯಕ್ಕೆ ಪ್ರವೇಶ ಪಡೆದರು. ಮಾಜಿ ವಿಶ್ವ ಚಾಂಪಿಯನ್‌ಗಳಾಗಿರುವ ಜಪಾನ್‌ನ ಆಟಗಾರರನ್ನು ಜಿದ್ದಾಜಿದ್ದಿನ ಹೋರಾಟದಲ್ಲಿ ಮಣಿಸಿದ ಭಾರತದ ಪ್ರತಿಭಾವಂತ ಜೋಡಿ ಮುಂದಿನ ಸುತ್ತಿನಲ್ಲಿ ಮಲೇಷ್ಯಾದ ಆರೋನ್‌ ಚಿಯಾ ಹಾಗೂ ಸೊಹ್‌ ವೂ ಯಿಕ್‌ ವಿರುದ್ಧ ಆಡಬೇಕಾಗಿದೆ. ವಿಶ್ವ ಚಾಂಪಿಯನ್‌ಷಿಪ್ಸ್‌ನಲ್ಲಿ ಸೆಮಿಫೈನಲ್ಸ್‌ಗೆ ಪ್ರವೇಶ ಪಡೆದ ತಂಡ ಸೆಮಿಫೈನಲ್‌ನಲ್ಲಿ ಸೋತರೂ ಕಂಚಿನ ಪದಕ ಲಭಿಸಲಿದೆ. ಈ ಮೂಲಕ ಭಾರತದ ಜೋಡಿ ಇತಿಹಾಸ ಸೃಷ್ಟಿಸಿದಂತಾಗಿದೆ.

ಇವರ ಪದಕದೊಂದಿಗೆ ಒಟ್ಟಾರೆ World Championships ಇತಿಹಾಸದಲ್ಲಿ ಭಾರತಕ್ಕೆ ೧೩ನೇ ಪದಕ ಲಭಿಸಿದಂತಾಗಿದೆ. ಇದರಲ್ಲಿ ಪಿ. ವಿ ಸಿಂಧೂ ಐದು ಪದಕಗಳನ್ನು ಗೆದ್ದಿದ್ದರೆ, ಸೈನಾ ೨ ಪದಕ ಗೆದ್ದಿದ್ದಾರೆ. ಕಳೆದ ಆವೃತ್ತಿಯಲ್ಲಿ ಕಿಡಂಬಿ ಶ್ರೀಕಾಂತ್‌ ರಜತ ಪದಕ ಗೆದ್ದಿದ್ದರೆ, ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಅವರಿದ್ದ ಮಹಿಳೆಯರ ಡಬಲ್ಸ್ ಜೋಡಿ ಒಂದು ಪದಕ ಹಾಗೂ ಪ್ರಕಾಶ್‌ ಪಡುಕೊಣೆ ಅವರು ಒಂದು ಪದಕ ಗೆದ್ದಿದ್ದರು.

ಭಾರತದ ಈ ಬ್ಯಾಡ್ಮಿಂಟನ್ ತಾರೆಗಳು ವಾರಗಳ ಹಿಂದೆ ಮುಕ್ತಾಯಗೊಂಡಿದ್ದ ಬರ್ಮಿಂಗ್ಹಮ್ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿಯೂ ಚಾಂಪಿಯನ್‌ಪಟ್ಟ ಅಲಂಕರಿಸಿದ್ದರು.

ಇದನ್ನೂ ಓದಿ | BWF World Championships | ಲಕ್ಷ್ಯ ಸೇನ್‌ ಮಣಿಸಿದ ಪ್ರಯಣ್‌ ಕ್ವಾರ್ಟರ್‌ಫೈನಲ್ಸ್‌ಗೆ ಎಂಟ್ರಿ

Exit mobile version