ಬ್ಯಾಂಕಾಕ್: ಇಲ್ಲಿ ನಡೆದ 2023ರ ಮಹಿಳಾ ಸ್ನೂಕರ್ ವಿಶ್ವಕಪ್ ಚಾಂಪಿಯನ್ಶಿಪ್(Snooker World Cup) ಫೈನಲ್‌ನಲ್ಲಿ ಭಾರತ ʼಎʼ ತಂಡವು ಇಂಗ್ಲೆಂಡ್ ʼಎʼ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಇಲ್ಲಿನ ಹೈಎಂಡ್ ಸ್ನೂಕರ್ ಕ್ಲಬ್‌ನಲ್ಲಿ ನಡೆದ ಈ ಹಣಾಹಣಿಯಲ್ಲಿ 12 ಬಾರಿ ವಿಶ್ವ ಚಾಂಪಿಯನ್ ಆಗಿರುವ ಇಂಗ್ಲೆಂಡ್‌ನ ರಿಯಾನ್ನೆ ಇವಾನ್ಸ್ ಮತ್ತು ಪ್ರಸ್ತುತ ವಿಶ್ವದ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ರೆಬೆಕಾ ಕೆನ್ನಾ ಅವರನ್ನು ಭಾರತದ ಶ್ರೇಯಾಂಕ ರಹಿತ ಜೋಡಿಯಾದ ಅಮೀ ಕಮಾನಿ(Amee Kamani) ಮತ್ತು ಅನುಪಮಾ ರಾಮಚಂದ್ರನ್(Anupama Ramachandran) ಅವರಿಂದ ಪ್ರತಿನಿಧಿಸಲ್ಪಟ್ಟ ತಂಡವು 4-3 (26-56, 27-67(51), 61-41, 52-27, 11-68(34), 64-55, 39-78) ಅಂತರದಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.
ʼಈ ಗೆಲುವನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಕಠಿಣ ಪರಿಶ್ರಮ ಈಗ ಫಲ ನೀಡಿದೆ ಇದು ಕೇವಲ ಪ್ರಾರಂಭ. ಭಾರತ ಹೆಮ್ಮೆ ಪಡುವಂತ ಪ್ರದರ್ಶನ ನೀಡಿದ್ದು ಖುಷಿ ತಂದಿದೆʼ ಎಂದು ಗೆಲುವಿನ ಬಳಿಕ ಅಮೀ ಕಮಾನಿ ತಿಳಿಸಿದರು.
ಇದನ್ನೂ ಓದಿ Spanish Para-Badminton: ಕಂಚಿನ ಪದಕ ವಿಜೇತ ಕನ್ನಡಿಗ ಸುಹಾಸ್ ಸ್ವದೇಶಕ್ಕೆ ಆಗಮನ
ʼಅನುಭವಿ ಆಟಗಾರರ ಸವಾಲನ್ನು ಮೀರಿ ವಿಶ್ವಕಪ್ ಗೆದ್ದಿರುವುದು ಸಂತೋಷ ತಂದಿದೆ. ಮೊದಲೆರಡು ದಿನಗಳ ಕಾಲ ಇಲ್ಲಿನ ಟೇಬಲ್‌ಗಳಿಗೆ ಹೊಂದಿಕೊಳ್ಳಲು ತುಂಬಾ ಕಷ್ಟವಾಯಿತು. ಆದರೂ ಛಲ ಬಿಡದೆ ಆಡಿದ ಪರಿಣಾಮ ಗೆಲುವು ಸಾಧ್ಯವಾಯಿತುʼ ಎಂದು ಅನುಪಮಾ ರಾಮಚಂದ್ರನ್ ಸಂತಸ ವ್ಯಕ್ತಪಡಿಸಿದರು.