ನವದೆಹಲಿ: ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್(Dutee Chand) ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಪಾಸಿಟಿವ್(Dutee Chand Failing Dope Test) ಬಂದ ಕಾರಣದಿಂದ ಅವರನ್ನು ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ 4 ವರ್ಷಗಳ ಕಾಲ ನಿಷೇಧ ಶಿಕ್ಷೆಗೆ ಗುರಿಪಡಿಸಿದೆ(Dutee Chand ban). ಇದರಿಂದ ಮುಂಬರುವ ಏಷ್ಯಾನ್ ಗೇಮ್ಸ್(Asian Games) ಮತ್ತು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅವರ ಕನಸು ನುಚ್ಚು ನೂರಾಗಿದೆ.
ಕಳೆದ ವರ್ಷ ಡಿಸೆಂಬರ್ 5ರಂದು ಭುವನೇಶ್ವರದಲ್ಲಿ ದ್ಯುತಿ ಅವರಿಂದ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಲಾಗಿತ್ತು. ಇದರಲ್ಲಿ ನಿಷೇಧಿತ ಅಂಶ ಇರುವುದು ಪತ್ತೆಯಾಗಿತ್ತು. ದ್ಯುತಿ ಅವರು ಸ್ನಾಯು ಮತ್ತು ಮೂಳೆಗಳ ಬಲವರ್ಧನೆಗಾಗಿ ಈ ಪದಾರ್ಥವನ್ನು ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ಅವರಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು ಪತ್ರವೊಂದನ್ನು ಬರೆದು ಎಚ್ಚರಿಕೆಯನ್ನು ನೀಡಿ ತಾತ್ಕಾಲಿಕವಾಗಿ ಅಮಾನತು ಮಾಡಲಾತ್ತು. ಇದೀಗ 4 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.
ಆರಂಭದಲ್ಲಿ ‘ಎ’ ಸ್ಯಾಂಪಲ್ ಪರೀಕ್ಷೆಯಲ್ಲಿ ಮದ್ದಿನ ಅಂಶ ಇರುವುದು ಕಂಡುಬಂದಿತ್ತು. ಇದಾದ ಬಳಿಕ ಅವರಿಗೆ ‘ಬಿ’ ಸ್ಯಾಂಪಲ್ ಪರೀಕ್ಷೆ ಮಾಡಲಾಗಿದೆ. ಇದರಲ್ಲಿಯೂ ಅವರು ನಿಷೇಧಿತ ಮದ್ದು ಸೇವನೆ ಮಾಡಿರುವುದು ಸಾಬೀತಾಗಿದೆ. ಹೀಗಾಗಿ ಈ ಶಿಕ್ಷೆ ವಿಧಿಸಲಾಗಿದೆ. ಒಂದೊಮ್ಮೆ ಬಿ ಸ್ಯಾಂಪಲ್ನಲ್ಲಿ ನೆಗೆಟಿವ್ ಬಂದಿದ್ದರೆ ಅವರು ಈ ನಿಷೇಧ ಶಿಕ್ಷೆಗೆ ಗುರಿಯಾಗುತ್ತಿರಲಿಲ್ಲ.
ಇದನ್ನೂ ಓದಿ Dutee Chand | ನಿಷೇಧಿತ ಉದ್ದೀಪನ ಮದ್ದು ಸೇವನೆ ಆರೋಪ; ದ್ಯುತಿ ಚಂದ್ ಅಮಾನತು
ರಾಷ್ಟ್ರೀಯ ದಾಖಲೆ ಹೊಂದಿರುವ ದ್ಯುತಿ ಚಂದ್ ಅವರು ದ್ಯುತಿ ಅವರು ಜಕಾರ್ತದಲ್ಲಿ 2018ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ 100 ಮತ್ತು 200 ಮೀಟರ್ಸ್ ಓಟಗಳಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2021 ರ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ 11.17 ಸೆಕೆಂಡ್‌ಗಳಲ್ಲಿ 100 ಮೀ ಓಡಿ ಹೊಸ ಭಾರತೀಯ ಮಹಿಳಾ ದಾಖಲೆಯನ್ನು ಸ್ಥಾಪಿಸಿದ್ದರು.
ನಿಷೇಧವು ಜನವರಿ 3, 2023 ರಿಂದ ಪ್ರಾರಂಭವಾಗುತ್ತದೆ ಮತ್ತು ಮಾದರಿ ಸಂಗ್ರಹಣೆಯ ದಿನಾಂಕದಿಂದ (ಡಿಸೆಂಬರ್ 5, 2022) ಅವರು ಪಡೆದ ಎಲ್ಲ ಸ್ಪರ್ಧಾತ್ಮಕ ಫಲಿತಾಂಶಗಳನ್ನು ಅನರ್ಹಗೊಳಿಸಲಾಗುತ್ತದೆ ಮತ್ತು ಅವರು ಗೆದ್ದ ಪದಕಗಳು, ಅಂಕಗಳು ಮತ್ತು ಬಹುಮಾನಗಳನ್ನು ವಾಪಸ್ ಪಡೆಯಲಾಗುತ್ತದೆ ಎಂದು ಟೈಮ್ಸ್ ವರದಿ ಮಾಡಿದೆ.
ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆ (ADRV) ಉದ್ದೇಶಪೂರ್ವಕವಲ್ಲ ಎಂದು ಸಾಬೀತುಪಡಿಸುವಲ್ಲಿ ದ್ಯತಿ ವಿಫಲರಾಗಿದ್ದಾರೆ. ಕ್ರೀಡಾಪಟುವು ವೈದ್ಯರನ್ನು ಸಂಪರ್ಕಿಸುವ ಬದಲು ತನ್ನ ಫಿಸಿಯೋಥೆರಪಿಸ್ಟ್ ಸಂಪರ್ಕಿಸಿ ಶಿಫಾರಸು ಮಾಡದ ಔಷಧಿಗಳನ್ನು ಸೇವಿಸಿದ್ದಾರೆ. ವಾಡಾ ಇತ್ತೀಚೆಗೆ ಪ್ರಕಟಿಸಿದ ನಿಷೇಧಿತ ಪದಾರ್ಥಗಳ ಪಟ್ಟಿಯಲ್ಲಿ ಈ ಮದ್ದು ಕೂಡ ಸೇರಿದೆ. ಇದರಿಂದ ಅವರು ಈ ಶಿಕ್ಷೆಗೆ ಒಳಗಾದರು ಎಂದು ಚೈತನ್ಯ ಮಹಾಜನ್ ನೇತೃತ್ವದ ಎಡಿಡಿಪಿ ತನ್ನ ಆದೇಶದಲ್ಲಿ ತಿಳಿಸಿದೆ.