ಮುಂಬಯಿ : ಪ್ರವಾಸಿ ಶ್ರೀಲಂಕಾ (INDvsSL) ವಿರುದ್ಧದ ಟಿ20 ಹಾಗೂ ಏಕ ದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಮಂಗಳವಾರ ರಾತ್ರಿ ಪ್ರಕಟಿಸಿದೆ. ತಂಡದಿಂದ ಹೊರಕ್ಕೆ ಇಡಲಾಗುತ್ತದೆ ಎಂದು ಹೇಳಲಾಗಿದ್ದ ಕೆ ಎಲ್ ರಾಹುಲ್ ಅವರಿಗೆ ಏಕ ದಿನ ಬಳಗದಲ್ಲಿ ಅವಕಾಶ ನೀಡಲಾಗಿದೆ. ಆದರೆ, ಅವರಿಂದ ನಾಯಕತ್ವದ ಜವಾಬ್ದಾರಿಯನ್ನು ವಾಪಸ್ ಪಡೆಯಲಾಗಿದೆ. ಅಂದರೆ, ಉಪನಾಯಕನ ಪಟ್ಟದಿಂದ ಕೆಳಕ್ಕಿಳಿಸಿ ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಕೈ ನೋವಿನ ಸಮಸ್ಯೆಯಿಂದ ಸುಧಾರಿಸಿಕೊಂಡಿರುವ ಕಾಯಂ ನಾಯಕ ರೋಹಿತ್ ಶರ್ಮ ಕೂಡ ಈ ಸರಣಿಗೆ ಮರಳಲಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ತಂಡದ ನೇತೃತ್ವ ವಹಿಸಲಿದ್ದಾರೆ. ಅಚ್ಚರಿಯೆಂದರೆ ನ್ಯೂಜಿಲ್ಯಾಂಡ್ ಸರಣಿಯವರೆಗೆ ಏಕ ದಿನ ತಂಡದ ನಾಯಕತ್ವ ವಹಿಸಿದ್ದ ಎಡಗೈ ಬ್ಯಾಟರ್ ಶಿಖರ್ ಧವನ್ಗೆ ಯಾವುದೇ ತಂಡದಲ್ಲಿ ಅವಕಾಶ ಕಲ್ಪಿಸಿಲ್ಲ.
ಜನವರಿ 3ರಿಂದ ಜನವರಿಗೆ 7ರವರೆಗೆ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಗೊಂಡಿದ್ದರೆ, 10ರಿಂದ 15ರವರೆಗೆ ಮೂರು ಪಂದ್ಯಗಳ ಏಕ ದಿನ ಸರಣಿ ನಡೆಯಲಿದೆ. ಎರಡೂ ಸರಣಿಯಿಂದ ಕಾಯಂ ವಿಕೆಟ್ ಕೀಪರ್ ರಿಷಭ್ ಪಂತ್ಗೆ ವಿಶ್ರಾಂತಿ ನೀಡಲಾಗಿದೆ. ಇದೇ ವೇಳೆ ಟಿ20 ಬಳಗದಲ್ಲಿ ಸಂಜು ಸ್ಯಾಮ್ಸನ್ಗೆ ಅವಕಾಶ ಕಲ್ಪಿಸಲಾಗಿದೆ. ಸೂರ್ಯಕುಮಾರ್ ಯಾದವ್ ಟಿ20 ತಂಡದ ಉಪನಾಯಕನ ಹೊಣೆಗಾರಿಕೆ ವಹಿಸಿಕೊಂಡಿದ್ದರೆ, ಏಕ ದಿನ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ಕಲ್ಪಿಸಲಾಗಿದೆ. ಇದೇ ವೇಳೆ ವೇಗದ ದ್ವಿಶತಕ ಬಾರಿಸಿ ದಾಖಲೆ ಬರೆದಿದ್ದ ಇಶಾನ್ ಕಿಶನ್ಗೆ ಎರಡೂ ತಂಡಗಳಲ್ಲಿ ಅವಕಾಶ ಸಿಕ್ಕಿದೆ.
ಏಕ ದಿನ ತಂಡಕ್ಕೆ ರಾಹುಲ್ ಇದುವರೆಗೆ ಉಪನಾಯಕರಾಗಿದ್ದರು. ಇದೀಗ ಅವರಿಂದ ನಾಯಕತ್ವದ ಪದವಿ ಕಸಿಯಲಾಗಿದ್ದು, ಭವಿಷ್ಯದ ನಾಯಕ ಎಂದೇ ಕರೆಯಲಾಗುವ ಹಾರ್ದಿಕ್ ಪಾಂಡ್ಯಗೆ ಆ ಸ್ಥಾನವನ್ನು ಕಲ್ಪಿಸಲಾಗಿದೆ. ಐಪಿಎಲ್ ಹರಾಜಿನಲ್ಲಿ 6 ಕೋಟಿ ರೂಪಾಯಿ ಪಡೆದಿರುವ ಯುವ ಬೌಲರ್ ಶಿವಂ ಮಾವಿಗೂ ಮಾರಕ ವೇಗಿ ಉಮ್ರಾನ್ ಮಲಿಕ್ಗೆ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದೆ. ಉಮ್ರಾನ್ ಏಕ ದಿನ ತಂಡದಲ್ಲೂ ಅವಕಾಶ ಪಡೆದುಕೊಂಡಿದ್ದು, ಮೊಹಮ್ಮದ್ ಸಿರಾಜ್ ಕೂಡ ಭಾರತ ಬಳಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದುಕೊಂಡಿಲ್ಲ.
ಭಾರತ ಟಿ20 ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ಕೀಪರ್), ರುತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಶ್ದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.
ಭಾರತ ಏಕ ದಿನ ತಂಡ
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ಮೊ. ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್.
ಪಂದ್ಯ ವೇಳಾಪಟ್ಟಿ
ಪಂದ್ಯ | ದಿನಾಂಕ | ಸ್ಥಳ |
ಮೊದಲ ಟಿ20 | ಜನವರಿ 03 | ಮುಂಬಯಿ |
ಎರಡನೇ ಟಿ20 | ಜನವರಿ 05 | ಪುಣೆ |
ಮೂರನೇ ಟಿ20 | ಜನವರಿ 07 | ರಾಜ್ಕೋಟ್ |
ಮೊದಲ ಏಕದಿನ | ಜನವರಿ 10 | ಗುವಾಹಟಿ |
ಎರಡನೇ ಏಕದಿನ | ಜನವರಿ 12 | ಕೋಲ್ಕೊತಾ |
ಮೂರನೇ ಏಕದಿನ | ಜನವರಿ 15 | ತಿರುವನಂತಪುರ |
ಇದನ್ನೂ ಓದಿ | Team India | ಟಿ20 ತಂಡದಿಂದ ಕೆ ಎಲ್ ರಾಹುಲ್ ಔಟ್?; ಗಾಯದಿಂದ ಸುಧಾರಿಸದ ರೋಹಿತ್ ಶರ್ಮ