Site icon Vistara News

IND vs PAK | ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕೆ 182 ರನ್‌ಗಳ ಗೆಲುವಿನ ಗುರಿಯೊಡ್ಡಿದ ಭಾರತ ತಂಡ

ind vs pak

ದುಬೈ : ವಿರಾಟ್‌ ಕೊಹ್ಲಿ (೬೦) ಅಮೋಘ ಆರ್ಧ ಶತಕದ ನೆರವು ಪಡೆದ ಭಾರತ ತಂಡ ಏಷ್ಯಾ ಕಪ್‌-೨೦೨೨ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ವಿರುದ್ಧ ೧೮೧ ರನ್‌ಗಳ ಬೃಹತ್‌ ಮೊತ್ತ ಪೇರಿಸಿದೆ. ದುಬೈ ಅಂತಾರಾಷ್ಟ್ರಿಯ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಲು ಆಹ್ವಾನ ಪಡೆದ ಭಾರತ ತಂಡ, ಆರಂಭದಲ್ಲಿ ವೇಗದ ಗಳಿಕೆಗೆ ಒತ್ತು ಕೊಟ್ಟರೂ ಬಳಿಕ ವಿಕೆಟ್ ಕಳೆದುಕೊಂಡ ಕಾರಣ ೨೦೦ ರನ್‌ಗಳ ಗಡಿ ದಾಟುವ ಯೋಜನೆ ವಿಫಲಗೊಂಡಿತು.

ಫಾರ್ಮ್‌ ಮರಳಿದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ೩೬ ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರಲ್ಲದೆ,44 ಎಸೆತಗಳಲ್ಲಿ 1 ಸಿಕ್ಸರ್‌ 4 ಫೋರ್‌ಗಳ ಸಮೇತ 60 ರನ್‌ ಬಾರಿಸಿದರು. ಅಲ್ಲದೆ, ಸಿಕ್ಸರ್ ಮೂಲಕ ಅರ್ಧ ಶತಕ ಬಾರಿಸಿ ತಮ್ಮ ಬ್ಯಾಟಿಂಗ್‌ ಖದರ್‌ ತೋರಿದರು. ಹಾಲಿ ಏಷ್ಯಾ ಕಪ್‌ನಲ್ಲಿ ಇದು ಅವರ ಎರಡನೇ ಅರ್ಧ ಶತಕವಾಗಿದೆ. ಹಾಂಕಾಂಗ್‌ ವಿರುದ್ಧವೂ ಅವರು ಅರ್ಧ ಶತಕ (೫೯*) ಬಾರಿಸಿದ್ದರು. ಅಂತೆಯೇ ಪಾಕಿಸ್ತಾನ ವಿರುದ್ಧದ ಈ ಹಿಂದಿನ ಪಂದ್ಯದಲ್ಲಿ ೩೫ ರನ್‌ ಬಾರಿಸಿದ್ದರು.

ಭಾರತದ ಆರಂಭಿಕ ಜೋಡಿಯಾಗಿರುವ ರೋಹಿತ್‌ ಶರ್ಮ (೨೮) ಹಾಗೂ ಕೆ.ಎಲ್‌ ರಾಹುಲ್‌ (೨೮) ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಹಿಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಕಾಡಿದ್ದ ಬೌಲರ್‌ ನಾಸಿಮ್‌ ಶಾ ಅವರನ್ನು ಸತತವಾಗಿ ದಂಡಿಸಿದರು. ೧೦ ರನ್‌ಗಳ ಸರಾಸರಿಯಂತೆ ರನ್ ಗಳಿಸಿದ ಅವರಿಬ್ಬರೂ ಮೊದಲ ೫.೧ ಓವರ್‌ಗಳಲ್ಲಿ ೫೪ ರನ್‌ ಬಾರಿಸಿದರು. ಆದರೆ ರವೂಫ್ ಎಸೆತಕ್ಕೆ ದೊಡ್ಡ ಹೊಡೆತ ಬಾರಿಸಲು ಮುಂದಾದ ರೋಹಿತ್ ವಿಕೆಟ್‌ ಒಪ್ಪಿಸಿದರು. ಸ್ವಲ್ಪ ಹೊತ್ತಿನಲ್ಲೇ ಶದಬ್‌ ಖಾನ್‌ ಎಸೆತಕ್ಕೆ ಸಿಕ್ಸರ್‌ ಬಾರಿಸಲು ಮುಂದಾದ ರಾಹುಲ್‌ ಕೂಡ ಔಟಾದರು. ನಂತರ ಬಂದ ಸೂರ್ಯಕುಮಾರ್‌ ಯಾದವ್‌ ನಿರೀಕ್ಷೆ ಮೂಡಿಸಿದರೂ ೧೩ ರನ್‌ಗಳಿಗೆ ಔಟಾದರು. ಆದಾಗ್ಯೂ ೧೦.೪ ಓವರ್‌ಗಳಲ್ಲಿ ಭಾರತ ೧೦೦ ರನ್‌ಗಳ ಗಡಿ ದಾಟಿತು.

ಹಾರ್ದಿಕ್‌ ಫೇಲ್‌

ಬಳಿಕ ರಿಷಭ್‌ ಪಂತ್‌ (೧೪) ಸ್ವಲ್ಪ ಹೊತ್ತು ಬ್ಯಾಟಿಂಗ್‌ ಮಾಡಿ ಅನಗತ್ಯವಾಗಿ ವಿಕೆಟ್ ಒಪ್ಪಿಸಿದರು. ಅಂತೆಯೇ ಪಾಕಿಸ್ತಾನ ವಿರುದ್ಧದ ಹಿಂದಿನ ಪಂದ್ಯದಲ್ಲಿ ಆಲ್‌ರೌಂಡ್‌ ಆಟ ಪ್ರದರ್ಶಿಸಿದ್ದ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಬಂದ ದೀಪಕ್‌ ಹೂಡ ೧೬ ರನ್‌ಗಳ ಕೊಡುಗೆ ಕೊಟ್ಟರು.

ಸ್ಕೋರ್‌ ವಿವರ

ಭಾರತ ೨೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೧೮೧ (ವಿರಾಟ್‌ ಕೊಹ್ಲಿ ೬೦, ಕೆ.ಎಲ್‌ ರಾಹುಲ್‌ ೨೮, ರೋಹಿತ್ ಶರ್ಮ 28, ಸೂರ್ಯಕುಮಾರ್‌ ಯಾದವ್‌ ೧೩, ರಿಷಭ್‌ ಪಂತ್‌ ೧೪, ದೀಪಕ್‌ ಹೂಡ ೧೬; ಶದಬ್‌ ಖಾನ್‌ ೩೧ಕ್ಕೆ೨).

Exit mobile version