Site icon Vistara News

ICC World Cup 2023 : ದಕ್ಷಿಣ ಆಫ್ರಿಕಾ ಔಟ್​; ಭಾರತ- ಆಸ್ಟ್ರೇಲಿಯಾ ಫೈನಲ್ ಫೈಟ್​

Australia Cricket team

ಕೋಲ್ಕೊತಾ: ಚೋಕರ್ಸ್​ ದಕ್ಷಿಣ ಆಫ್ರಿಕಾ ತಂಡ ಮತ್ತೊಂದು ಬಾರಿ ಬಾರಿ ಚೋಕರ್ಸ್ ಪಟ್ಟವನ್ನು ತನ್ನದಾಗಿಸಿಕೊಂಡು 2023ರ ವಿಶ್ವ ಕಪ್ (ICC World Cup 2023)​ ಅಭಿಯಾನವನ್ನು ಮುಗಿಸಿದೆ. ಕೋಲ್ಕೊತಾದಲ್ಲಿ ರೋಚಕವಾಗಿ ನಡೆದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್​ ಆಸ್ಟ್ರೇಲಿಯಾ ವಿರುದ್ಧ 3 ವಿಕೆಟ್​ಗಳ ಸೋಲು ಅನುಭವಿಸಿ ತವರಿಗೆ ಮರಳುವಂತಾಗಿದೆ. ದಕ್ಷಿಣ ಆಫ್ರಿಕಾ ತಂಡ ಹಾಲಿ ಆವೃತ್ತಿ ಸೇರಿದಂತೆ ಒಟ್ಟು ಐದು ಬಾರಿ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದ್ದು ಒಂದೇ ಒಂದು ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ ಎಂಬುದೇ ವಿಪರ್ಯಾಸ. 1992ರಲ್ಲಿ ಮೊದಲ ಬಾರಿಗೆ ವಿಶ್ವ ಕಪ್​ಗೆ ಪ್ರವೇಶ ಪಡೆದಿದ್ದ ಹರಿಣಗಳ ಪಡೆ ಎಂಟು ಆವೃತ್ತಿಯ ವಿಶ್ವ ಕಪ್​ನಲ್ಲಿ ಆಡಿದೆ. ಅದರಲ್ಲಿ ಐದು ಬಾರಿ ನಾಕೌಟ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಆದರೆ ತಂಡಕ್ಕೆ ಪ್ರಶಸ್ತಿ ಗೆಲ್ಲುವ ಅವಕಾಶ ಇನ್ನೂ ಒದಗಿ ಬಂದಿಲ್ಲ.

ಸಮಯೋಚಿತ ಪ್ರದರ್ಶನದ ಮೂಲಕ ಗೆಲುವು ಕಂಡಿರುವ ಪ್ಯಾಟ್​ ಕಮಿನ್ಸ್ ನೇತೃತ್ವದ ಆಸೀಸ್ ಪಡೆದ ಎಂಟನೇ ಬಾರಿ ಏಕ ದಿನ ವಿಶ್ವ ಕಪ್​ನ ಫೈನಲ್​ಗೇರಿದೆ. ಆಸೀಸ್ ತಂಡ ಇದುವರೆಗೆ ಐದು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದು ಏಕ ದಿನ ವಿಶ್ವ ಕಪ್​ ಅತ್ಯಂತ ಯಶಸ್ವಿ ತಂಡ ಎಂಬ ಖ್ಯಾತಿ ಪಡೆದುಕೊಂಡಿದೆ. 1975ರಲ್ಲಿ ನಡೆದ ಮೊಟ್ಟ ಮೊದಲ ಆವೃತ್ತಿ ಹಾಗೂ 1996ರಲ್ಲಿ ಲಂಕಾ ತಂಡ ಚಾಂಪಿಯನ್ ಆದ ವರ್ಷ ಆಸ್ಟ್ರೇಲಿಯಾ ತಂಡ ಫೈನಲ್​ನಲ್ಲಿ ಸೋಲು ಕಂಡಿತ್ತು. ಈ ತಂಡ ಭಾನುವಾರ (ನವೆಂಬರ್​ 19ರಂದು) ನಡೆಯುವ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ಎದುರಾಗಲಿದೆ. ಈ ಮೂಲಕ ಪ್ರಶಸ್ತ ಸುತ್ತಿನಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ನಿರೀಕ್ಷೆ ಮಾಡಲಾಗಿದೆ.

ಹರಿಣಗಳ ಬ್ಯಾಟಿಂಗ್​ ವೈಫಲ್ಯ

ಕೋಲ್ಕೊತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಸೆಮಿ ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬ ಬವುಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 49.4 ಓವರ್​​ಗಳಲ್ಲಿ 212 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ ಇನ್ನೂ 16 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್​ಗೆ 215 ರನ್ ಗಳಿಸಿ ಗೆಲುವು ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್​ಗಳು ಸಂಪೂರ್ಣ ವೈಫಲ್ಯ ಕಂಡರು. ಆದರೆ, ಎಡಗೈ ಬ್ಯಾಟರ್​​ ಡೇವಿಡ್​ ಮಿಲ್ಲರ್​ ಏಕಾಂಕಿಯಾಗಿ ಆಡಿ ಶತಕ (101 ರನ್​) ಬಾರಿಸಿದರು. ಅವರ ರನ್​ಗಳ ನೆರವಿನಿಂದ ತಂಡಕ್ಕೆ ಕನಿಷ್ಠ ಪಕ್ಷ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. ಹೆನ್ರಿಚ್ ಕ್ಲಾಸೆನ್ 47 ರನ್​ ಗಳಿಸಿ ಸ್ವಲ್ಪ ಹೊತ್ತು ತಂಡಕ್ಕೆ ನೆರವಾದರು. ಉಳಿದವರೆಲ್ಲರೂ ಅತ್ಯಂತ ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶಿಸಿದರು.

ಬ್ಯಾಟಿಂಗ್ ವೈಫಲ್ಯ

ಕ್ವಿಂಟನ್ ಡಿ ಕಾಕ್​ 3 ರನ್ ಬಾರಿಸಿದರೆ ಬವುಮಾ ಶೂನ್ಯಕ್ಕೆ ಔಟಾದರು. ಡಸ್ಸೆನ್ 6 ಹಾಗೂ ಮಾರ್ಕ್ರಮ್​ 10 ರನ್​ಗೆ ಸೀಮಿತಗೊಂಡರು. ಹೀಗಾಗಿ ಮೊದಲ 24 ರನ್​ಗಳಿಗೆ ದಕ್ಷಿಣ ಆಫ್ರಿಕಾ 4 ವಿಕೆಟ್ ಕಳೆದುಕೊಂಡಿತು. ಆದರೆ, ನಂತರದಲ್ಲಿ ಕ್ಲಾಸೆನ್ ಹಾಗೂ ಮಿಲ್ಲರ್​ 95 ರನ್​​ಗಳ ಜತೆಯಾಟವಾಡಿ ಭರವಸೆ ಮೂಡಿಸಿದರು. ಆ ಬಳಿಕವೂ ತಂಡದ ಬ್ಯಾಟಿಂಗ್ ಲಯ ಕಂಡುಕೊಳ್ಳದ ಕಾರಣ ಗೆಲುವಿಗೆ ಬೇಕಾದ ಮೊತ್ತವನ್ನು ಪೇರಿಸಲಿಲ್ಲ.

ಇದನ್ನೂ ಓದಿ : ICC World Cup 2023 : ಫೈನಲ್ ಮ್ಯಾಚ್ ನೋಡಲು ಮೋದಿ ಬರ್ತಾರಾ?

ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 61 ರನ್ ಬಾರಿಸಿತು. ವಾರ್ನರ್​ (29) ಹಾಗೂ ಟ್ರಾವಿಸ್ ಹೆಡ್​ (62) ಗೆಲುವಿಗೆ ಬೇಕಾದ ಅಡಿಪಾಯ ಹಾಕಿಕೊಟ್ಟರು. ನಂತರದ ವಿಕೆಟ್ ರೂಪದಲ್ಲಿ ಮಿಚೆಲ್ ಮಾರ್ಷ್​ ಶೂನ್ಯಕ್ಕೆ ಔಟಾದರು. ಬಳಿಕ ಸ್ಟೀವ್​ ಸ್ಮಿತ್ 30 ಹಾಗೂ ಮರ್ನಸ್​​ 18 ರನ್ ಬಾರಿಸಿದರು. ಕೊನೆಯಲ್ಲಿ ಜೋಶ್ ಇಂಗ್ಲಿಸ್ ರನ್ ಬಾರಿಸಿ ಗೆಲವು ತಂದುಕೊಟ್ಟರು.

ಮೊದಲೆರಡು ಸೋಲು ಮಾತ್ರ

ಆಸ್ಟ್ರೇಲಿಯಾ ತಂಡಕ್ಕೆ ಇದು ಸತತ ಎಂಟನೇ ಗೆಲುವಾಗಿದೆ. ಅಂದ ಹಾಗೆ ಹಾಲಿ ವಿಶ್ವ ಕಪ್​ನಲ್ಲಿ ಆಸ್ಟ್ರೇಲಿಯಾ ತಂಡದ ಅರಂಭ ಉತ್ತಮವಾಗಿರಲಿಲ್ಲ. ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸೋಲುವ ಮೂಲಕ ನಿರಾಸೆ ಎದುರಿಸಿತ್ತು. ಈ ವೇಳೆ ಈ ತಂಡ ನಾಕೌಟ್​ಗೆ ಬರುವುದೇ ಅನುಮಾನ ಎಂದು ಹೇಳಲಾಗಿತ್ತು. ಆದರೆ, ಆ ಬಳಿಕ ಚೇತರಿಸಿಕೊಂಡ ತಂಡ ಗೆಲುವಿನ ಅಭಿಯಾನ ಮುಂದುವರಿಸಿ ಫೈನಲ್​ಗೆ ಪ್ರವೇಶ ಪಡೆಯಿತು.

1999ರ ವಿಶ್ವ ಕಪ್​ ಸೆಮಿಫೈನಲ್ ನೆನಪು

1999ರ ವಿಶ್ವ ಕಪ್​ನ ಸೆಮಿ ಫೈನಲ್​ನಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಸೃಷ್ಟಿಯಾಗಿತ್ತು. ಅಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 49.4 ಓವರ್​ಗಳಲ್ಲಿ 213 ರನ್​ ಬಾರಿಸಿತ್ತು. ಪಂದ್ಯ ಟೈ ಆದ ಕಾರಣ ಹೆಚ್ಚು ರ್ಯಾಂಕ್ ಪಡೆದುಕೊಂಡಿದ್ದ ಆಸ್ಟ್ರೇಲಿಯಾ ಫೈನಲ್​ಗೆ ಹೋಗಿತ್ತು. ಈ ಪಂದ್ಯದಲ್ಲಿಯೂ ದಕ್ಷಿಣ ಆಫ್ರಿಕಾ 49.4 ಓವರ್​ಗಳಲ್ಲಿ 212 ರನ್ ಬಾರಿಸಿತ್ತು. ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿತು.

Exit mobile version