Site icon Vistara News

Ind vs Afg t20 series : ಅಫಘಾನಿಸ್ತಾನ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ ಜಯ, ಸರಣಿ ಕೈವಶ

Team india

ಇಂದೋರ್​: ಪ್ರವಾಸಿ ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯ (Ind vs Afg t20 series) ಎರಡನೇ ಪಂದ್ಯದಲ್ಲೂ ಭಾರತ ತಂಡ 6 ವಿಕೆಟ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ತಂಡ ಮೂರು ಪಂದ್ಯಗಳ ಸರಣಿಯನ್ನು ಇನ್ನೊಂದು ಹಣಾಹಣಿ ಬಾಕಿ ಇರುವಂತೆಯೇ ಕೈವಶ ಮಾಡಿಕೊಂಡಿದೆ. ಮೊಹಾಲಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್​ಗಳ ವಿಜಯ ಸಾಧಿಸಿತ್ತು. ಯಶಸ್ವಿ ಜೈಸ್ವಾಲ್​ (68, 34 ಎಸೆತ, 5 ಫೋರ್​, 6 ಸಿಕ್ಸರ್​) ಹಾಗೂ ಶಿವಂ ದುಬೆ (63 ರನ್​, 32 ಎಸೆತ, 5 ಫೋರ್ , 4 ಸಿಕ್ಸರ್​) ಬ್ಯಾಟಿಂಗ್​ನಲ್ಲಿ ಮಿಂಚಿ ಭಾರತದ ಗೆಲುವು ಸುಲಭವಾಗಿಸಿದರು. ಉಭಯ ತಂಡಗಳ ನಡುವಿನ ಮೂರನೇ ಪಂದ್ಯ ಜನವರಿ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡಕ್ಕೆ ಮೂರು ತಿಂಗಳ ಅವಧಿಯಲ್ಲಿ ಸತತ ಮೂರನೇ ಸರಣಿ ಗೆಲುವಾಗಿದೆ. ಈ ಹಿಂದೆ ತವರಲ್ಲಿ ಆಸ್ಟ್ರೇಲಿಯಾ ವಿರುದ್ಧ, ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವಿಜಯ ಕಂಡಿತ್ತು.

ಇಲ್ಲಿನ ಹೋಳ್ಕರ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಅಫಘಾನಿಸ್ತಾನ ತಂಡ ಉತ್ತಮವಾಗಿ ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 172 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ ಇನ್ನೂ 26 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ಗೆ 173 ರನ್ ಬಾರಿಸಿ ಗೆಲುವು ಸಾಧಿಸಿತು.

ಗುರಿ ಬೆನ್ನಟ್ಟಿದ್ದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾಗುವ ಮೂಲಕ ಹಿನ್ನಡೆ ಉಂಟಾಯಿತು. ಹಾಲಿ ಸರಣಿಯಲ್ಲಿ ರೋಹಿತ್ ಸತತ ಎರಡನೇ ಬಾರಿ ಡಕ್​ಔಟ್​ ಆದಂತಾಯಿತು. ಆದರೆ, ಇನ್ನೊಂದು ತುದಿಯಲ್ಲಿ ಯಶಸ್ವಿ ಜೈಸ್ವಾಲ್ ಅಬ್ಬರಿಸಲು ಆರಂಭಿಸಿದರು. ಅವರಿಗೆ ವಿರಾಟ್ ಕೊಹ್ಲಿ (29 ರನ್​ 16 ಎಸೆತ) ಸಾಥ್ ಕೊಟ್ಟರು. ಅವರಿಬ್ಬರು ಎರಡನೇ ವಿಕೆಟ್​ಗೆ 62 ರನ್ ಬಾರಿಸಿದರು. ಈ ಹಂತದಲ್ಲಿ ಜತೆಯಾದ ಶಿವಂ ದುಬೆ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ರನ್ ಗಳಿಕೆಯನ್ನು 154ಕ್ಕೆ ಅವರಿಬ್ಬರು ಕೊಂಡೊಯ್ದರು. ನಂತರ ಬಂದ ಜಿತೇಶ್​ ಶರ್ಮಾ ಶೂನ್ಯಕ್ಕೆ ಔಟಾದರು. ಕೊನೆಯಲ್ಲಿ ರಿಂಕು ಸಿಂಗ್ 9 ರನ್ ಕೊಡುಗೆ ಕೊಟ್ಟರು.

ದುಬೆ ಭರ್ಜರಿ ಬ್ಯಾಟಿಂಗ್​

ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಶಿವಂ ದುಬೆ ಮತ್ತೊಂದು ಬಾರಿ ಮಿಂಚಿದರು. ಬೌಂಡರಿ, ಸಿಕ್ಸರ್​ಗಳೊಂದಿಗೆ ಮಿಂಚಿದ ಅವರು 22 ಎಸೆತಕ್ಕೆ ಅರ್ಧ ಶತಕ ಪೂರೈಸಿದವರು. ಅಂತಿಯಮವಾಗಿ 5 ಫೋರ್​ ಹಾಗೂ 4 ಸಿಕ್ಸರ್ ಸಮೇತ ಅಜೇಯ 63 ರನ್ ಬಾರಿಸಿದರು.

ಇದನ್ನೂ ಓದಿ : Rohit Sharma : ಶುಭ್​ಮನ್​ ಹೊರಗಿಟ್ಟು ಸೇಡು ತೀರಿಸಿಕೊಂಡ್ರಾ ರೋಹಿತ್​ ಶರ್ಮಾ?

ಅದಕ್ಕಿಂತ ಮೊದಲು ಬ್ಯಾಟ್​ ಮಾಡಿದ ಅಫಘಾನಿಸ್ತಾನ ತಂಡ ಏರಿಳಿತಗಳನ್ನು ಕಂಡಿತು. ಗುಲ್ಬುದ್ದೀನ್​ ನೈಬ್​ 35 ಎಸೆತಕ್ಕೆ 57 ರನ್ ಬಾರಿಸಿದರು. ನಜಿಬುಲ್ಲಾ ಜದ್ರಾನ್ 23 ರನ್ ಬಾರಿಸಿದರೆ, ಕರಿನ್ ಜನಾತ್ 20 ಹಾಗೂ ಮುಜೀಬ್ ರಹಮಾನ್ 21 ರನ್ ಕೊಡುಗೆ ಕೊಟ್ಟರು. ಭಾರತ ಪರ ಬೌಲಿಂಗ್​ನಲ್ಲಿ ಅರ್ಶ್​​ದೀಪ್​ ಸಿಂಗ್ 32 ರನ್​ಗೆ 3 ವಿಕೆಟ್ ಗಳಿಸಿದರು.

Exit mobile version