ನವದೆಹಲಿ: ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಆರಂಭಿಕ ಆಘಾತ ಎದುರಿಸಿ ಆ ಬಳಿಕ ರಾಹುಲ್ ಮತ್ತು ಕೊಹ್ಲಿಯ ಜವಾಬ್ದಾರಿಯುತ ಬ್ಯಾಟಿಂಗ್ ನರೆವಿನಿಂದ ಗೆಲುವು ಕಂಡ ಟೀಮ್ ಇಂಡಿಯಾ, ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಅಘಫಾನಿಸ್ತಾನ(India vs Afghanistan) ವಿರುದ್ಧ ಬುಧವಾರ ಸೆಣಸಾಡಲಿದೆ. ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ(Arun Jaitley Stadium) ಪಂದ್ಯ ಏರ್ಪಡಲಿದೆ.
ಬ್ಯಾಟಿಂಗ್ ಸ್ಥಿರತೆ ಅಗತ್ಯ
ಕಳೆದ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಆಟಗಾರರಾದ ರೋಹಿತ್ ಶರ್ಮ, ಇಶಾನ್ ಕಿಶನ್, ಮತ್ತು ಶ್ರೇಯಸ್ ಅಯ್ಯರ್ ಶೂನ್ಯ ಸಂಕಟಕ್ಕೆ ಒಳಗಾಗಿದ್ದರು. ಆದರೆ ಕೊಹ್ಲಿ ಮತ್ತು ರಾಹುಲ್ ತಾಳ್ಮೆಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಒಂದೊಮ್ಮೆ ಉಭಯ ಆಟಗಾರರು ನಿಂತು ಆಡದೇ ಹೋಗಿದ್ದರೆ ತಂಡ ಹೀನಾಯ ಸೋಲು ಕಾಣುತ್ತಿತ್ತು. ಹೀಗಾಗಿ ಆಫ್ಘಾನ್ ವಿರುದ್ಧದ ಪಂದ್ಯದಲ್ಲಿ ಕಿಶನ್, ರೋಹಿತ್ ಮತ್ತು ಅಯ್ಯರ್ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಬೇಕು. ಎಲ್ಲ ಪಂದ್ಯಗಳಲ್ಲಿಯೂ ರಾಹುಲ್ ಮತ್ತು ಕೊಹ್ಲಿಯನ್ನೇ ಅವಲಂಬಿಸಿದರೆ ಕಷ್ಟ. ಇವರು ಬೇಗನೆ ಔಟಾದರೆ ತಂಡಕ್ಕೆ ಹಿನ್ನಡೆಯಾಗಬಹುದು.
ರಾಹುಲ್-ಕೊಹ್ಲಿ ಪ್ರಚಂಡ ಫಾರ್ಮ್
ಗಾಯದಿಂದ ಚೇತರಿಕೆ ಕಂಡು ಏಷ್ಯಾಕಪ್ನಲ್ಲಿ ತಂಡಕ್ಕೆ ಆಗಮಿಸಿದ್ದ ಕೆ.ಎಲ್ ರಾಹುಲ್ ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಆಡಿದ ಪ್ರತಿ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ತಮ್ಮ ಹಳೆಯ ಬ್ಯಾಟಿಂಗ್ ವೈಭವವನ್ನು ತೋರ್ಪಡಿಸುತ್ತಿದ್ದಾರೆ. ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವ ವೇಳೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್, ರಾಹುಲ್ ಉಪಸ್ಥಿತಿ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಅತ್ಯುತ್ತಮ ಸಮತೋಲನ ಒದಗಿಸಲಿದೆ ಎಂದು ಹೇಳಿದ್ದರು. ಈ ಮಾತನ್ನು ರಾಹುಲ್ ಉಳಿಸಿಕೊಂಡಿದ್ದಾರೆ. ರಾಹುಲ್ ಮಾತ್ರವಲ್ಲದೆ ವಿರಾಟ್ ಕೊಹ್ಲಿಯೂ ಉತ್ತಮ ಫಾರ್ಮ್ನಲ್ಲಿರುವುದು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಹೆಚ್ಚಿನ ಬಲ ಒದಗಿದೆ.
ಬೌಲಿಂಗ್ ವಿಭಾಗದಲ್ಲಿ ಭಾರತ ತುಂಬಾ ವೈವಿಧ್ಯಮಯವಾಗಿದೆ. ಸ್ಪಿನ್ ಮತ್ತು ವೇಗಿಗಳು ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ. ಆದರೆ ವಿಕೆಟ್ ಟೇಕರ್ ಸಿರಾಜ್ ರನ್ ನೀಡದಿದ್ದರೂ ವಿಕೆಟ್ ಕೀಳುವಲ್ಲಿ ಕೊಂಚ ವಿಫಲವಾದಂತೆ ಕಾಣುತ್ತಿದೆ. ಆಸೀಸ್ ವಿರುದ್ಧದ ಪಂದ್ಯದಲ್ಲಿ ಅವರು ಉರುಳಿಸಿದ್ದು ಕೇವಲ ಒಂದು ವಿಕೆಟ್ ಅದು ಕೂಡ ಬೌಲರ್ ಸ್ಟಾರ್ಕ್ ಅವರದ್ದು. ಈ ಪಂದ್ಯದಲ್ಲಿ ಘಾತಕ ಸ್ಫೆಲ್ ನಡೆಸುವ ಆತ್ಮವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ ಭಾರತ-ಆಫ್ಘನ್ ಪಂದ್ಯಕ್ಕೆ ಮಳೆ ಕಾಟ ಇದೆಯೇ?; ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೀಗಿದೆ
ಆಫ್ಘನ್ ಅಪಾಯಕಾರಿ
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡರೂ ಅಫಘಾನಿಸ್ತಾನ ಬಲಿಷ್ಠವಾಗಿದೆ. ಹೆಚ್ಚಾಗಿ ಆಲ್ರೌಂಡರ್ಗಳೇ ಈ ತಂಡದಲ್ಲಿ ತುಂಬಿಕೊಂಡಿದ್ದಾರೆ. ಕಳೆದ 2019ರಲ್ಲಿ ಲಂಡನ್ನಲ್ಲಿ ನಡದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಆಫ್ಘಾನ್ ವಿರುದ್ಧ ಪರದಾಡಿ ಗೆಲುವು ಸಾಧಿಸಿತ್ತು. ಅದು ಕೂಡ ಕೇವಲ 11 ರನ್ ಅಂತರದಲ್ಲಿ ಹೀಗಾಗಿ ಈ ಬಾರಿ ಆಫ್ಘಾನ್ ಸವಾಲನ್ನು ಹಗುರವಾಗಿ ಪರಿಗಣಿಸಬಾರದು. ಕಡೆಗಣಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ.
ರಶೀದ್ ಖಾನ್, ಮೊಹಮ್ಮದ್ ನಬಿ, ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್ ಇವರೆಲ್ಲ ತಂಡದ ಸ್ಟಾರ್ ಬ್ಯಾಟರ್ಗಳು. ಬೌಲಿಂಗ್ನಲ್ಲಿ ಬುಮ್ರಾ ಶೈಲಿಯಲ್ಲಿ ಎಸೆಯುವ ನವೀನ್ ಉಲ್ ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ ಅಪಾಯಕಾರಿಯಾಗಬಲ್ಲರು.
ತಂಡಗಳು
ಭಾರತ: ರೋಹಿತ್ ಶರ್ಮ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್.
ಅಫಘಾನಿಸ್ತಾನ: ಹಷ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್,ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ನವೀನ್ ಉಲ್ ಹಕ್.