Site icon Vistara News

IND vs AUS: ಕೊನೆಯ ಎಸೆತದಲ್ಲಿ ಗೆದ್ದು ಬೀಗಿದ ಭಾರತ; ಆಸೀಸ್​ ವಿರುದ್ಧ ರೋಚಕ ಜಯ

Suryakumar Yadav, back to his favourite format, scored quickly

ವಿಶಾಖಪಟ್ಟಣ: ಅತ್ಯಂತ ರೋಚಕವಾಗಿ ಸಾಗಿದ ಆಸ್ಟ್ರೇಲಿಯಾ(IND vs AUS) ವಿರುದ್ಧದ ದೊಡ್ಡ ಮೊತ್ತದ ಮೇಲಾಟದಲ್ಲಿ ಭಾರತ ತಂಡ 2 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಸೂರ್ಯಕುಮಾರ್(80)​ ಮತ್ತು ಇಶಾನ್​ ಕಿಶನ್(58)​ ಅವರ ಅದ್ಭುತ ಬ್ಯಾಟಿಂಗ್‌ ವೈಭವ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆಸ್ಟ್ರೇಲಿಯಾ ಜೋಶ್​ ಇಂಗ್ಲಿಸ್(110)​ ಅವರ ಆಕರ್ಷಕ ಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ ​ ಮೂರು ವಿಕೆಟ್​ ಕಳೆದುಕೊಂಡು 208 ರನ್​ ಗಳಿಸಿತು. ಬೃಹತ್​ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿಕೊಂಡು ಹೋದ ಭಾರತಕ್ಕೆ ಅಂತಿಮ ಓವರ್​ನಲ್ಲಿ ಗೆಲುವಿಗೆ 7 ರನ್​ ಬೇಕಿತ್ತು. ಈ ವೇಳೆ ನಾಟಕೀಯ ಕುಸಿತ ಕಂಡ ಭಾರತ ಸತತವಾಗಿ ಮೂರು ವಿಕಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ಆತ್ಮವಿಶ್ವಾಸ ಕಳೆದುಕೊಳ್ಳದ ರಿಂಕು ಸಿಂಗ್​ ಸಿಕ್ಸರ್​ ಬಾರಿಸಿ ವಿಜಯ ಪತಾಕೆ ಹಾರಿಸಿದರು. ಅಚ್ಚರಿ ಎಂದರೆ ಇದು ನೋಬಾಲ್​ ಕೂಡ ಆಗಿತ್ತು. ವಿಕೆಟ್​ ಪತನಗೊಂಡರೂ ಭಾರತ ಗೆಲುವು ಸಾಧಿಸುತ್ತಿತ್ತು.

ಇದನ್ನೂ ಓದಿ Rohit vs Virat: ರೋಹಿತ್,ಕೊಹ್ಲಿ ಟಿ20 ಕ್ರಿಕೆಟ್​ ಯುಗಾಂತ್ಯ?; ಬಿಸಿಸಿಐ ನಿಲುವೇನು?

ಚೇಸಿಂಗ್​ ವೇಳೆ ಯಶಸ್ವಿ ಜೈಸ್ವಾಲ್​ ಅವರು ಮೊದಲ ಎಸೆತದಲ್ಲಿಯೇ ಬೌಂಡರಿ ಬಾರಿಸಿದರು. ಬಳಿಕ ಮೂರನೇ ಎಸೆತದಲ್ಲಿ ಸಿಕ್ಸರ್​ ಬಾರಿಸಿ ಮಿಂಚಿದರು. ಆದರೆ ಇದೇ ಓವರ್​ನಲ್ಲಿ ಭಾರತ ಮೊದಲ ವಿಕಟ್​ ಕೂಡ ಕಳೆದುಕೊಂಡಿತು. ಸಂವಹನ ಕೊರತೆಯಿಂದಾಗಿ 2 ಓಡುವ ವೇಳೆ ಋತುರಾಜ್ ಗಾಯಕ್ವಾಡ್​ ರನೌಟ್​ ಸಂಕಟಕ್ಕೆ ಸಿಲುಕಿದರು. ಒಂದು ಎಸೆತ ಎದುರಿಸದೆ ಶೂನ್ಯ ಸುತ್ತಿ ಪೆವಿಲಿಯನ್​ ಸೇರಿದರು. ಈ ವಿಕೆಟ್​ ಪತನದ ಬಳಿಕ ಜೈಸ್ವಾಲ್​ ಕೂಡ ವಿಕೆಟ್​ ಕೈಚೆಲ್ಲಿದರು. ತಲಾ 2 ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿ 21ರನ್ ಬಾರಿಸಿದರು.

ಇಶಾನ್​-ಸೂರ್ಯ ಬ್ಯಾಟಿಂಗ್​ ಮಿಂಚು

22 ರನ್​ಗೆ 2 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಕಂಡಿದ್ದ ತಂಡಕ್ಕೆ ನಾಯಕ ಸೂರ್ಯಕುಮಾರ್​ ಮತ್ತು ಇಶಾನ್​ ಕಿಶನ್​ ಬಿರುಸಿನ ಬ್ಯಾಟಿಂಗ್​ ಮೂಲಕ ಆಸರೆಯಾದರು. ಇಬ್ಬರು ಸೇರಿಕೊಂಡು ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆ ಸುರಿಸಿದರು. ಆಸೀಸ್​ ಬೌಲರ್​ಗಳು ಲಯ ಕಳೆದುಕೊಂಡರು. ಬೌಂಡರಿ ಮೂಲಕವೇ ಇಶಾನ್​ ಅರ್ಧಶತಕ ಪೂರ್ತಿಗೊಳಿಸಿದರು.

ಅರ್ಧಶತಕ ಪೂರ್ತಿಗೊಂಡ ಮರು ಎಸೆತದಲ್ಲಿ ಸಿಕ್ಸರ್​ ಬಾರಿಸಿದ ಇಶಾನ್​ ಮತ್ತೊಂದು ಸಿಕ್ಸರ್​ ಪ್ರಯತ್ನದಲ್ಲಿ ಎಡವಿ ಬೌಂಡರಿ ಲೈನ್​ನಲ್ಲಿ ಮ್ಯಾಥ್ಯೂ ಶಾರ್ಟ್​ ಕೈಗೆ ಕ್ಯಾಚ್​ ನೀಡಿ ಔಟಾದರು. 39 ಎಸೆತ ಎದುರಿಸಿದ ಕಿಶನ್​ 5 ಆಕರ್ಷಕ ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 58 ರನ್​ ಗಳಿಸಿದರು. ಸೂರ್ಯಕುಮಾರ್​ ಮುತ್ತು ಇಶಾನ್​ ಮೂರನೇ ವಿಕೆಟ್​ಗೆ 112ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಇಶಾನ್​ ವಿಕೆಟ್​ ಬಿದ್ದರೂ ವಿಚಲಿತರಾಗದ ಸೂರ್ಯ ತಮ್ಮ ಸ್ಫೋಟಕ ಬ್ಯಾಟಿಂಗ್​ ಮುಂದುವರಿಸಿದರು. ಅವರು ಕೂಡ ಸಿಕ್ಸರ್​ ಬಾರಿಸುವ ಅರ್ಧಶತಕ ಬಾರಿಸಿದರು.

ಇಶಾನ್​ ವಿಕೆಟ್​ ಪತನದ ಬಳಿಕ ಬಂದ ತಿಲಕ್​ ವರ್ಮ ಬಡಬಡನೆ 2 ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಇದೇ ಆಟವನ್ನು ಮುಂದುವರಿಸುವಲ್ಲಿ ಎಡವಿದ ಅವರು 12 ರನ್​ಗೆ ವಿಕೆಟ್​ ಕೈಚೆಲ್ಲಿದರು. ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಆದರೆ ಎದೆಗುಂದದ ಸೂರ್ಯಕುಮಾರ್​ ಯಾದವ್ 42 ಎಸೆತಗಳಿಂದ 80 ರನ್​ ಬಾರಿಸಿ ಮತ್ತೆ ತಂಡದ ನೆರವಿಗೆ ನಿಂತರು. ಅವರ ಈ ಸ್ಫೋಟಕ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಯಿತು. ಐಪಿಎಲ್​ನ ಸಿಕ್ಸರ್​ ಕಿಂಗ್​ ಖ್ಯಾತಿಯ ರಿಂಕು ಸಿಂಗ್​ ಅಜೇಯ 22 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಜೋಶ್​ನಿಂದ ಬ್ಯಾಟಿಂಗ್​ ನಡೆಸಿದ ಜೋಶ್​ ಇಂಗ್ಲಿಸ್​

ಮೊದಲು ಬ್ಯಾಟಿಂಗ್​ ನಡೆಸಿದ ಆಸೀಸ್​ ಪರ ದ್ವಿತೀಯ ಕ್ರಮಾಂಕದಲ್ಲಿ ಆಡಲಿಳಿದ ಜೋಶ್​ ಇಂಗ್ಲಿಸ್​ ಫುಲ್​ ಜೋಶ್​ನಿಂದಲೇ ಬ್ಯಾಟಿಂಗ್​ ನಡೆಸಿ ಭಾರತೀಯ ಬೌಲರ್​ಗಳ ಎಸೆತಗಳನ್ನು ದಿಕ್ಕಾಪಾಲಾಗಿಸಿದರು. ಕನ್ನಡಿಗ ಪ್ರಸಿದ್ಧ್​ ಕೃಷ್ಣ ಅವರಂತು ಸರಿಯಾಗಿಯೇ ದಂಡಿಸಿಕೊಂಡರು. ಓವರ್​ಗೆ ಕನಿಷ್ಠ 4 ಬೌಂಡರಿ ಮತ್ತು ಒಂದೆರಡು ಸಿಕ್ಸರ್​ ಹೊಡೆಸಿಕೊಂಡರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿದ ಸ್ಟೀವನ್​ ಸ್ಮಿತ್​ ಮತ್ತು ಜೋಶ್​ ಇಂಗ್ಲಿಸ್ ಕಡಿಮೆ ಎಸೆತಗಳಿಂದ ಅರ್ಧಶತಕ ಪೂರೈಸಿದರು.

ಅನುಭವಿ ಆಟಗಾರರ ಅನುಪಸ್ಥಿತಿ ಈ ಪಂದ್ಯದಲ್ಲಿ ಎದ್ದು ಕಾಣುತ್ತಿತ್ತು. ಯಂಗ್​ ಟೀಮ್​ ಇಂಡಿಯಾ ಆಟಗಾರರು ಹಲವು ಫೀಲ್ಡಿಂಗ್​ ತಪ್ಪುಗಳನ್ನು ಮಾಡಿ ಕೈ ಸುಟ್ಟುಕೊಂಡರು, ಕ್ಯಾಚ್​ ಮತ್ತು ಸುಲಭದ ರನೌಟ್​ ಅವಕಾಶವನ್ನು ಕೈಚೆಲ್ಲಿದರು. ಇದರಿಂದ ಜೀವದಾನ ಪಡೆದ ಇಂಗ್ಲಿಸ್​ ಶತಕ ಬಾರಿಸಿ ಆಸೀಸ್​ ಬೃಹತ್​ ಮೊತ್ತಕ್ಕೆ ಕಾರಣವಾದರು.

ಸ್ಮಿತ್​ ಅರ್ಧಶತಕ

ದ್ವಿತೀಯ ವಿಕೆಟ್​ಗೆ ಸ್ಮಿತ್​ ಮತ್ತು ಇಂಗ್ಲಿಸ್​ ಸೇರಿಕೊಂಡು 130ರನ್​ ಜತೆಯಾಟ ನಡೆಸಿದರು. ಅರ್ಧಶತಕ ಬಾರಿಸಿದ ಬಳಿಕ ಸ್ಮಿತ್​ ಅವರು ರನೌಟ್​ ಆದರು. ಆದರೆ ಇಂಗ್ಲಿಸ್​ ಮಾತ್ರ ತಮ್ಮ ಬ್ಯಾಟಿಂಗ್​ ಪರಾಕ್ರಮವನ್ನು ಮುಂದುವರಿಸಿ ಭಾರತೀಯ ಬೌಲರ್​ಗಳಿಗೆ ಕಾಡಿದರು. ಕೇವಲ 47 ಎಸೆತಗಳಿಂದ ಶತಕ ಪೂರ್ತಿಗೊಳಿಸಿದರು.

ರವಿ ಬಿಷ್ಣೊಯಿ ಅವರು ನಾಲ್ಕು ಓವರ್​ ಎಸೆದು 54 ರನ್​ ಬಿಟ್ಟುಕೊಟ್ಟು ಒಂದು ವಿಕೆಟ್​ ಪಡೆದರು. ಗಾಯಗೊಂಡು ವಿಶ್ವಕಪ್​ ಟೂರ್ನಿಯಿಂದ ಅಂತಿಮ ಕ್ಷಣದಲ್ಲಿ ಹೊರಬಿದಿದ್ದ ಅಕ್ಷರ್​ ಪಟೇಲ್​ ಅವರು 32 ರನ್​ ಬಿಟ್ಟುಕೊಟ್ಟು ವಿಕೆಟ್​ ಲೆಸ್ ಎನಿಸಿಕೊಂಡರು. ಆರಂಭಿಕ ಮೂರು ಓವರ್​ಗಳಲ್ಲಿ 43 ರನ್​ ಬಿಟ್ಟುಕೊಟ್ಟ ಪ್ರಸಿದ್ಧ್​ ಕೃಷ್ಣ ತಮ್ಮ ಅಂತಿಮ ಓವರ್​ನಲ್ಲಿ ಡೇಂಜಸರ್​ ಇಂಗ್ಲಿಸ್​ ಅವರ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ಸ್ಲೋ ಬಾಲ್​ಗೆ ಸಿಕ್ಸರ್​ ಬಾರಿಸುವ ಯತ್ನದಲ್ಲಿ ಎಡವಿದ ಇಂಗ್ಲಿಸ್ ಬೌಂಡರಿ ಲೈನ್​ನಲ್ಲಿ ಯಶಸ್ವಿ ಜೈಸ್ವಾಲ್​ಗೆ ಕ್ಯಾಚ್​ ನೀಡಿದರು.

50 ಎಸೆತ ಎದುರಿಸಿದ ಇಂಗ್ಲಿಸ್​ ಸೊಗಸಾದ 8 ಸಿಕ್ಸರ್​ ಮತ್ತು 11 ಬೌಂಡರಿ ನೆರವಿನಿಂದ 110 ರನ್ ಬಾರಿಸಿದರು. ಸ್ಟೀವನ್​ ಸ್ಮಿತ್​ 41 ಎಸೆತಗಳಿಂದ 8 ಬೌಂಡರಿ ಬಾರಿಸಿ 52 ರನ್​ ಗಳಿಸಿದರು. ಆರಂಭಕಾರ ಮ್ಯಾಥ್ಯೂ ಶಾರ್ಟ್​ 13 ರನ್​ ಗಳಿಸಿದರು. ಅಂತಿಮ ಹಂತದಲ್ಲಿ ಟಿಮ್​ ಡೇವಿಡ್​ ಅಜೇಯ 19 ರನ್​ ಗಳಿಸಿ ತಂಡದ ಮೊತ್ತವನ್ನು 200ಕ್ಕೇರಿಸಿದರು. ಸ್ಟೋಯಿನಿಸ್​ 7 ರನ್​ ಗಳಿಸಿ ಅಜೇಯರಾಗಿ ಉಳಿದರು.

Exit mobile version