ಗುವಾಹಟಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ (Ind vs Aus) ಮೂರನೇ ಟಿ20 ಪಂದ್ಯಕ್ಕೆ ಗುವಾಹಟಿಯ ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಐದು ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಮೆನ್ ಇನ್ ಬ್ಲೂ ತಂಡ ಸರಣಿಯನ್ನು ಗೆಲ್ಲುವ ಗುರಿ ಹೊಂದಿದೆ. ಈ ಪಂದ್ಯವನ್ನು ಗೆದ್ದರೆ ಸರಣಿ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡದ ಕೈವಶವಾಗಲಿದೆ.
ತಿರುವನಂತಪುರಂನ ಗ್ರೀನ್ಫೀ್ಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಹಿಂದಿನ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 235 ರನ್ ಗಳಿಸಿತ್ತು. ಯಶಸ್ವಿ ಜೈಸ್ವಾಲ್ ಕೇವಲ 25 ಎಸೆತಗಳಲ್ಲಿ 53 ರನ್ ಗಳಿಸಿದರೆ, ಋತುರಾಜ್ ಗಾಯಕ್ವಾಡ್ (43 ಎಸೆತಗಳಲ್ಲಿ 58 ರನ್) ಮತ್ತು ಇಶಾನ್ ಕಿಶನ್ (32 ಎಸೆತಗಳಲ್ಲಿ 52 ರನ್) ಅರ್ಧಶತಕಗಳನ್ನು ಗಳಿಸಿದ್ದರು. ರಿಂಕು ಸಿಂಗ್ ಕೇವಲ 9 ಎಸೆತಗಳಲ್ಲಿ 31 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದ್ದರು. ಆಸ್ಟ್ರೇಲಿಯಾ ಪರ ನಾಥನ್ ಎಲ್ಲಿಸ್ 45 ರನ್ ನೀಡಿ 3 ವಿಕೆಟ್ ಪಡೆದಿದಿದ್ದರು.
ದೇಶದ ಅತ್ಯಂತ ಪ್ರತಿಭಾನ್ವಿತ ಯುವ ಆಟಗಾರರನ್ನು ಒಳಗೊಂಡಿರುವ ಮೆನ್ ಇನ್ ಬ್ಲೂ ತಂಡವು ಮೊದಲ ಎರಡು ಪಂದ್ಯಗಳನ್ನು ಸುಲಭವಾಗಿ ಗೆಲ್ಲುವ ಮೂಲಕ ಪ್ರಶಂಸನೀಯ ಕೆಲಸ ಮಾಡಿದೆ. ಮೊದಲ ಪಂದ್ಯವು ಕೊನೆಯಲ್ಲಿ ಸ್ವಲ್ಪ ಬಿಗಿ ಎನಿಸಿತ್ತು. ಒಂದು ಎಸೆತ ಬಾಕಿ ಇರುವಾಗ ಎರಡು ವಿಕೆಟ್ ಗಳಿಂದ ಗೆದ್ದಿತು. ಎರಡನೇ ಪಂದ್ಯದಲ್ಲಿ ಆತಿಥೇಯರು 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿ 44 ರನ್ ಗಳಿಂದ ಜಯ ಸಾಧಿಸಿದ್ದಾರೆ. ಭಾರತ ಮಂಗಳವಾರ ಗೆಲ್ಲುವ ಮೂಲಕ ಸರಣಿಯನ್ನು ಗೆಲ್ಲಲು ಎದುರು ನೋಡುತ್ತಿದ್ದರೆ, ಆಸೀಸ್ ಉಳಿಯಲು ಉತ್ತಮ ಪ್ರದರ್ಶನದೊಂದಿಗೆ ಹೊರಬರಬೇಕಾಗಿದೆ.
ಅದೇ ತಂಡ ಕಣಕ್ಕಿಳಿಯುವ ಸಾಧ್ಯತೆ
ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಟಿ 20 ಪಂದ್ಯದಲ್ಲಿ ಆಡಿದ ಅದೇ ಪ್ಲೇಯಿಂಗ್ ಇಲೆವೆನ್ ಅನ್ನು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಕಣಕ್ಕಿಸುವ ಸಾಧ್ಯತೆಗಳಿವೆ. ಋತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕ ಜೋಡಿಯಾಗಿ ಮುಂದುವರಿಯಲಿದ್ದರೆ ಇಶಾನ್ ಕಿಶನ್ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಹಿಂದಿನ ಪಂದ್ಯದಲ್ಲಿ ಅವರ ಗಮನಾರ್ಹ ಪ್ರದರ್ಶನವು ಮುಂಬರುವ ಪಂದ್ಯದಲ್ಲಿ ಅವರ ನಿರ್ಣಾಯಕ ಪಾತ್ರಗಳನ್ನು ಎತ್ತಿ ತೋರಿಸುತ್ತದೆ. ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅವೇಶ್ ಖಾನ್ ಮತ್ತು ಜಿತೇಶ್ ಶರ್ಮಾ ಅವರಂಥ ಆಟಗಾರರು ಈ ಪಂದ್ಯದಲ್ಲಿ ಪ್ರಯೋಗಕ್ಕೆ ಒಳಪಡಲಾರರು.
ಆರನ್ ಹಾರ್ಡಿ ಸೇರ್ಪಡೆಯನ್ನು ಪರಿಗಣಿಸಿ ನೋಡುವುದಾಧರೆ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಕೆಲವು ಬದಲಾವಣೆಗಳನ್ನು ಮಾಡಬಹುದು. ಮತ್ತೊಂದೆಡೆ ಗ್ಲೆನ್ ಮ್ಯಾಕ್ಸ್ವೆಲ್, ಆಡಮ್ ಜಂಪಾ ಮತ್ತು ಟ್ರಾವಿಸ್ ಹೆಡ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಡಬಹುದು.
ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂ ಪಿಚ್ ವರದಿ
ಗುವಾಹಟಿಯ ಬರ್ಸಪಾರಾ ಕ್ರಿಕೆಟ್ ಕ್ರೀಡಾಂಗಣವು ನಿಧಾನಗತಿಯ ಪಿಚ್ಗೆ ಹೆಸರುವಾಸಿಯಾಗಿದೆ. ಮಧ್ಯಮ ವೇಗದ ಬೌಲರ್ಗಳಿಗೆ ಸಹಾಯ ಒದಗಿಸುತ್ತದೆ. ಮೇಲ್ಮೈಯ ನಿಧಾನಗತಿಯ ಸ್ವಭಾವದ ಹೊರತಾಗಿಯೂ, ಬ್ಯಾಟರ್ಗಳಿಗೆ ಸ್ಪರ್ಧಾತ್ಮಕ ಸ್ಕೋರ್ಗಳನ್ನು ಪೇರಿಸಲು ಸಾಧ್ಯವಿದೆ. ಆಟ ಮುಂದುವರಿದಂತೆ ಇಬ್ಬನಿಯ ಸಂಭಾವ್ಯ ಪರಿಣಾಮವನ್ನು ಪರಿಗಣಿಸಿ, ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡುವುದು ನಿಶ್ಚಿತ.
ಇದನ್ನೂ ಓದಿ : IPL 2024 : ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಟಾಪ್ 5 ದುಬಾರಿ ಆಟಗಾರರು ಇವರು
ಸಂಭಾವ್ಯ ತಂಡಗಳು ಇಂತಿವೆ
ಭಾರತ: ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ.
ಆಸ್ಟ್ರೇಲಿಯಾ: ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಆರೋನ್ ಹಾರ್ಡಿ, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ನಾಯಕ / ವಿಕೆಟ್ ಕೀಪರ್), ಸೀನ್ ಅಬಾಟ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್ಡಾರ್ಫ್, ತನ್ವೀರ್ ಸಂಘಾ.
ಭಾರತ ಆಸ್ಟ್ರೇಲಿಯಾ ಟಿ20 ಮುಖಾಮುಖಿ ವಿವರ
- ಆಡಿದ ಪಂದ್ಯಗಳು- 28
- ಭಾರತ ಗೆಲುವು- 17
- ಆಸ್ಟ್ರೇಲಿಯಾ- 10
- ಫಲಿತಾಂಶ ರಹಿತ- 1
- ಮೊದಲ ಪಂದ್ಯ- 22 ಸೆಪ್ಟೆಂಬರ್, 2007
- ಕೊನೆಯ ಪಂದ್ಯ- 26 ನವೆಂಬರ್, 2023
ಪಂದ್ಯದ ನೇರ ಪ್ರಸಾರ ವಿವರ
- ದಿನಾಂಕ- ಮಂಗಳವಾರ, ನವೆಂಬರ್ 28
- ಸಮಯ- ಸಂಜೆ 07:00 (ಭಾರತೀಯ ಕಾಲಮಾನ)
- ಲೈವ್ ಸ್ಟ್ರೀಮಿಂಗ್- ಜಿಯೋ ಸಿನೆಮಾ
- ಲೈವ್ ಬ್ರಾಡ್ಕಾಸ್ಟ್- ಸ್ಪೋರ್ಟ್ಸ್18