Site icon Vistara News

ವಿಶ್ವಕಪ್​ನಲ್ಲಿಯೂ ಮುಂದುವರಿದ ಜಾರ್ವೊ ಕಾಟ; ಮುಂದಿನ ಪಂದ್ಯಗಳಿಗೆ ನಿಷೇಧ ಹೇರಿದ ಐಸಿಸಿ

Jarvo 69

ಚೆನ್ನೈ: ಭಾನುವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಮೈದಾನಕ್ಕೆ ನುಗ್ಗಿದ ಜಾರ್ವೊಗೆ(Jarvo 69) ಐಸಿಸಿ ಇನ್ನುಳಿದ ವಿಶ್ವಕಪ್​(ICC World Cup 2023) ಪಂದ್ಯಗಳಿಗೆ ನಿಷೇಧ ಹೇರಿದೆ. ಕಳೆದ ವರ್ಷ ಭಾರತ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದಾಗಲೂ ಜಾರ್ವೊ ಹಲವು ಬಾರಿ ಭಾರತದ ಜೆರ್ಸಿಯನ್ನು ತೊಟ್ಟು ಮೈದಾನಕ್ಕೆ ಪ್ರವೇಶ ಮಾಡಿದ್ದರು. ಇದೀಗ ತಮ್ಮ ಕಿತಾಪತಿಯನ್ನು ವಿಶ್ವಕಪ್​ನಲ್ಲಿಯೂ ತೋರಿಸಿದ್ದಾರೆ.

ಚೆನ್ನೈಯಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಫೀಲ್ಡಿಂಗ್​ ನಡೆಸುತ್ತಿರುವಾಗ ಜಾರ್ವೊ ಟೀಮ್​ ಇಂಡಿಯಾದ ಜೆರ್ಸಿಯನ್ನು ತೊಟ್ಟು ನೇರವಾಗಿ ಮೈದಾನಕ್ಕೆ ಬಂದಿದ್ದಾರೆ. ಇದರಿಂದ ಕೆಲಕಾಲ ಪಂದ್ಯಕ್ಕೆ ಅಡಚಣೆಯಾಗಿದೆ. ಕೆ.ಎಲ್​ ರಾಹುಲ್​ ಮತ್ತು ವಿರಾಟ್​ ಕೊಹ್ಲಿ ಜಾರ್ವೊಗೆ ಮೈದಾನದಿಂದ ಹೊರಹೋಗಲು ಹೇಳಿದರೂ ಆತ ಇದಕ್ಕೆ ಒಪ್ಪಲಿಲ್ಲ. ಬಳಿಕ ಮೈದಾನ ಸಿಬಂದಿಗಳು ಆತನನ್ನು ಹೊರ ಕಳುಹಿಸಿದ್ದಾರೆ.

ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್ ಡೇನಿಯಲ್ ಜಾರ್ವಿಸ್ (ಜಾರ್ವೊ) ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇಂಗ್ಲೆಂಡ್​ನಲ್ಲಿ ಹಲವು ಬಾರಿ ಈ ರೀತಿ ಮಾಡಿ ಬಂಧನಕ್ಕೂ ಒಳಗಾಗಿದ್ದರು. ವಿಶ್ವಕಪ್‌ ಸಲುವಾಗಿ ಚೆಪಾಕ್ ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿತ್ತು. ಆದರೂ ಸೆಕ್ಯೂರಿಟಿಗೆ ಜಾರ್ವೊ ಚಳ್ಳೆ ಹಣ್ಣು ತಿನ್ನಿಸಿ ಮೈದಾನ ಪ್ರವೇಶ ಮಾಡಿದ್ದಾನೆ.

69 ವರ್ಷದ ಈ ವ್ಯಕ್ತಿ ಭಾರತೀಯ ತಂಡದ ಜೆರ್ಸಿ ಧರಿಸಿಕೊಂಡು ಮೈದಾನಕ್ಕೆ ನುಗ್ಗಿ ತಾನು ಕೂಡ ಭಾರತದ ಆಟಗಾರ ಜತೆ ಕ್ರಿಕೆಟ್ ಆಡಬೇಕು ಎಂದು ಹಲವು ಬಾರಿ ಮೈದಾನಕ್ಕೆ ನುಗ್ಗಿದ್ದರು. ಆ ಬಳಿಕ ಅವರು ಜಾರ್ವೋ 69 ಎಂದೇ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆದರು.

ಪಂದ್ಯ ಗೆದ್ದ ಭಾರತ

ಸ್ಟಾರ್ ಬ್ಯಾಟರ್​ಗಳಾದ ವಿರಾಟ್​ ಕೊಹ್ಲಿ (85) ಹಾಗೂ ಕೆ. ಎಲ್​ ರಾಹುಲ್​ (ಅಜೇಯ 97) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಭಾರತ ತಂಡ ವಿಶ್ವ ಕಪ್​ನ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ (Ind vs Aus) ವಿರುದ್ಧ 6 ವಿಕೆಟ್​ಗಳ ಸುಲಭ ಜಯ ದಾಖಲಿಸಿತು. ಈ ಮೂಲಕ ತನ್ನ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವ ಕಪ್​ನಲ್ಲಿ ಶುಭಾರಂಭ ಮಾಡಿತು. ಬಲಿಷ್ಠ ತಂಡವನ್ನೇ ಮಣಿಸಿ ಪ್ರಶಸ್ತಿ ಕಡೆಗೆ ಮೊದಲ ಹೆಜ್ಜೆಯನ್ನಿಟ್ಟಿದೆ.

ಇದನ್ನೂ ಓದಿ Ind vs Aus : ಭಾರತ ತಂಡದ ಪರ ನೂತನ ದಾಖಲೆ ಸೃಷ್ಟಿಸಿದ ಕೊಹ್ಲಿ- ರಾಹುಲ್​ ಜತೆಯಾಟ

ಚೆಪಾಕ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್​ಗಳಲ್ಲಿ 199 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ 41.3 ಓವರ್​ಗಳಲ್ಲಿ 201 ರನ್​ ಬಾರಿಸಿ ಗೆಲುವು ಸಾಧಿಸಿತು. ಭಾರತ ತಂಡ ಆರಂಭದಲ್ಲಿ 2 ರನ್​ಗಳಿಗೆ ಮೂರು ವಿಕೆಟ್​ ಕಳೆದುಕೊಳ್ಳುವ ಮೂಲಕ ಆತಂಕಕ್ಕೆ ಒಳಗಾಯಿತು. ಆದರೆ, ಕೊಹ್ಲಿ ಮತ್ತು ರಾಹುಲ್ ಭಾರತ ತಂಡಕ್ಕೆ ಜಯ ತಂದುಕೊಟ್ಟರು.

Exit mobile version