ನ್ಯೂಯಾರ್ಕ್: ಐರ್ಲೆಂಡ್(India vs Ireland) ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ(Rohit Sharma) ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ನಿರೀಕ್ಷೆಯಂತೆ ರೋಹಿತ್ ಜತೆ ವಿರಾಟ್ ಕೊಹ್ಲಿ(Virat Kohli) ಅವರು ಭಾರತದ ಇನಿಂಗ್ಸ್ ಆರಂಭಿಸಲಿದ್ದಾರೆ. ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ಗೆ ಅವಕಾಶ ಸಿಗಲಿಲ್ಲ.
ಭಾರತ ಈ ಪಂದ್ಯಕ್ಕೆ ಅಚ್ಚರಿಯ ತಂಡವನ್ನು ಕಣಕ್ಕಿಳಿಸಿದೆ. ನಿರೀಕ್ಷೆಯೇ ಮಾಡದ ಶಿವಂ ದುಬೆ, ಅಕ್ಷರ್ ಪಟೇಲ್ ಮತ್ತು ಅರ್ಶದೀಪ್ ಸಿಂಗ್ ಅವರು ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅನುಭವಿ ಸ್ಪಿನ್ನರ್ಗಳಾದ ಕುಲ್ದೀಪ್ ಯಾದವ್ ಮತ್ತು ಯಜುವೇಂದ್ರ ಚಹಲ್ ಬೆಂಚ್ ಕಾಯಬೇಕಿದೆ. ರಿಷಭ್ ಪಂತ್ ವಿಕೆಟ್ ಕೀಪರ್ ಆಗಿದ್ದಾರೆ. ಅಲ್ಲದೆ ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಒಟ್ಟು 4 ವೇಗಿಗಳು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ದುಬೆ ಕೂಡ ಬೌಲಿಂಗ್ ಮಾಡಿದರೆ 5 ಮಂದಿ ವೇಗಿಗಳು ಆಡಿದಂತಾಗುತ್ತದೆ.
ನಸೌ ಕ್ರಿಕೆಟ್ ಸ್ಟೇಡಿಯಂನ ಪಿಚ್ ಕೂಡ ಅತ್ಯಂತ ಆಘಾತಕಾರಿಯಾಗಿ ವರ್ತಿಸುತ್ತಿದೆ. ಬ್ಯಾಟರ್ಗಳು ಇಲ್ಲಿ ರನ್ಗಳಿಸಲು ಪರದಾಡಿದ್ದಾರೆ. ಇದೇ ಕಾರಣಕ್ಕೆ ಪಿಚ್ ವರ್ತನೆಯನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿಯೇ ರೋಹಿತ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಂತಿದೆ.
ಟಿ20 ಮುಖಾಮುಖಿ
ಉಭಯ ತಂಡಗಳು ಇದುವೆರೆಗೆ ಟಿ20 ಕ್ರಿಕೆಟ್ನಲ್ಲಿ ಒಟ್ಟು 7 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಎಲ್ಲ ಪಂದ್ಯಗಳನ್ನು ಭಾರತ ಗೆದ್ದಿದೆ. ಇದರಲ್ಲೊಂದು ಟಿ20 ವಿಶ್ವಕಪ್ ಪಂದ್ಯವಾಗಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿ ಗೋಚರಿಸಿದರೂ ಕೂಡ ಐರ್ಲೆಂಡ್ ಸವಾಲನ್ನು ಹಗುರವಾಗಿ ಕಾಣುವಂತಿಲ್ಲ. ಏಕೆಂದರೆ ಬಲಿಷ್ಠ ತಂಡಗಳು ಕೂಡ ದುರ್ಬಲ ತಂಡದ ವಿರುದ್ಧ ಸೋತ ಹಲವು ನಿದರ್ಶನಗಳಿವೆ. ಹೀಗಾಗಿ ಪ್ರತಿ ಹೆಚ್ಚುಗೂ ಎಚ್ಚರಿಕೆಯಿಂದ ಆಡಬೇಕು.
ಇದನ್ನು ಓದಿ Rahul Dravid: ಸುದ್ದಿಗೋಷ್ಠಿಯಲ್ಲಿ ಉರ್ದು ಮಾತನಾಡಿದ ರಾಹುಲ್ ದ್ರಾವಿಡ್; ವಿಡಿಯೊ ವೈರಲ್
ಪಂದ್ಯದ ಪ್ರಸಾರ
ನ್ಯೂಯಾರ್ಕ್ನಲ್ಲಿ ಈ ಪಂದ್ಯ ಹಗಲು ನಡೆದರೂ ಕೂಡ ಭಾರತದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಪ್ರಸಾರಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಡಿ ದೂರದರ್ಶನದಲ್ಲಿ ಪಂದ್ಯಗಳು ನೇರಪ್ರಸಾರ ಇರಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ನಲ್ಲಿ ಉಚಿತವಾಗಿ ವೀಕ್ಷಿಸಬಹುದು.
ಇತ್ತಂಡಗಳ ಆಡುವ ಬಳಗ
ಭಾರತ: ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.
ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್(ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್(ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್, ಬೆಂಜಮಿನ್ ವೈಟ್.