Site icon Vistara News

India vs Ireland: ರೋಹಿತ್​ ಅರ್ಧಶತಕ; ಐರ್ಲೆಂಡ್​ ವಿರುದ್ಧ ಭಾರತಕ್ಕೆ ಭರ್ಜರಿ​ ಗೆಲುವು

India vs Ireland

ನ್ಯೂಯಾರ್ಕ್​: ಹಾರ್ದಿಕ್​ ಪಾಂಡ್ಯ(3), ಜಸ್​ಪ್ರೀತ್​ ಬುಮ್ರಾ(2) ಅವರ ಉತ್ಕೃಷ್ಟ ಮಟ್ಟದ ಬೌಲಿಂಗ್​ ದಾಳಿ, ನಾಯಕ ರೋಹಿತ್​ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಐರ್ಲೆಂಡ್(India vs Ireland)​ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ (T20 World Cup 2024 ಶುಭಾರಂಭ ಕಂಡಿದೆ. ಭಾರತ ತನ್ನ ದ್ವಿತೀಯ ಪಂದ್ಯವನ್ನು ಜೂನ್​ 9 ರಂದು ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಇತ್ತಂಡಗಳ ಈ ಹೈವೋಲ್ಟೇಜ್​ ಪಂದ್ಯ ಕೂಡ ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ.

ಇಲ್ಲಿನ ನಸೌ ಕೌಂಟಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ನಾಯಕ ರೋಹಿತ್​ ಶರ್ಮಾ ಅವರ ಆಯ್ಕೆಯನ್ನು ಬೌಲರ್​ಗಳು ಸಮರ್ಥಿಸಿಕೊಂಡರು. ಹಾರ್ದಿಕ್​ ಪಾಂಡ್ಯ, ಅರ್ಶದೀಪ್​, ಜಸ್​ಪ್ರೀತ್ ಬುಮ್ರಾ, ಸಿರಾಜ್ ಮತ್ತು ಅಕ್ಷರ್​​ ಜಿದ್ದಿಗೆ ಬಿದ್ದವರಂತೆ ಬೌಲಿಂಗ್​ ದಾಳಿ ನಡೆಸಿ ವಿಕೆಟ್​ ಕಿತ್ತು ಪಾರಮ್ಯ ಮೆರೆದರು. ಭಾರತೀಯ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾದ ಐರ್ಲೆಂಡ್​ ಕೇವಲ 96 ರನ್​ಗಳಿಗೆ ಸರ್ವಪತನ ಕಂಡಿತು. ಜವಾಬಿತ್ತ ಭಾರತ, ಈ ಸಣ್ಣ ಮೊತ್ತವನ್ನು 12.2 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 97 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ಕೊಹ್ಲಿವಿಫಲ


ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದರು. ಆದರೆ, ಕೊಹ್ಲಿ ಈ ಪ್ರಯೋಗದಲ್ಲಿ ಯಶಸ್ಸು ಕಾಣಲಿಲ್ಲ. ಕೇವಲ 1 ರನ್​ಗೆ ವಿಕೆಟ್​ ಕಳೆದುಕೊಂಡರು. ಇದಕ್ಕೂ ಮುನ್ನ ಈ ಜೋಡಿ 2019ರಲ್ಲಿ ಅಹಮದಾಬಾದ್​ನಲ್ಲಿ ನಡೆದಿದ್ದ ಇಂಗ್ಲೆಂಡ್​ ವಿರುದ್ಧ ಟಿ20 ಸರಣಿಯಲ್ಲಿ ಆರಂಭಿಕರಾಗಿ ಬ್ಯಾಟ್​ ಬೀಸಿತ್ತು. ಕೊಹ್ಲಿ ಐರ್ಲೆಂಡ್​ ವಿರುದ್ಧ ಆರಂಭಿಕನಾಗಿ ಆಡಿದ ಕಾರಣ ಜೈಸ್ವಾಲ್​ಗೆ ಅವಕಾಶ ಕೈತಪ್ಪಿತು.

ರೋಹಿತ್​ ಅರ್ಧಶತಕ


ನಿಧಾನಗತಿಯ ಟ್ರ್ಯಾಕ್​ನಲ್ಲಿ ಮೊದಲು ರನ್​ ಗಳಿಸಲು ತಿಣುಕಾಡಿದ ರೋಹಿತ್, ಆ​ ಬಳಿಕ ಸಿಡಿದು ನಿಂತರು. ಸತತ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 4 ಸಾವಿರ ರನ್​ ಪೂರೈಸಿದ ಮೈಲುಗಲ್ಲು ನಿರ್ಮಿಸಿದರು. 36 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರೋಹಿತ್​, 52 ರನ್​ ಗಳಿಸಿದ ವೇಳೆ ಭುಜದ ಗಾಯದ ಸಮಸ್ಯೆಗೆ ಸಿಲುಕಿ ರಿಟರ್ಡ್ ಹರ್ಟ್ ಆದರು. ಅವರ ಈ ಅರ್ಧಶತಕ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್​ ಸಿಡಿಯಿತು. ಅಂತಿಮವಾಗಿ ರಿಷಭ್​ ಪಂತ್ ಅಜೇಯ 36(3 ಬೌಂಡರಿ, 2 ಸಿಕ್ಸರ್​) ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗೆಲುವಿಗೆ ರನ್​ ಬೇಕಿದ್ದಾಗ ಸಿಕ್ಸರ್​ ಬಾರಿಸುವ ಯತ್ನದಲ್ಲಿ ವಿಫಲವಾದ ಸೂರ್ಯಕುಮಾರ್(2)​ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು.

ಇದಕ್ಕೂ ಮುನ್ನ ಇನಿಂಗ್ಸ್​ ಆರಂಭಿಸಿದ ಐರ್ಲೆಂಡ್​ಗೆ ಎಡಗೈ ವೇಗಿ ಅರ್ಶ್​ದೀಪ್​ ತಮ್ಮ ದ್ವಿತೀಯ ಓವರ್​ನಲ್ಲಿ ಆಘಾತವಿಕ್ಕಿದರು. ನಾಯಕ ಪೌಲ್​ ಸ್ಟಿರ್ಲಿಂಗ್(7) ವಿಕೆಟ್​ ಕಿತ್ತು ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇಷ್ಟಕ್ಕೇ ತೃಪ್ತಿಯಾಗದ ಅರ್ಶ್​ದೀಪ್ ಇದೇ ಓವರ್​ನ ಅಂತಿಮ ಎಸೆತದಲ್ಲಿ ಮತ್ತೊಂದು ವಿಕೆಟ್​ ಉಡಾಯಿಸಿದರು. ಐರ್ಲೆಂಡ್​ 9 ರನ್​ಗೆ ಆರಂಭಿಕರಿಬ್ಬರ ವಿಕೆಟ್​ ಕಳೆದುಕೊಂಡಿತು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಲಂಕಾ-ದಕ್ಷಿಣ ಆಫ್ರಿಕಾ ಪಂದ್ಯ

ಅರ್ಶದೀಪ್​ ಬಳಿಕ ಜಸ್​ಪ್ರೀತ್​ ಬುಮ್ರಾ ಮತ್ತು ಹಾರ್ದಿಕ್​ ಪಾಂಡ್ಯ ಕೂಡ ಜಿದ್ದಿಗೆ ಬಿದ್ದವರಂತೆ ಬೌಲಿಂಗ್​ ದಾಳಿ ನಡೆಸಿ ವಿಕೆಟ್​ ಬೇಟೆಯಾಡಿದರು. ಮೊದಲೇ ಆರಂಭಿಕ ಆಘಾತ ಕಂಡಿದ್ದ ಐರ್ಲೆಂಡ್​ಗೆ ಚೇತರಿಸಿಕೊಳ್ಳಲು ಸಮಯವೇ ಸಿಗಲಿಲ್ಲ. ಬಡಬಡನೆ ವಿಕೆಟ್​ ಕಳೆದುಕೊಂಡು ಪೆವಿಯನ್​ ಕಡೆಗೆ ಹೆಜ್ಜೆ ಹಾಕಿದರು. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ ಜೋಶುವಾ ಲಿಟಲ್(14) ಮತ್ತು 7ನೇ ಕ್ರಮಾಂಕದ ಬ್ಯಾಟರ್​ ಗರೆಥ್ ಡೆಲಾನಿ ಕೊನೆಯ ಹಂತದಲ್ಲಿ ಶಕ್ತಿ ಮೀರಿ ನಡೆಸಿದ ಹೋರಾಟದ ಫಲದಿಂದ ತಂಡ 100ರ ಸನಿಹದ ಮೊತ್ತ ಕಲೆಹಾಕಿತು.

ಪಾಂಡ್ಯ ಬೌಲಿಂಗ್​ ಕಮಾಲ್​

ಆರಂಭಿಕ ಮೂರು ಓವರ್​ಗಳಲ್ಲಿ ಉತ್ತಮ ಬೌಲಿಂಗ್​ ದಾಳಿ ನಡೆಸಿ 2 ವಿಕೆಟ್​ ಕಿತ್ತಿದ್ದ ಅರ್ಶದೀಪ್​ ಸಿಂಗ್​ ತಮ್ಮ ಅಂತಿಮ ಓವರ್​ನಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್​ ಬಿಟ್ಟುಕೊಟ್ಟು 15 ರನ್​ ಹೊಡೆಸಿಕೊಂಡರು. ಗರೆಥ್ ಡೆಲಾನಿ 14 ಎಸೆತಗಳಿಂದ ತಲಾ 2 ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 26 ರನ್​ ಗಳಿಸಿ ರನೌಟ್​ ಆದರು. ಇವರ ವಿಕೆಟ್​ ಪತನದೊಂದಿಗೆ ಐರ್ಲೆಂಡ್​ ಬ್ಯಾಟಿಂಗ್​ ಇನಿಂಗ್ಸ್​ ಕೂಡ ಮುಕ್ತಾಯ ಕಂಡಿತು. ಭಾರತ ಪರ ಉಪನಾಯಕ ಹಾರ್ದಿಕ್​ ಪಾಂಡ್ಯ 4 ಓವರ್​ ಎಸೆದು 1 ಮೇಡನ್​ ಸಹಿತ 27 ರನ್​ ವೆಚ್ಚದಲ್ಲಿ 3 ವಿಕೆಟ್​ ಉರುಳಿಸಿದರು. ಉಳಿದಂತೆ ಬುಮ್ರಾ ಮತ್ತು ಅರ್ಶ್​ದೀಪ್​ ತಲಾ 2, ಸಿರಾಜ್​ ಮತ್ತು ಅಕ್ಷರ್​ ತಲಾ 1 ವಿಕೆಟ್​ ಪಡೆದರು. ಆದರೆ ಅನುಭವಿ ಸ್ಪಿನ್ನರ್​ ಜಡೇಜಾ ವಿಕೆಟ್​ ಲೆಸ್​ ಎನಿಸಿಕೊಂಡರು. ಅಲ್ಲದೆ ಒಂದು ಕ್ಯಾಚ್​ ಕೂಡ ಕೈಚೆಲ್ಲಿದರು. ಅಕ್ಷರ್​ ಪಟೇಲ್​ ಅವರು ಒಂದು ವಿಕೆಟ್​ ಕೀಳುವ ಮೂಲಕ ಟಿ20 ಕ್ರಿಕೆಟ್​ನಲ್ಲಿ 50 ವಿಕೆಟ್​ ಪೂರ್ತಿಗೊಳಿಸಿದ ಮೈಲುಗಲ್ಲು ತಲುಪಿದರು.

Exit mobile version