Site icon Vistara News

Asia Cup 2023 : ನೇಪಾಳ ವಿರುದ್ಧ ಗೆದ್ದು ಪ್ಲೇಆಫ್​ ಹಂತಕ್ಕೇರುವುದೇ ಭಾರತ?

Team india

ಪಲ್ಲೆಕೆಲೆ: ಏಷ್ಯಾಕಪ್ 2023ರ (Asia Cup 2023) ತನ್ನ ಮೊದಲ ಪಂದ್ಯದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಪಾಕ್​ (Pakistan Cricket Team) ವಿರುದ್ಧದ ಹಣಾಹಣಿ ಮಳೆಯ ಕಾರಣಕ್ಕೆ ಟೈ ಆಯಿತು. ಇದೀಗ ಎರಡನೇ ಪಂದ್ಯದಲ್ಲಿ ನೇಪಾಳ (Nepal Cricket Team) ವಿರುದ್ಧ ಸೆಣಸಲಿದೆ. ‘ಎ’ ಗುಂಪಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯಲು ನೇಪಾಳ ವಿರುದ್ಧ ಜಯ ಗಳಿಸಬೇಕಾಗಿದೆ.

ಪಾಕ್​ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ. ಮೊದಲ 14.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿ ಶೋಚನೀಯ ಸ್ಥಿತಿ ಎದುರಿಸಿತ್ತು. ಸ್ಟಾರ್ ಬ್ಯಾಟರ್​​​ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್​ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಪಾಕಿಸ್ತಾನ ತಂಡದ ವೇಗಿಗಳಿಗೆ ಬೆದರಿಗೆ ಬೇಗೆ ಔಟಾಗಿದ್ದರು. ಆದಾಗ್ಯೂ, ಇಶಾನ್ ಕಿಶನ್ (81 ಎಸೆತಗಳಲ್ಲಿ 82 ರನ್) ಮತ್ತು ಹಾರ್ದಿಕ್ ಪಾಂಡ್ಯ (90 ಎಸೆತಗಳಲ್ಲಿ 87 ರನ್) ಅವರ ಆಕರ್ಷಕ ಅರ್ಧ ಶತಕಗಳಿಂದ ಭಾರತ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತು. ಈ ವೇಳೆ ಮಳೆ ಸುರಿದ ಕಾರಣ ಪಾಕಿಸ್ತಾನದ ಇನಿಂಗ್ಸ್ ಒಂದೇ ಒಂದು ಎಸೆತ ಕಾಣದೇ ಕೊನೆಗೊಂಡಿತು. ಹೀಗಾಗಿ ಪಾಕಿಸ್ತಾನ ತಂಡ ಈಗ ಸೂಪರ್​-4 ಹಂತಕ್ಕೇರಿದೆ. ಇದೀಗ ಭಾರತ ನೇಪಾಳ ವಿರುದ್ಧ ಗೆದ್ದು ಮುಂದಿನ ಹಂತಕ್ಕೆ ಏರಬೇಕಾಗಿದೆ.

ಪಾಕಿಸ್ತಾನ ವಿರುದ್ಧದ ತನ್ನ ಆರಂಭಿಕ ಪಂದ್ಯದಲ್ಲಿ ನೇಪಾಳ ಸಂಪೂರ್ಣವಾಗಿ ನೆಲಕ್ಕಚ್ಚಿತ್ತು. ಮೊದಲು ಬ್ಯಾಟ್​ ಮಾಡಿದ್ದ ಬಾಬರ್ ಅಜಂ ಬಳಗದ ವಿರುದ್ಧ ನೇಪಾಳ ಕೇವಲ 104 ರನ್​​ಗಳಿಗೆ ಆಲೌಟ್ ಆಗಿತ್ತು. 238 ರನ್​ಗಳ ಬೃಹತ್ ಸೋಲನುಭವಿಸಿತು. ಹೀಗಾಗಿ ಭಾರತಕ್ಕೆ ನೇಪಾಳ ದೊಡ್ಡ ಸವಾಲು ಅಲ್ಲ. ಆದರೆ ಬಲಿಷ್ಠ ತಂಡವನ್ನು ಎದುರಿಸುವ ಮೊದಲು ಎಚ್ಚರಿಕೆಯಿಂದ ಆಡುವ ಸಾಧ್ಯತೆಗಳಿವೆ. ತಂಡಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ಆಡುವ ಸಾಧ್ಯತೆಗಳಿವೆ.

ಇದನ್ನೂ ಓದಿ : Pakistan vs Nepal: ನೇಪಾಳ ವಿರುದ್ಧ ಪಾಕ್​ಗೆ 238 ರನ್​ ಗೆಲುವು; ಟೂರ್ನಿಯಲ್ಲಿ ಶುಭಾರಂಭ 

ಎರಡೂ ತಂಡಗಳು ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಬಯಸುತ್ತಿವೆ. ಆದರೆ, ಭಾರತ ತಂಡ ಎರಡನೇ ಸ್ಥಾನದಲ್ಲಿರುವ ಕಾರಣ ಬಹುತೇಕ ಸೇಫ್​. ಮಳೆಯಿಂದ ಪಂದ್ಯ ರದ್ದಾದರೆ ಅಥವಾ ಟೈ ಆದರೂ ಭಾರತ ಸೂಪರ್​ 4ಗೆ ಎಂಟ್ರಿಯಾಗುತ್ತದೆ. ಆದರೆ, ನೇಪಾಳ ತಂಡಕ್ಕೆ ಗೆಲುವಿನಿಂದ ಮಾತ್ರ ಮುಂದಿನ ಹಂತಕ್ಕೆ ತೇರ್ಗಡೆಯಾಲು ಸಾಧ್ಯವಿದೆ.

ತಂಡ ಬದಲಾವಣೆಯಾಗದು

ಭಾರತವು ಅದೇ ಪ್ಲೇಯಿಂಗ್ ಇಲೆವೆನ್ ಅನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಮತ್ತು ಪಂದ್ಯಾವಳಿಯ ಆರಂಭದಲ್ಲಿ ತಕ್ಷಣದ ಬದಲಾವಣೆ ಬಯಸದು. ಇನ್ನಿಂಗ್ಸ್ ನ ಆರಂಭದಲ್ಲಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಅವರು ತಮ್ಮ ಅಗ್ರ ನಾಲ್ಕು ಬ್ಯಾಟ್ಸ್ ಮನ್ ಗಳಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷೆ ಮಾಡುತ್ತಿದೆ. ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್ ಮತ್ತು ರವೀಂದ್ರ ಜಡೇಜಾ ಆಲ್​ರೌಂಡರ್​ಗಳ ಸ್ಥಾನ ತುಂಬಲಿದ್ದಾರೆ. ಜಸ್ಪ್ರೀತ್ ಬುಮ್ರಾ ವೇಗದ ಬೌಲಿಂಗ್ ವಿಭಾಗವನ್ನು ನೆಚ್ಚಿಕೊಳ್ಳಲಿದ್ದಾರೆ.

ಪಲ್ಲೆಕೆಲೆ ಪಿಚ್​ ಹೇಗಿದೆ?

ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸ್ಕೋರ್​ ದಾಖಲಿಸುತ್ತಿವೆ. ಕಳೆದ ಎರಡು ವರ್ಷಗಳಲ್ಲಿ 300 ಕ್ಕೂ ಹೆಚ್ಚು ರನ್​ಗಳನ್ನು ನಿಯಮಿತವಾಗಿ ದಾಖಲಿಸುತ್ತಿವೆ. ಹಿಂದಿನ ಎರಡು ಪಂದ್ಯಗಳನ್ನು ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು ಗೆದ್ದಿವೆ. ಆದಾಗ್ಯೂ, ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ಭಾರಿ ಮೊತ್ತವನ್ನು ದಾಖಲಿಸುವ ಮೂಲಕ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸುವ ಸಾಧ್ಯತೆಯೇ ಹೆಚ್ಚು.

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ನೇಪಾಳ : ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್​ಕೀಪರ್​), ರೋಹಿತ್ ಪೌದೆಲ್ (ನಾಯ), ಆರಿಫ್ ಶೇಖ್, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಮಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಾಮಿಚಾನೆ, ಲಲಿತ್ ರಾಜ್ಬನ್ಶಿ

ಲೈವ್ ಸ್ಟ್ರೀಮಿಂಗ್ ವಿವರಗಳು

ಪಂದ್ಯದ ಸಮಯ: ಮಧ್ಯಾಹ್ನ 3:00 ಗಂಟೆಗೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್

ಲೈವ್ ಸ್ಟ್ರೀಮಿಂಗ್: ಡಿಸ್ನಿ + ಹಾಟ್​ಸ್ಟಾರ್​ ಅಪ್ಲಿಕೇಶನ್ ಮತ್ತು ವೆಬ್​ಸೈಟ್​

ಗೆಲುವಿನ ಸಾಧ್ಯತೆ ಏನು?

ಉತ್ತಮ ಗುಣಮಟ್ಟದ ತಂಡಗಳ ವಿರುದ್ಧ ಆಡುವಲ್ಲಿ ನೇಪಾಳದ ಅನುಭವದ ಕೊರತೆಯಿಂದಾಗಿ ಭಾರತವು ಪಂದ್ಯವನ್ನು ಆರಾಮವಾಗಿ ಗೆಲ್ಲುವ ಸಾಧ್ಯತೆಯಿದೆ.

Exit mobile version