ಹ್ಯಾಂಗ್‌ಝೌ: ಟೀಮ್ ಇಂಡಿಯಾದ ಯುವ ಆರಂಭಿಕ ಡ್ಯಾಶಿಂಗ್ ಓಪನರ್ ಯಶಸ್ವಿ ಜೈಸ್ವಾಲ್(100) ಅವರು ಏಷ್ಯನ್ ಗೇಮ್ಸ್ನಲ್ಲಿ(asian games 2023) ನೇಪಾಳ(India vs Nepal) ವಿರುದ್ಧ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಅವರ ಶತಕದ ನೆರವಿನಿಂದ ಭಾರತ ಬೃಹತ್ ಮೊತ್ತ ಪೇರಿಸಿದೆ. ಇದು ಜೈಸ್ವಾಲ್ ಅವರ ಚೊಚ್ಚಲ ಟಿ20 ವಿಶ್ವಕಪ್ ಶತಕವಾಗಿದೆ.
ಇಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಜೈಸ್ವಾಲ್ ಅವರ ಶತಕ ಮತ್ತು ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ರಿಂಕು ಸಿಂಗ್ ಸಾಹಸದಿಂದ ಭಾರತ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 202 ರನ್ ಬಾರಿಸಿದೆ.
ಚೊಚ್ಚಲ ಶತಕ ಸಂಭ್ರಮ
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಪ್ರಯತ್ನದಲ್ಲೇ ಶತಕ ಬಾರಿಸಿ ಮಿಂಚಿದ್ದ ಐಪಿಎಲ್ ಸ್ಟಾರ್ ಜೈಸ್ವಾಲ್ ನೇಪಾಳ ವಿರುದ್ಧವು ಸಿಡಿದು ನಿಂತರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಅವರು ಸಿಕ್ಸರ್, ಬೌಂಡರಿಯ ಮಳೆಯನ್ನೇ ಸುರಿಸಿದರು. ಅವರ ಬ್ಯಾಟಿಂಗ್ ಆರ್ಭಟಕ್ಕೆ ನೇಪಾಳ ಬೌಲರ್ಗಳು ಬಳಲಿ ಬೆಂಡಾದರು. 49 ಎಸೆತಗಳಿಂದ ಶತಕವನ್ನು ಪೂರ್ತಿಗೊಳಿಸಿದರು. ಇದರಲ್ಲಿ 74 ರನ್ಗಳು ಬೌಂಡರಿ ಮತ್ತು ಸಿಕ್ಸರ್ ಮೂಲಕವೇ ದಾಖಲಾಯಿತು. ಒಟ್ಟು 8 ಬೌಂಡರಿ ಮತ್ತು 7 ಸಿಕ್ಸರ್ ಸಿಡಿಯಿತು. ಭರ್ತಿ 100 ರನ್ಗಳಿಸಿದ ವೇಳೆ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು.
ಇದನ್ನೂ ಓದಿ Asian Games 2023: ಪಿ.ಟಿ ಉಷಾ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ
ಐಪಿಎಲ್ ಹಾಗೂ ವಿಂಡೀಸ್ ಎದುರಿನ ಟಿ20 ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ತಿಲಕ್ ವರ್ಮ ಈ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. ಕೇವಲ 2 ರನ್ಗೆ ಆಟ ಮುಗಿಸಿದರು. ನಾಯಕ ಗಾಯಕ್ವಾಡ್ 25 ರನ್ಗಳ ಕೊಡುಗೆ ನೀಡಿದರು.
One of the best innings by Yashasvi Jaiswal.
— Mufaddal Vohra (@mufaddal_vohra) October 3, 2023
Asian Games Quarter Finals and Yashasvi stepped up on a tough pitch. pic.twitter.com/Rl31ZENse6
ಅಂತಿಮ ಹಂತದಲ್ಲಿ ಸಿಡಿದ ರಿಂಕು
ಈ ಬಾರಿಯ ಐಪಿಎಲ್ನಲ್ಲಿ ಅಸಾಮಾನ್ಯ 5 ಸಿಕ್ಸರ್ ಬಾರಿಸಿ ಸಿಕ್ಸರ್ ಕಿಂಗ್ ಎಂದೇ ಖ್ಯಾತಿ ಪಡೆದಿರುವ ರಿಂಕು ಸಿಂಗ್ ತಮ್ಮ ಎಂದಿನ ಶೈಲಿಯಲ್ಲಿಯೇ ಬ್ಯಾಟಿಂಗ್ ಪ್ರದರ್ಶನ ತೋರಿದರು. ಕ್ರೀಸ್ಗೆ ಬಂದ ತಕ್ಷಣವೇ ಆಕ್ರಮಣಕಾರಿ ಆಟವಾಡಿದ ಅವರು ಕೇವಲ 15 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ ಅಜೇಯ 37 ರನ್ ಬಾರಿಸಿದರು. ಕಳೆದ ಐರ್ಲೆಂಡ್ ವಿರುದ್ಧದ ಸರಣಿಯಲ್ಲೂ ರಿಂಕು ಉತ್ತಮ ಬ್ಯಾಟಿಂಗ್ ನಡೆಸಿದ್ದರು. ರಿಂಕುಗೆ ಮತ್ತೊಂದು ತುದಿಯಲ್ಲಿ ಶಿವಂ ದುಬೆ ಕೂಡ ಉತ್ತಮ ಸಾಥ್ ನೀಡಿದರು. ದುಬೆ 19 ಎಸೆತಗಳಿಂದ 25 ರನ್ ಬಾರಿಸಿ ಅಜೇಯರಾಗಿ ಉಳಿದರು. ನೇಪಾಳ ಪರ ದೀಪೇಂದ್ರ ಸಿಂಗ್ ಐರಿ 31 ರನ್ ನೀಡಿ 2 ವಿಕೆಟ್ ಪಡೆದರು.
ಭಾರತ ತಂಡ
ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿ.ಕೀ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಸಾಯಿ ಕಿಶೋರ್, ಶಿವಂ ದುಬೆ.