Site icon Vistara News

India vs Netherlands | ನೆದರ್ಲೆಂಡ್ಸ್‌ ವಿರುದ್ಧ ಭಾರತಕ್ಕೆ ಭರ್ಜರಿ ಜಯ! ರೋಹಿತ್, ವಿರಾಟ್, ಸೂರ್ಯ, ಭುವಿ ಮಿಂಚಿಂಗ್!

t20

ಸಿಡ್ನಿ: ಆರಂಭದಲ್ಲಿ ಬ್ಯಾಟಿಂಗ್​ ಬಳಿಕ ಬೌಲಿಂಗ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಟೀಮ್​ ಇಂಡಿಯಾ ಟಿ20 ವಿಶ್ವ ಕಪ್​ನ ಸೂಪರ್​12 ಹಂತದ ಪಂದ್ಯದಲ್ಲಿ ನೆದರ್ಲೆಂಡ್ಸ್​(India vs Netherlands) ತಂಡವನ್ನು 56 ರನ್​ ಅಂತರದಿಂದ ಮಣಿಸಿ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ.

ಸಿಡ್ನಿ ಮೈದಾನದಲ್ಲಿ ಗುರುವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ತಂಡ. ನಾಯಕ ರೋಹಿತ್​ ಶರ್ಮಾ(53), ವಿರಾಟ್​ ಕೊಹ್ಲಿ(62*) ಮತ್ತು ಸೂರ್ಯಕುಮಾರ್ ಯಾದವ್(51*) ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 179 ರನ್​ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್​ ತಂಡ ತನ್ನ ಪಾಲಿನ ಓವರ್​ನಲ್ಲಿ 9 ವಿಕೆಟ್​ ಕಳೆದುಕೊಂಡು 123 ರನ್​ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ನೆದರ್ಲೆಂಡ್ಸ್​ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿತು.

ಭುವನೇಶ್ವರ್​ ಮಾರಕ ದಾಳಿ
ಅನುಭವಿ ಬೌಲರ್​ ಭುವನೇಶ್ವರ್ ಕುಮಾರ್​​ ಈ ಪಂದ್ಯದಲ್ಲಿ ಮೊದಲ ಎರಡು ಓವರ್​ ಮೇಡನ್​ ಸಹಿತ ವಿಕೆಟ್​ ಟೇಕಿಂಗ್​ ಪ್ರದರ್ಶನ ತೋರಿದರು. ಈ ಮೂಲಕ ನೆದರ್ಲೆಂಡ್ಸ್​ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ಪಾಕ್​ ವಿರುದ್ಧ ದುಬಾರಿಯಾಗಿದ್ದ ಅಕ್ಷರ್​ ಪಟೇಲ್​ ಕೂಡ ತಮ್ಮ ಮೊದಲ ಓವರ್​ನಲ್ಲೇ ವಿಕೆಟ್​ ಹಾರಿಸುವಲ್ಲಿ ಯಶಸ್ವಿಯಾದರು. ನೆದರ್ಲೆಂಡ್ಸ್​ 20 ರನ್​ಗೆ ಎರಡು ಪ್ರಮುಖ ವಿಕೆಟ್​ ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು. ನೆದರ್ಲೆಂಡ್ಸ್​ ಪರ ಮಧ್ಯಮ ಕ್ರಮಾಂಕದ ಆಟಗಾರ ಕಾಲಿನ್ ಅಕೆರ್ಮನ್ ಒಂದು ಹಂತದಲ್ಲಿ ಪ್ರತಿ ಹೋರಾಟ ನಡೆಸುವ ಸೂಚನೆ ನೀಡಿದರೂ 17 ರನ್​ ಗಳಿಸಿದ ವೇಳೆ ಅಶ್ವಿನ್​ ಅವರ ಸ್ಪಿನ್​ ಬಲೆಗೆ ಬಿದ್ದರು. ಇಲ್ಲಿಂದ ನೆದರ್ಲೆಂಡ್ಸ್​ ಆಟಗಾರರು ಪೆವಿಲಿಯನ್‌ಗೆ​ ಪರೇಡ್​ ನಡೆಸಿದರು. ಕ್ರೀಸ್‌ನಲ್ಲಿ ಯಾವೊಬ್ಬ ಆಟಗಾರರೂ ಹೆಚ್ಚು ಹೊತ್ತು ಕಳೆಯಲು ಸಾಧ್ಯವಾಗಲಿಲ್ಲ.

ಅಶ್ವಿನ್​ ನಾಲ್ಕು ಓವರ್​ನಲ್ಲಿ 21 ರನ್​ ಬಿಟ್ಟುಕೊಟ್ಟು 2 ವಿಕೆಟ್​ ಉರುಳಿಸಿದರು. ಅಕ್ಷರ್​ 18 ರನ್​ಗೆ 2 ವಿಕೆಟ್ ಕಬಳಿಸಿ ಮಿಂಚಿದರು. ಟಿಮ್ ಪ್ರಿಂಗಲ್ ಅಂತಿಮವಾಗಿ 20 ರನ್​ ಗಳಿಸಿ ನೆದರ್ಲೆಂಡ್ಸ್​ ಪರ ಅತ್ಯಧಿಕ ಸ್ಕೋರರ್​ ಎನಿಸಿಕೊಂಡರು.

ಕೊಹ್ಲಿ-ಸೂರ್ಯ ಉತ್ತಮ ಜತೆಯಾಟ
ಮೂರನೇ ವಿಕೆಟ್​ಗೆ ಜತೆಯಾದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್​ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್​ ನಡೆಸಿದರು. ಎದುರಾಳಿ ಬೌಲರ್​ಗಳಿಗೆ ಬೌಂಡರಿ, ಸಿಕ್ಸರ್​ ರುಚಿ ತೋರಿಸಿದ ಉಭಯ ಆಟಗಾರು ಅಜೇಯವಾಗಿ ಅರ್ಧ ಶತಕ ಪೂರೈಸಿದರು. ಕೊಹ್ಲಿ 44 ಎಸೆತಗಳಲ್ಲಿ 62 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ ಅರ್ಧ ಶತಕ ಗಳಿಸುವ ಮೂಲಕ ಮುರಿಯದ ಮೂರನೇ ವಿಕೆಟ್​ಗೆ 95 ರನ್ ಜತೆಯಾಟ ನಡೆಸಿದರು. ಈ ಮೊತ್ತ ಕೇವಲ 48 ಎಸೆತದಿಂದ ದಾಖಲಾಯಿತು.

ಆರಂಭಿಕ ಆಟಗಾರ ಕೆ.ಎಲ್‌ ರಾಹುಲ್ ಮತ್ತೆ ವಿಫಲರಾಗಿದ್ದಾರೆ. 12 ಎಸೆತಗಳಲ್ಲಿ 9 ರನ್​ ಗಳಿಸಿ ನಿರಾಸೆ ಮೂಡಿಸಿದರು. ಪಾಕಿಸ್ತಾನ ಎದುರು 4 ರನ್‌ಗೆ ವಿಕೆಟ್‌ ಕೈಚೆಲ್ಲಿದ್ದ ರೋಹಿತ್‌, ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿದರು. ಮೂರು ಸಿಕ್ಸರ್​ ಮತ್ತು ನಾಲ್ಕು ಬೌಂಡರಿ ಸಹಿತ 53 ರನ್​ ಪೇರಿಸಿದರು.

ಸ್ಕೋರ್​ ವಿವರ

ಭಾರತ: 20 ಓವರ್​ಗಳಲ್ಲಿ 2 ವಿಕೆಟ್​ನಷ್ಟಕ್ಕೆ 179 (ರೋಹಿತ್​ 53, ಕೊಹ್ಲಿ 62* ಸೂರ್ಯಕುಮಾರ್​ 51* ವ್ಯಾನ್ ಮೀಕೆರೆನ್ 32ಕ್ಕೆ 1)

ನೆದರ್ಲೆಂಡ್ಸ್​: 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 (ಟಿಮ್ ಪ್ರಿಂಗಲ್ 20, ಕಾಲಿನ್ ಅಕೆರ್ಮನ್ 17, ಭುವನೇಶ್ವರ್​ ಕುಮಾರ್​ 9ಕ್ಕೆ2, ಅಕ್ಷರ್​ 18ಕ್ಕೆ 2, ಅಶ್ವಿನ್​ 21ಕ್ಕೆ2, ಅರ್ಶ್​ದೀಪ್​ ಸಿಂಗ್ 37ಕ್ಕೆ 2​ ).

ಇದನ್ನೂ ಓದಿ | BCCI WOMEN | ಬಿಸಿಸಿಐನಿಂದ ಐತಿಹಾಸಿಕ ಹೆಜ್ಜೆ, ಇನ್ನು ಪುರುಷ, ಮಹಿಳಾ ಕ್ರಿಕೆಟಿಗರಿಗೆ ಸಮಾನ ಸಂಭಾವನೆ

Exit mobile version