ನವ ದೆಹಲಿ: ಏಷ್ಯಾಕಪ್-2022 ಪಂದ್ಯಾವಳಿಯ (Asia cup 2022) ವೇಳಾಪಟ್ಟಿ ಮಂಗಳವಾರ ಬಿಡುಗಡೆಯಾಗಿದೆ. ಟಿ20 ವಿಶ್ವಕಪ್‌ಗೂ ಮೊದಲೇ ಮತ್ತೊಂದು ಕುತೂಹಲಕಾರಿ ಪಂದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿದೆ. ಏಷ್ಯಾಕಪ್ ಭಾಗವಾಗಿ ಎರಡು ತಂಡಗಳ ನಡುವೆ ದುಬೈ ವೇದಿಕೆಯಾಗಿ ಆ.28ರಂದು ಹೈವೋಲ್ಟೇಜ್ ಪಂದ್ಯಕ್ಕೆ ಮುಹೂರ್ತ ನಿಗದಿಯಾಗಿದೆ.
ಏಷ್ಯಾ ಕಪ್ ಪಂದ್ಯಾವಳಿ ಆ.27ರಿಂದ ಸೆ.11ವರೆಗೆ ನಡೆಯಲಿದ್ದು, ಪಂದ್ಯಾವಳಿಯ ಎರಡನೇ ದಿನ(ಆ.28) ಗ್ರೂಪ್ ಎ ವಿಭಾಗದಲ್ಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಕಳೆದ ವರ್ಷ ಟಿ 20 ವಿಶ್ವ ಕಪ್‌ನಲ್ಲಿ ಪಾಕ್ ಎದುರಿನ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಈ ವರ್ಷ ಏಷ್ಯಾಕಪ್ ಅನ್ನು ಟ20 ಮಾದರಿಯಲ್ಲಿ ನಡೆಸಲು ಏಷಿಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿದೆ. ಮೊದಲಿಗೆ ಶ್ರೀಲಂಕಾ ವೇದಿಕೆಯಾಗಿ ಪಂದ್ಯಾವಳಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಅಲ್ಲಿ ಆರ್ಥಿಕ ಬಿಕ್ಕಟ್ಟು ಹಾಗೂ ರಾಜಕೀಯ ಸಂಕ್ಷೋಭೆ ಹಿನ್ನೆಲೆಯಲ್ಲಿ ಏಷ್ಯಾಕಪ್ ವೇದಿಕೆಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ದುಬೈ, ಶಾರ್ಜಾ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.
ಈ ಬಾರಿ ಒಟ್ಟು ಆರು ತಂಡಗಳು ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಗಾನಿಸ್ತಾನ, ಬಾಂಗ್ಲಾದೇಶ ಸೇರಿ ಏಷ್ಯಾ ಖಂಡದ ಮತ್ತೊಂದು ದೇಶ ಟೂರ್ನಿಯಲ್ಲಿ ಭಾಗವಹಿಸಲಿದೆ. 6ನೇ ತಂಡವನ್ನು ಕ್ವಾಲಿಫೈಯರ್ ಪಂದ್ಯದ ಮೂಲಕ ನಿರ್ಧರಿಸಲಾಗುತ್ತದೆ. ಆ.20ರಿಂದ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿವೆ.
ಒಟ್ಟು ಆರು ತಂಡಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದು, ಗ್ರೂಪ್ ಎ ನಲ್ಲಿ ಭಾರತ್, ಪಾಕಿಸ್ತಾನ, ಕ್ವಾಲಿಫೈಯರ್ ಪಂದ್ಯದ ವಿಜೇತ ತಂಡ ಇವೆ. ಗ್ರೂಪ್ ಬಿ ನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಗಾನಿಸ್ತಾನ ತಂಡಗಳಿವೆ. ಮೊದಲು ಭಾರತ ಗ್ರೂಪ್ ಎ ವಿಭಾಗದ ಪಾಕಿಸ್ತಾನ, ಕ್ವಾಲಿಫೈಯರ್ ತಂಡದೊಂದಿಗೆ ಸೆಣಸಲಿದೆ. ಏಷ್ಯಾಕಪ್-2018 ನಲ್ಲಿ ಭಾರತ ಚಾಂಪಿಯನ್ ಆಗಿ ಮಿಂಚಿತ್ತು.
ಇನ್ನು ಇದೇ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ.
ಇದನ್ನೂ ಓದಿ | ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಗೆ ಕೋಟಿ ಕೋಟಿ ಲಾಭ ತಂದುಕೊಟ್ಟ ಭಾರತ ವಿಕೆಟ್‌ಕೀಪರ್