ನವದೆಹಲಿ: ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 15ರಂದು ನಡೆಯಬೇಕಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ (World Cup 2023) ಪಂದ್ಯದ ದಿನಾಂಕವನ್ನು ಬದಲಿಸಲಾಗಿದ್ದು, ಕೊನೆಗೂ ಎರಡೂ ರಾಷ್ಟ್ರಗಳ ನಡುವಿನ ರೋಚಕ ಕ್ರಿಕೆಟ್ ಸಮರಕ್ಕೆ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್ 15ರ ಬದಲು ಅಕ್ಟೋಬರ್ 14ರಂದು ಪಂದ್ಯ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹಾಗಾಗಿ, ಇದು ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯಾಗಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಅಕ್ಟೋಬರ್ 15ರಂದೇ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಭದ್ರತಾ ಕಾರಣಗಳು ಮತ್ತು ಗುಜರಾತ್‌ನಲ್ಲಿ ಅ.15ರಂದು ಅದ್ಧೂರಿಯಾಗಿ ನವರಾತ್ರಿ ಆಚರಿಸುವ ಕಾರಣದಿಂದಾಗಿ ಇದೇ ದಿನಾಂಕದಂದು ಪಂದ್ಯ ಆಯೋಜಿಸದಿರಲು ತೀರ್ಮಾನಿಸಲಾಗಿತ್ತು. ಈಗ ನಿಗದಿತ ದಿನಾಂಕಕ್ಕಿಂತ ಒಂದು ದಿನ ಮೊದಲೇ ಪಂದ್ಯವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಅಭಿಮಾನಿಗಳು ನಿಗದಿತ ದಿನಾಂಕಕ್ಕಿಂತ ಒಂದು ದಿನ ಮೊದಲೇ ರಣರೋಚಕ ಪಂದ್ಯದ ಖುಷಿಯನ್ನು ಅನುಭವಿಸಲಿದ್ದಾರೆ.
ಇದನ್ನೂ ಓದಿ: World Cup 2023 : ವಿಶ್ವ ಕಪ್ ಟಿಕೆಟ್ಗಳು ಎಲ್ಲೆಲ್ಲಿ ಸಿಗುತ್ತವೆ? ಇಲ್ಲಿದೆ ಅದರ ಮಾಹಿತಿ
ಭಾರತ ಹಾಗೂ ಪಾಕಿಸ್ತಾನದ ಪಂದ್ಯ ಎಂದರೆ ಅಪಾರ ಕುತೂಹಲ, ನಿರೀಕ್ಷೆ ಹುಟ್ಟಿಸುತ್ತದೆ. ಎರಡೂ ದೇಶಗಳ ಜನ ಚಾತಕಪಕ್ಷಿಯಂತೆ ಪಂದ್ಯಕ್ಕಾಗಿ ಕಾಯುತ್ತಾರೆ. ಎಷ್ಟೇ ದುಬಾರಿ ಮೊತ್ತದ ಟಿಕೆಟ್ ಆದರೂ ಖರೀದಿಸಿ ಪಂದ್ಯ ವೀಕ್ಷಿಸಲು ಸ್ಟೇಡಿಯಂಗೆ ತೆರಳುತ್ತಾರೆ. ಅದರಲ್ಲೂ, ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ನಡೆಯುವ ಪಂದ್ಯವು ಹಲವು ಬಾರಿ ಚರ್ಚಿಸಿ, ಮುಂದೂಡಿ ಈಗ ನಿಗದಿಪಡಿಸಲಾಗಿದೆ. ಈ ಕುರಿತು ಬಿಸಿಸಿಐ ಅಧಿಕೃತ ಮಾಹಿತಿಯೊಂದೇ ಪ್ರಕಟಿಸಬೇಕಿದೆ ಎಂದು ಮೂಲಗಳು ತಿಳಿಸಿವೆ.
2011 ರ ಆವೃತ್ತಿಯಲ್ಲಿ ಸಹ ಆತಿಥ್ಯ ವಹಿಸಿದ ನಂತರ ಭಾರತವು ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆ ಆತಿಥ್ಯ ವಹಿಸಲಿದೆ. 2013 ರಲ್ಲಿ ಕೊನೆಯ ಪಂದ್ಯವನ್ನು ಆಡಿದ ನಂತರ ಭಾರತವು 10 ವರ್ಷಗಳ ನಂತರ ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯವನ್ನು ಆಡಲಿದೆ. ಏಷ್ಯಾಕಪ್ ಮತ್ತು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗುತ್ತವೆ, ಆದ್ದರಿಂದ ಅಭಿಮಾನಿಗಳು ಈ ಎರಡು ತಂಡಗಳ ಆಟವನ್ನು ವೀಕ್ಷಿಸುವ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಹಾಗಾಗಿ, ಉಭಯ ತಂಡಗಳ ನಡುವಿನ ವಿಶ್ವಕಪ್ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ.