ಕೊಲಂಬೊ: ಬಾಂಗ್ಲಾದೇಶ ವಿರುದ್ಧದ ಅಂತಿಮ ಸೂಪರ್ 4 ಪಂದ್ಯದಲ್ಲಿ ಗಾಯಕೊಂಡು ಏಷ್ಯಾಕಪ್(Asia Cup 2023) ಟೂರ್ನಿಯಿಂದ ಹೊರಬಿದ್ದ ಅಕ್ಷರ್ ಪಟೇಲ್(Axar Patel) ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್ ಅವರು ಆಯ್ಕೆಯಾಗಿದ್ದರು. ಅಚ್ಚರಿ ಎಂದರೆ ಅವರು ಲಂಕಾಗೆ ತಲುಪಿದ್ದೇ ನಿನ್ನೆ ರಾತ್ರಿ. ಆದರೆ ಮಧ್ಯಾಹ್ನ ಫೈನಲ್ ಪಂದ್ಯದಲ್ಲಿ(India vs Sri Lanka Final)ಆಡುವ ಅವಕಾಶವನ್ನು ಪಡೆದರು.
ನಿರೀಕ್ಷೆಯಂತೆ ಭಾರತ ಪಂದ್ಯಕ್ಕೆ 6 ಬದಲಾವಣೆ ಮಾಡಿತು. ಬಾಂಗ್ಲಾದೇಶ ವಿರುದ್ಧದ ಔಪಚಾರಿಕ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ, ಉಪನಾಯಕ ಹಾರ್ದಿಕ್ ಪಾಂಡ್ಯ, ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಮ್ಮದ್ ಸಿರಾಜ್ ಮತ್ತು ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತೆ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಇವರ ಸ್ಥಾನದಲ್ಲಿ ಆಡಿದ್ದ ಆಟಗಾರರು ಈ ಪಂದ್ಯದಿಂದ ಹೊರಗುಳಿದರು. ಅಕ್ಷರ್ ಬದಲು ವಾಷಿಂಗ್ಟನ್ ಸುಂದರ್ ಆಡಲಿಳಿದರು.
7 ತಿಂಗಳ ಬಳಿಕ ಕಮ್ಬ್ಯಾಕ್
ಗಾಯದಿಂದಾಗಿ ವಾಷಿಂಗ್ಟನ್ ಸುಂದರ್ ಅವರು ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. ಅವರು ಸನ್ರೈಸರ್ಸ್ ಹೈದಾರಾಬಾದ್ ತಂಡದ ಸದಸ್ಯರಾಗಿದ್ದರು. ಇದಕ್ಕೂ ಮುನ್ನ ಆರ್ಸಿಬಿ ಪರ ಅವರು ಆಡಿದ್ದರು. ಭಾರತ ತಂಡದ ಪರ 16 ಏಕದಿನ, 4 ಟೆಸ್ಟ್, 37 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 29.12 ಸರಾಸರಿಯಲ್ಲಿ 233 ರನ್ ಮತ್ತು 16 ವಿಕೆಟ್ ಉರುಳಿಸಿದ್ದಾರೆ. ಟಿ20ಯಲ್ಲಿ 29 ವಿಕೆಟ್ ಪಡೆದಿದ್ದಾರೆ. ಇದೇ ವರ್ಷದ ಆರಂಭದಲ್ಲಿ ನ್ಯೂಜಿಲ್ಯಾಂಡ್ ಏಕದಿನ ಸರಣಿಯಲ್ಲಿ ಭಾರತ ಪರ ಕೊನೆಯ ಏಕದಿನ ಪಂದ್ಯ ಆಡಿದ್ದರು. ಬಳಿಕ ಗಾಯಗೊಂಡು ತಂಡದಿಂದ ಹೊರಗುಳಿದ್ದರು.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕೊನೆಯ ತನಕ ಹೋರಾಡಿ ತಂಡಕ್ಕೆ ಗೆಲುವು ತಂದು ಕೊಡುವ ಪ್ರಯತ್ನ ಮಾಡಿದರು. ಈ ವೇಳೆ ಅವರಿಗೆ ಹಲವು ಬಾರಿ ಗಾಯದ ಸಮಸ್ಯೆ ಕಾಡಿತ್ತು. ಆದರೂ ಪದೇಪದೆ ನೋವು ನಿವಾರಕ ಸ್ಪ್ರೇ ಬಳಸಿ ಆಟವಾಡಿದ್ದರು. 2 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 42 ರನ್ ಬಾರಿಸಿ ಮುಸ್ತಫಿಜುರ್ ರೆಹಮಾನ್ಗೆ ವಿಕೆಟ್ ಒಪ್ಪಿಸಿದ್ದರು.
🚨 Toss & Team News from Colombo 🚨
— BCCI (@BCCI) September 17, 2023
Sri Lanka have elected to bat against #TeamIndia in the #AsiaCup2023 Final.
Here's our Playing XI 🙌 #INDvSL
Follow the match ▶️ https://t.co/xrKl5d85dN pic.twitter.com/tzLDct6Ppb
ವಿಶ್ವಕಪ್ಗೂ ಅಕ್ಷರ್ ಅನುಮಾನ
ಮೊಣಕೈ ಮತ್ತು ಸ್ನಾಯು ಸೆಳೆತದ ಗಾಯದಿಂದ ಬಳಲುತ್ತಿರುವ ಅಕ್ಷರ್ ಪಟೇಲ್ ಅವರು ವಿಶ್ವಕಪ್ಗೂ ಅನುಮಾನ ಎನ್ನಲಾಗಿದೆ. ಅತ್ತ ಶಾರ್ದೂಲ್ ಠಾಕೂರ್ ತಂಡದಲ್ಲಿದ್ದರೂ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುತಿಲ್ಲ. ಇದೇ ಕಾರಣಕ್ಕೆ ಆಲ್ರೌಂಡರ್ ಆಗಿರುವ ವಾಷಿಂಗ್ಟನ್ ಸುಂದರ್ ತಂಡಕ್ಕೆ ಬಂದ ತಕ್ಷಣ ಅವರಿಗೆ ಅವಕಾಶ ನೀಡಲು ಕಾರಣ. ಒಂದೊಮ್ಮೆ ಅಕ್ಷರ್ ವಿಶ್ವಕಪ್ಗೆ ಅಲಭ್ಯರಾದರೆ ಸುಂದರ್ ಬದಲಿ ಆಟಗಾರನಾಗುವುದು ಖಚಿತ.
ಇದನ್ನೂ ಓದಿ Asian Games 2023: ಏಷ್ಯನ್ ಗೇಮ್ಸ್ ಕ್ರಿಕೆಟ್ಗೆ ಪರಿಷ್ಕೃತ ಭಾರತ ತಂಡ ಪ್ರಕಟಿಸಿದ ಬಿಸಿಸಿಐ
ಉಭಯ ತಂಡಗಳ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ,,ಕೆ.ಎಲ್ ರಾಹುಲ್(ವಿಕೆಟ್ ಕೀಪರ್),ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್.
ಶ್ರೀಲಂಕಾ: ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ಕುಸಲ್ ಪೆರೇರ, ಕುಸಾಲ್ ಮೆಂಡಿಸ್ (ಉಪನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದುನಿತ್ ವೆಲ್ಲಲಗೆ, ಮಥೀಶ ಪತಿರಾಣ, ಪ್ರಮೋದ್ ಮದುಶನ್, ದುಶಾನ್ ಹೇಮಂತ.