ತರೂಬಾ (ವೆಸ್ಟ್ ಇಂಡೀಸ್): ಬ್ಯಾಟಿಂಗ್ನಲ್ಲಿ ವೈಫಲ್ಯ ಎದುರಿಸಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡ ವೆಸ್ಟ್ ಪ್ರವಾಸದಲ್ಲಿನ (ind vs wi) ಟಿ20 ಸರಣಿಯ ಮೊದಲ ಪಂದ್ಯದಲ್ಲಿ 5 ರನ್ಗಳ ಸೋಲಿಗೆ ಒಳಗಾಗಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 0-1 ಹಿನ್ನಡೆಗೆ ಒಳಗಾಗಿದೆ.
ಟ್ರಿನಿಡಾಡ್ನ ಇಲ್ಲಿನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ ತನ್ನೆಲ್ಲ ಓವರ್ಗಳು ಮುಕ್ತಾಯಗೊಂಡಾಗ 9 ವಿಕೆಟ್ ನಷ್ಟ ಮಾಡಿಕೊಂಡು 145 ರನ್ ಗಳಿಸಲು ಶಕ್ತಗೊಂಡು ಸೋಲೊಪ್ಪಿಕೊಂಡಿತು.
ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಶುಭ್ಮನ್ ಗಿಲ್ (3) ಹಾಗೂ ಇಶಾನ್ ಕಿಶನ್ (6) ಬೇಗನೆ ವಿಕೆಟ್ ಒಪ್ಪಿಸುವ ಮೂಲಕ ಹಿನ್ನಡೆಗೆ ಕಾರಣರಾದರು. 28 ರನ್ಗಳಿಗೆ 2 ವಿಕೆಟ್ ಕಳೆದಕೊಂಡ ಭಾರತಕ್ಕೆ ಸೂರ್ಯಕುಮಾರ್ ಯಾದವ್ (21) ಹಾಗೂ ತಿಲಕ್ ವರ್ಮಾ (30) ಚೈತನ್ಯ ನೀಡಿದರು. ಇವರಿಬ್ಬರ ಜತೆಯಾಟದ ವೇಳೆ ಭಾರತ ತಂಡಕ್ಕೆ ಗೆಲುವಿನ ಮುನ್ಸೂಚನೆ ದೊರಕಿತು. ಆದರೆ, ಸೂರ್ಯಕುಮಾರ್ ಯಾದವ್ ವಿಂಡೀಸ್ ಫೀಲ್ಡರ್ ಶಿಮ್ರೋನ್ ಹೆಟ್ಮಾಯರ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಪದಾರ್ಪಣೆ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ತಿಲಕ್ ವರ್ಮಾ ದೊಡ್ಡ ಹೊಡೆತಕ್ಕೆ ಮುಂದಾಗಿ ಔಟಾದರು. ಬಳಿಕ ಸಂಜು ಸ್ಯಾಮ್ಸನ್ 12 ರನ್ ಬಾರಿಸಿ ಅನಗತ್ಯ ರನ್ಔಟ್ಗೆ ಬಲಿಯಾದರು. ಹಾರ್ದಿಕ್ ಪಾಂಡ್ಯ ಕೊಡುಗೆ 19 ರನ್. ಅರ್ಶ್ದೀಪ್ ಸಿಂಗ್ ಕೊನೆಯಲ್ಲಿ 12 ರನ್ ಬಾರಿಸಿ ಗೆಲುವು ತಂದುಕೊಡುವ ಯತ್ನ ಮಾಡಿದರು. ಇತರ 15 ರನ್ಗಳನ್ನು ಪಡೆದ ಹೊರತಾಗಿಯೂ ಭಾರತಕ್ಕೆ ಜಯ ಲಭಿಸಲಿಲ್ಲ.
ಪೊವೆಲ್, ಪೂರನ್ ಆಟ
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ಕೈಲ್ ಮೇಯರ್ಸ್ ಅವರನ್ನು 1 ರನ್ಗಳಿಗೆ ಕಳೆದುಕೊಳ್ಳುವ ಮೂಲಕ ಹಿನ್ನಡೆ ಎದುರಿಸಿತು. ಬ್ರೆಂಡನ್ ಕಿಂಗ್ 28 ರನ್ ಬಾರಿಸಿ ಮಿಂಚಿದರೂ ಚಾರ್ಲ್ಸ್ 3 ರನ್ಗೆ ಔಟಾಗುವ ಮೂಲಕ ಹಿನ್ನಡೆಗೆ ಒಳಗಾಯಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ (41 ರನ್) ಹಾಗೂ ರೋವ್ಮನ್ ಪೊವೆಲ್ (48 ರನ್) ಬಾರಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು.
ಇದನ್ನೂ ಓದಿ : Virat Kohli : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಮತ್ತೆ ದೀರ್ಘ ಅವಧಿಯ ರಜೆ! ಯಾಕೆ ಗೊತ್ತೇ?
ಆಗಸ್ಟ್ 6ರಂದು ಸರಣಿಯ ಎರಡನೇ ಪಂದ್ಯ ನಡೆಯಲಿದೆ. ಮೊದಲ ಪಂದ್ಯದ ಸೋಲಿನ ಹಿನ್ನಡೆಗೆ ಒಳಗಾಗಿರುವ ಭಾರತ ಆ ಪಂದ್ಯವನ್ನು ಗೆಲ್ಲುವ ಗುರಿಯನ್ನು ಹೊಂದಿದೆ.