Site icon Vistara News

India vs West Indies 2nd ODI| ಅಕ್ಷರ್ ಪಟೇಲ್‌ ಅಬ್ಬರ, ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತಕ್ಕೆ ಜಯ

India west indies

ಪೋರ್ಟ್‌ ಆಫ್‌ ಸ್ಪೇನ್:‌ ಅಕ್ಷರ್ ಪಟೇಲ್‌ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಭಾರತ ಇಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯವನ್ನು ಗೆದ್ದುಕೊಂಡಿದೆ. ಮೂರು ಪಂದ್ಯಗಳ ಸರಣಿಯನ್ನು ೨-೦ ಅಂತರದಲ್ಲಿ ವಶಪಡಿಸಿಕೊಂಡಿದೆ.

ಅಕ್ಷರ್ ಪಟೇಲ್‌ ಕೇವಲ ೩೫ ಎಸೆತಗಳಿಗೆ ಸ್ಫೋಟಕ ೬೪ ರನ್‌ಗಳನ್ನು ಗಳಿಸಿದರು. ಹೀಗಾಗಿ ವೆಸ್ಟ್‌ ಇಂಡೀಸ್‌ ನೀಡಿದ ೩೧೨ ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿ, ೨ ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಒಂದು ಹಂತದಲ್ಲಿ ಭಾರತ ೩೮.೪ ಓವರ್‌ಗಳಿಗೆ ೫ ವಿಕೆಟ್‌ಗಳನ್ನು ಕಳೆದುಕೊಂಡು ೨೦೫ ರನ್‌ ಗಳಿಸಿ ಆತಂಕದಲ್ಲಿತ್ತು. ಆದರೆ ಅಕ್ಷರ್ ಪಟೇಲ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಇನ್ನೂ ಎರಡು ಎಸೆತ ಬಾಕಿ ಇರುವಾಗಲೇ ಭಾರತ ಜಯ ಗಳಿಸಿತು. ಕೊನೆಯ ಮೂರು ಎಸೆತಗಳಿಗೆ ೬ ರನ್‌ಗಳ ಅಗತ್ಯ ಇತ್ತು. ಆಗ ಪಟೇಲ್‌, ಕೈಲ್ ಮೇಯರ್ಸ್‌ ಎಸೆತಕ್ಕೆ ಅದ್ಭುತ ಸಿಕ್ಸರ್‌ ಸಿಡಿಸಿದರು. ಒಟ್ಟು ೫ ಸಿಕ್ಸರ್‌ಗಳು ಮತ್ತು ೩ ಫೋರ್‌ಗಳ ಮೂಲಕ ಅಕ್ಷರ್ ಪಟೇಲ್‌ ಅಜೇಯರಾಗಿ ಉಳಿದು ವೆಸ್ಟ್‌ ಇಂಡೀಸ್‌ ಬೌಲಿಂಗ್‌ ಪಡೆಯ ಬೆವರಿಳಿಸಿದರು. ಇದಕ್ಕೂ ಮುನ್ನ ಶ್ರೇಯಸ್‌ ಐಯ್ಯರ್‌ (೬೩) ಮತ್ತು ಸಂಜು ಸ್ಯಾಮ್ಸನ್‌ (೫೪) ರನ್‌ ದಾಖಲಿಸಿ ವೆಸ್ಟ್‌ ಇಂಡೀಸ್‌ ನೀಡಿದ ಗುರಿಯನ್ನು ಬೆನ್ನಟ್ಟಲು ಸಹಕರಿಸಿದರು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ವೆಸ್ಟ್‌ ಇಂಡೀಸ್‌, ಆರಂಭಿಕ ಆಟಗಾರ ಶಾಯ್‌ ಹೋಪ್‌ ಅವರ ಶತಕದ ಆಟದ ನೆರವಿನಿಂದ ನಿಗದಿತ ೫೦ ಓವರ್‌ಗಳಲ್ಲಿ ೬ ವಿಕೆಟ್‌ ನಷ್ಟಕ್ಕೆ ೩೧೧ ರನ್‌ಗಳನ್ನು ಗಳಿಸಿತು. ಶಾಯ್‌ ಹೋಪ್‌ ಅವರು ೧೩೫ ಎಸೆತಗಳನ್ನು ಎದುರಿಸಿ ೩ ಸಿಕ್ಸರ್‌, ೮ ಫೋರ್‌ಗಳನ್ನು ಒಳಗೊಂಡಿದ್ದ ೧೧೫ ರನ್‌ಗಳನ್ನು ಬಾರಿಸಿದರು. ಕೊನೆಗೆ ಶಾರ್ದೂಲ್‌ ಠಾಕೂರ್‌ ಬೌಲಿಂಗ್‌ನಲ್ಲಿ ಅಕ್ಸರ್‌ ಪಟೇಲ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ನಿಕೋಲಸ್‌ ಪೂರನ್‌ ೭೭ ಎಸೆತಗಳಿಗೆ ೭೪ ರನ್‌ ಗಳಿಸಿದರು. ಕೈಲ್‌ ಮೇಯರ್ಸ್‌ ೩೯, ಶಮರ್ಥ್‌ ಬ್ರೂಕ್ಸ್‌ ೩೫ ರನ್‌ ಕಲೆ ಹಾಕಿದರು. ಭಾರತದ ಪರ ಶಾರ್ದೂಲ್‌ ಠಾಕೂರ್‌ ೭ ಓವರ್‌ಗಳಲ್ಲಿ ೫೪ ರನ್‌ಗಳಿಗೆ ೩ ವಿಕೆಟ್‌ ಕಬಳಿಸಿದರು. ಅಂತಿಮವಾಗಿ ೬ ವಿಕೆಟ್‌ ನಷ್ಟಕ್ಕೆ ೩೧೧ ರನ್‌ಗಳ ಪ್ರಭಾವಿ ಸ್ಕೋರ್‌ ಅನ್ನು ವೆಸ್ಟ್‌ ಇಂಡೀಸ್‌ ಮುಂದಿಟ್ಟಿತ್ತು. ಕೊನೆಯ ಹತ್ತು ಓವರ್‌ಗಳಲ್ಲಿ ವೆಸ್ಟ್‌ ಇಂಡೀಸ್‌ ೯೩ ರನ್‌ಗಳನ್ನು ಸಿಡಿಸಿತ್ತು.

ಈ ಸವಾಲನ್ನು ಬೆನ್ನಟ್ಟಿದ ಭಾರತದ ಪರ ಶುಭ್‌ಮನ್‌ ಗಿಲ್‌ ಅವರು ೪೯ ಎಸೆತಗಳಿಗೆ ೪೩ ರನ್‌ ಸಿಡಿಸಿದರು. ಮತ್ತೊಂದು ಕಡೆ ಕಪ್ತಾನ ಶಿಖರ್‌ ಧವನ್‌ ೧೩ಕ್ಕೆ ಔಟಾದರು. ಶೆಪಾರ್ಡ್‌ ಬೌಲಿಂಗ್‌ನಲ್ಲಿ ಮೇಯರ್ಸ್‌ ಅದ್ಭುತ ಕ್ಯಾಚ್‌ ಅನ್ನು ತಮ್ಮದಾಗಿಸಿದರು. ಭಾರತದ ಪರ ಶ್ರೇಯಸ್‌ ಅಯ್ಯರ್‌ ೭೧ ಎಸೆತಗಳಿಗೆ ೬೩, ಸಂಜು ಸ್ಯಾಮ್ಸನ್‌ ೫೧ ಎಸೆತಕ್ಕೆ ೫೪, ದೀಪಕ್‌ ಹೂಡಾ ೩೬ ಎಸೆತಕ್ಕೆ ೩೩ ರನ್‌ ಕಲೆ ಹಾಕಿದರು. ಇವರೆಲ್ಲರ ಕೊಡುಗೆಯ ಜತೆಗೆ ಕೊನೆಯ ಹಂತದಲ್ಲಿ ಅಕ್ಷರ್ ಪಟೇಲ್‌ ಸಿಡಿಲಬ್ಬರದ ೬೪ ರನ್‌ಗಳು ಭಾರತವನ್ನು ಗೆಲುವಿನ ದಡ ಮುಟ್ಟಿಸಿತು.

Exit mobile version