Site icon Vistara News

Ind vs wi : 181 ರನ್​ಗಳ ಅಲ್ಪ ಮೊತ್ತಕ್ಕೆ ಭಾರತ ತಂಡ ಆಲ್​ಔಟ್​

Ishan Kishan

ಬಾರ್ಬಡೋಸ್​: ವೆಸ್ಟ್​ ಇಂಡೀಸ್​ ವಿರುದ್ಧದ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ 181 ರನ್​ಗಳ ಸಣ್ಣ ಮೊತ್ತಕ್ಕೆ ಆಲ್ಔಟ್​ ಆಗಿದೆ. ಭಯಂಕರ ತಿರುವು ಪಡೆಯುತ್ತಿದ್ದ ಇಲ್ಲಿನ ಕೆನ್ಸಿಂಗ್ಟನ್​ ಓವಲ್​ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಇಶಾನ್​ ಕಿಶನ್​ (55 ರನ್​) ಒಬ್ಬರನ್ನು ಹೊರತುಪಡಿಸಿ ಉಳಿದ ಆಟಗಾರರು ಸಂಪೂರ್ಣ ವೈಫಲ್ಯ ಕಂಡರು. ಇದರಿಂದಾಗಿ ಆತಿಥೇಯ ವೆಸ್ಟ್​ ಇಂಡೀಸ್ ತಂಡಕ್ಕೆ ಕೇವಲ 181 ರನ್​ಗಳ ಗೆಲುವಿನ ಗುರಿ ಎದುರಾಗಿದೆ.

ಕಾಯಂ ನಾಯಕ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ತಂಡದ ನೇತೃತ್ವ ವಹಿಸಿದ್ದ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದ ಬಳಿಕವೂ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕೆನ್ಸಿಂಗ್ಟನ್​ ಓವಲ್​ ಪಿಚ್​ ಚೇಸಿಂಗ್​ ಗೆಲುವಿಗೆ ಹೆಸರುವಾಸಿಯಾಗಿರುವ ಕಾರಣ ಹಾರ್ದಿಕ್ ಆಯ್ಕೆ ಅಚ್ಚರಿ ಮೂಡಿಸಿತು. ಆದರೂ ಮಳೆಯ ಸಾಧ್ಯತೆಗಳು ಇದ್ದ ಕಾರಣ ಹಾಗೂ ನಿರೀಕ್ಷೆಯಂತೆ ಮಳೆ ಸುರಿದ ಹಿನ್ನೆಲೆಯಲ್ಲಿ ಅವರ ಆಯ್ಕೆ ಸರಿಯಾಗಿದೆ ಎಂದು ಅಂದುಕೊಳ್ಳಲಾಯಿತು. ಆದರೆ, ಭಾರತ ತಂಡದ ಆಟಗಾರರು ಬ್ಯಾಟಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಎದುರಿಸಿದ ಕಾರಣ ಆಯ್ಕೆ ಬಗ್ಗೆ ಮತ್ತೆ ಪ್ರಶ್ನೆ ಎದ್ದಿತು.

ಬ್ಯಾಟಿಂಗ್ ಅರಂಭಿಸಿದ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಇಶಾನ್​ ಕಿಶನ್ ಹಾಗೂ ಶುಭ್​ಮನ್​ ಗಿಲ್​ (34) ಮೊದಲ ವಿಕೆಟ್​ಗೆ 90 ರನ್ ಬಾರಿಸಿದರು. ಹೀಗಾಗಿ ಭಾರತ 200ರ ಗಡಿ ದಾಟಿ ದೊಡ್ಡ ಮೊತ್ತದ ಸವಾಲೊಡ್ಡಲಿದೆ ಎಂದು ಅಭಿಮಾನಿಗಳು ಅಂದುಕೊಂಡರು. ಆದರೆ, ಶುಭ್​ಮನ್​ ಗಿಲ್ ಔಟಾದ ಬಳಿಕ ಭಾರತದ ಬ್ಯಾಟಿಂಗ್ ಬಲ ಏಕಾಏಕಿ ಕುಸಿಯಿತು. ಕೊಹ್ಲಿ ಅನುಪಸ್ಥಿತಿಯಲ್ಲಿ ಅವಕಾಶ ಪಡೆದ ಕೇರಳದ ವಿಕೆಟ್​ ಕೀಪರ್ ಬ್ಯಾಟರ್​ ಸಂಜು ಸ್ಯಾಮ್ಸನ್​ ನಿರೀಕ್ಷೆ ಮೂಡಿಸಲು ವಿಫಲಗೊಂಡು ಕೇವಲ 9 ರನ್​ಗೆ ಔಟಾದರು.

ಇದನ್ನೂ ಓದಿ : ind vs wi : 2ನೇ ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇರಲಿಲ್ಲ ಯಾಕೆ?

ಸ್ಪಿನ್ ಬಲವಾಗಿ ತಂಡ ಸೇರಿಕೊಂಡ ಅಕ್ಷರ್​ ಪಟೇಲ್​ 1 ರನ್ ಗಳಿಸಿ ಔಟಾದರೆ, ನಾಯಕ ಹಾರ್ದಿಕ್ ಪಾಂಡ್ಯ 7 ರನ್​ಗಳಿಗೆ ಸೀಮಿತಗೊಂಡರು. ಆರಂಭದಲ್ಲಿ ವಿಶ್ವಾಸ ಮೂಡಿಸಿದ ಸೂರ್ಯಕುಮಾರ್ ಯಾದವ್​ 24 ರನ್​ಗಳಿಗೆ ಔಟಾದರೆ ರವೀಂದ್ರ ಜಡೇಜಾ ಗಳಿಕೆ 10 ರನ್​. ಶಾರ್ದುಲ್ ಠಾಕೂರ್​ 16 ರನ್​ ಗಳಿಸಿ ಔಟಾದರೆ ಕುಲ್ದೀಪ್​ ಯಾದವ್​ 8 ರನ್​ ಬಾರಿಸಿ ಸ್ವಲ್ಪ ಹೊತ್ತು ಕ್ರಿಸ್​ನಲ್ಲಿ ಉಳಿದರು.

ವಿಂಡೀಸ್ ಪರ ಗುಡ್ಕೇಶ್​ ಮೋತಿ ಹಾಗೂ ರೊಮಾರಿಯೊ ಶಫರ್ಡ್​ ತಲಾ 3 ವಿಕೆಟ್​ ಕಬಳಿಸಿದರೆ ಅಲ್ಜಾರಿ ಜೋಸೆಫ್​ 2 ವಿಕೆಟ್ ಉರುಳಿಸಿದರು. ಪಂದ್ಯ ನಡುವೆ ಎರಡೆರಡು ಬಾರಿ ಮಳೆ ಸುರಿಯಿತು. ಹೀಗಾಗಿ ಪಂದ್ಯಕ್ಕೆ ಅಡಚಣೆ ಉಂಟಾಯಿತು. ಜತೆಗೆ ಔಟ್​ಫೀಲ್ಡ್ ಇನ್ನಷ್ಟು ತೇವಗೊಂಡು ಚೆಂಡಿನ ತಿರುವು ಇನ್ನಷ್ಟು ಹೆಚ್ಚಾಯಿತು.

Exit mobile version