Site icon Vistara News

CWG- 2022 | ಇಂದೂ ಕೂಡ ಸಿಗಬಹುದು ಭಾರತಕ್ಕೆ ಐದು ಪದಕಗಳು, ಅದರಲ್ಲಿ ಚಿನ್ನ ಎಷ್ಟು?

CWG-2022

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಇಂದು ಸಮಾಪ್ತಿಯಾಗಲಿದ್ದು, ಕೊನೇ ದಿನವೂ ಭಾರತಕ್ಕೆ ಕನಿಷ್ಠ ೪ ಪದಕಗಳು ಖಾತರಿಯಾಗಿವೆ. ಜತೆಗೆ ಇನ್ನೊಂದು ಕಂಚು ಸಿಗುವ ಸಾಧ್ಯತೆಗಳಿವೆ. ಭಾನುವಾರ ಭಾರತಕ್ಕೆ ೧೫ ಪದಕಗಳು ಬಂದಿದ್ದರೆ, ಶನಿವಾರ ೧೪ ಪದಕಗಳನ್ನು ಭಾರತದ ಅಥ್ಲೀಟ್‌ಗಳು ಗೆದ್ದಿದ್ದರು. ಅಂತೆಯೇ ಒಟ್ಟಾರೆ ೫೫ ಪದಕಗಳು ಭಾರತದ ಖಾತೆಯಲ್ಲಿವೆ. ಇದರಲ್ಲಿ ೧೮ ಚಿನ್ನ, ೧೫ ಬೆಳ್ಳಿ ಹಾಗೂ ೨೨ ಕಂಚಿನ ಪದಕಗಳು ಸೇರಿಕೊಂಡಿವೆ. ಈ ಲೆಕ್ಕಾಚಾರಕ್ಕೆ ಇನ್ನೂ ೪ ಪದಕಗಳು ಸೇರಲಿವೆ. ಅದು ಚಿನ್ನವೊ, ಬೆಳ್ಳಿ ಮತ್ತು ಕಂಚು ಎಂಬುದು ಸೋಮವಾರ ರಾತ್ರಿಯೊಳಗೆ ನಿರ್ಧಾರವಾಗಲಿದೆ. ಒಟ್ಟಿನಲ್ಲಿ ಈ ಬಾರಿಯ ಕಾಮನ್ವೆಲ್ತ್‌ನಲ್ಲಿ ಭಾರತ ಕನಿಷ್ಠ ಪಕ್ಷ ೫೯ ಪದಕಗಳನ್ನು ಗೆದ್ದು ಸಂಭ್ರಮಿಸಲಿದೆ.

ಭಾರತ ಈಗ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್‌ ಒಂದು ಸ್ಥಾನ ಮೇಲೆ ಇದೆ. ಬಂಗಾರದ ಪದಕಗಳ ಲೆಕ್ಕಾಚಾರದಲ್ಲಿ ನ್ಯೂಜಿಲೆಂಡ್‌ಗೆ ೪ನೇ ಸ್ಥಾನ ಲಭಿಸಿದೆ. ಭಾರತ ಬಳಿ ೧೮ ಬಂಗಾರವಿದ್ದರೆ, ನ್ಯೂಜಿಲೆಂಡ್‌ ಖಾತೆಯಲ್ಲಿ ೧೯ ಸ್ವರ್ಣ ಪದಕಗಳು ಇವೆ. ಆದರೆ, ಒಟ್ಟು ಪದಕಗಳ ವಿಚಾರಕ್ಕೆ ಬಂದಾಗ ಭಾರತದ ಬಳಿ ೫೫ ಪದಕಗಳು ಇವೆ. ನ್ಯೂಜಿಲೆಂಡ್‌ ೪೮ ಪದಕಗಳನ್ನು ಹೊಂದಿದೆ.

೬೬ ಬಂಗಾರ ಸೇರಿ ೧೭೪ ಪದಕಗಳನ್ನು ಬಾಚಿಕೊಂಡಿರುವ ಆಸ್ಟ್ರೇಲಿಯಾ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಇಂಗ್ಲೆಂಡ್‌ ೫೫ ಬಂಗಾರದೊಂದಿಗೆ ಒಟ್ಟಾರೆ ೧೧೬ ಪದಕಗಳನ್ನು ಗೆದ್ದು ಎರಡನೇ ಸ್ಥಾನ ಪಡೆದುಕೊಂಡಿದೆ. ಕೆನಡಾ ಬಳಿ ೨೬ ಬಂಗಾರ ಹಾಗೂ ಒಟ್ಟಾರೆ ೯೧ ಪದಕಗಳಿವೆ. ಹೀಗಾಗಿ ಸೋಮವಾರ ರಾತ್ರಿಯ ಒಳಗೆ ಭಾರತಕ್ಕೆ ನಾಲ್ಕು ಅಥವಾ ಐದರಲ್ಲಿ ಯಾವುದೆಂದು ನಿರ್ಧಾರವಾಗಬಹುದು. ಸದ್ಯ ಫೈನಲ್‌ನಲ್ಲಿರುವ ನಾಲ್ವರಲ್ಲಿ ಎಲ್ಲರೂ ಚಿನ್ನ ಗೆದ್ದರೆ ಭಾರತಕ್ಕೆ ನಾಲ್ಕನೇ ಸ್ಥಾನವೇ ಸಿಗುವ ಸಾಧ್ಯತೆಗಳಿವೆ.

ಕೊನೇ ದಿನ ಪದಕ ಗೆಲ್ಲುವವರು ಯಾರು?

ಪಿವಿ ಸಿಂಧೂ : ಬ್ಯಾಡ್ಮಿಂಟನ್‌ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಮುಂಚೂಣಿ ಸ್ಪರ್ಧಿ ಪಿ. ವಿ. ಸಿಂಧೂ ಕಣದಲ್ಲಿದ್ದಾರೆ. ಅವರು ಕೆನಡಾದ ಮಿಚೆಲ್‌ ಲೀ ವಿರುದ್ಧ ಆಡಬೇಕಾಗಿದೆ. ಈ ಸ್ಪರ್ಧೆಯಲ್ಲಿ ಸಿಂಧೂ ಅವರೇ ಬಲಿಷ್ಠರಂತೆ ತೋರುತ್ತಿದ್ದಾರೆ. ಆದರೆ, ಭಾನುವಾರ ಸೆಮಿಫೈನಲ್‌ ಪಂದ್ಯದಲ್ಲಿ ಆಡುವ ವೇಳೆ ಅವರು ಕಾಲು ನೋವಿಗೆ ಒಳಗಾಗಿದ್ದರು. ಸಮಸ್ಯೆ ತಲೆದೋರದಿದ್ದರೆ ಸಿಂಧೂಗೆ ಗೆಲುವು ಖಾತರಿ.
ಪಂದ್ಯ ಆರಂಭ : ಮಧ್ಯಾಹ್ನ ೧.೨೦ಕ್ಕೆ

ಲಕ್ಷ್ಯ ಸೇನ್‌ :ಪುರುಷರ ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಫೈನಲ್‌ಗೇರಿದ್ದಾರೆ. ಅವರಿಗೆ ಮಲೇಷ್ಯಾದ ಟೆ ಯಂಗ್ ಎನ್‌ಜಿ ಸ್ಪರ್ಧಿ. ಇಬ್ಬರೂ ಸಮಬಲ ಹೊಂದಿದ್ದು, ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ.
ಪಂದ್ಯ ಆರಂಭ : ಮಧ್ಯಾಹ್ನ ೨.೧೦ಕ್ಕೆ

ಬ್ಯಾಡ್ಮಿಂಟನ್‌ ಪುರುಷರ ಡಬಲ್ಸ್‌ : ಚಿರಾಗ್‌ ಶೆಟ್ಟಿ ಹಾಗೂ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಅವರನ್ನು ಒಳಗೊಂಡಿರುವ ಭಾರತ ಬ್ಯಾಡ್ಮಿಂಟನ್‌ ಪುರುಷರ ಡಬಲ್ಸ್ ತಂಡ ಇಂದು ಫೈನಲ್‌ನಲ್ಲಿ ಆಡಲಿದೆ ಇಂಗ್ಲೆಂಡ್‌ನ ಲೇನ್‌ ಬೆನ್‌ ಹಾಗೂ ವೆಂಡಿ ಸೀನ್‌ ಇವರಿಗೆ ಎದುರಾಳಿಗಳು.
ಪಂದ್ಯ ಆರಂಭ : ಮಧ್ಯಾಹ್ನ ೩ ಗಂಟೆಗೆ

ಸತಿಯನ್‌ ಗುಣಶೇಖರ್‌ : ಟೇಬಲ್‌ ಟೆನಿಸ್‌ ಕಂಚಿನ ಪದಕದ ಪಂದ್ಯ ಇಂದು ನಡೆಯಲಿದ್ದು, ಭಾರತದ ಸತಿಯನ್‌ ಗುಣಶೇಖರನ್ ಅವರು ಕಣದಲ್ಲಿದ್ದಾರೆ. ಅವರಿಗೂ ಇಂಗ್ಲೆಂಡ್‌ನ ಪಾಲ್‌ ಡ್ರಿಂಕಾಲ್‌ ಎದುರಾಳಿ.
ಪಂದ್ಯ ಆರಂಭ: ಮಧ್ಯಾಹ್ನ ೩.೩೫

ಶರತ್‌ ಕಮಾಲ್‌ : ಭಾರತದ ಹಿರಿಯ ಟೇಬಲ್‌ ಟೆನಿಸ್‌ ಅಟಗಾರ ಅಚಂತಾ ಶರತ್‌ ಕಮಾಲ್‌ ಅವರು ಟೇಬಲ್‌ ಟೆನಿಸ್‌ ಸಿಂಗಲ್ಸ್‌ನ ಫೈನಲ್‌ನಲ್ಲಿ ಇಂದು ಸೆಣಸಾಡಲಿದ್ದಾರೆ. ಅವರಿಗೆ ಇಂಗ್ಲೆಂಡ್‌ನ ಲಿಯಾಮ್‌ ಪಿಚ್‌ಫೋರ್ಡ್‌ ಎದುರಾಳಿ. ಭಾನುವಾರ ಶ್ರೀಜಾ ಅಕುಲಾ ಅವರೊಂದಿಗೆ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಬಂಗಾರ ಗೆದಿದ್ದ ಶರತ್‌ ಅವರಿಗೆ ಇಲ್ಲೂ ಚಿನ್ನ ಗೆಲ್ಲುವ ಅವಕಾಶಗಳಿವೆ,
ಪಂದ್ಯ ಆರಂಭ : ಸಂಜೆ ೪.೨೫ಕ್ಕೆ

ಪುರುಷರ ಹಾಕಿ ತಂಡ

ಭಾರತದ ಪುರುಷರ ಹಾಕಿ ತಂಡ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಎದುರಾಗಲಿದೆ. ಈ ಪಂದ್ಯದಲ್ಲೂ ಭಾರತಕ್ಕೆ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಪದಕ ಗೆಲ್ಲುವ ಅವಕಾಶಗಳಿವೆ.
ಪಂದ್ಯದ ಸಮಯ: ಸಂಜೆ ೫ ಗಂಟೆಗೆ

ಇದನ್ನೂ ಓದಿ : CWG- 2022 | ಸಾಗರ್‌ ಅಹ್ಲಾವತ್‌ಗೆ ಬಾಕ್ಸಿಂಗ್‌ನಲ್ಲಿ ಬೆಳ್ಳಿಯ ಪದಕ

Exit mobile version