Site icon Vistara News

IND vs WI T20 – ವಿಂಡೀಸ್‌ ವಿರುದ್ಧ ಭಾರತಕ್ಕೆ 88 ರನ್‌ ಭರ್ಜರಿ ಜಯ, ಸರಣಿ 4-1 ಅಂತರದಲ್ಲಿ ಕೈವಶ

IND vs Wi t20

ಲೌಡರ್‌ಹಿಲ್‌: ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ ಟಿ೨೦ ಸರಣಿಯ (IND vs WI T20 ) ಐದನೇ ಹಾಗೂ ಕೊನೇ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ೮೮ ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಭಾರತ ತಂಡ ಐದು ಪಂದ್ಯ್ಗಗಳ ಸರಣಿಯನ್ನು ೪-೧ ಅಂತರದಿಂದ ವಶಪಡಿಸಿಕೊಂಡಿತು. ಇದು ಭಾರತ ತಂಡಕ್ಕೆ ವೆಸ್ಟ್‌ ಇಂಡೀಸ್‌ ವಿರುದ್ಧದ ಕಳೆದ ೧೫ ಪಂದ್ಯಗಳಲ್ಲಿ ಲಭಿಸಿದ ೧೩ನೇ ಗೆಲುವಾಗಿದೆ.

ಅಮೆರಿಕದ ಲೌಡರ್‌ಹಿಲ್‌ನ ಸೆಂಟ್ರಲ್‌ ಬ್ರೊವಾರ್ಡ್‌ ರೀಜಿನಲ್‌ ಪಾರ್ಕ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಶ್ರೇಯಸ್‌ ಅಯ್ಯರ್‌ ಅವರ ಅಮೋಘ ಅರ್ಧ ಶತಕದ ನೆರವಿನಿಂದ ನಿಗದಿತ ೨೦ ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ೧೮೮ ರನ್‌ ಪೇರಿಸಿತು. ಬೃಹತ್‌ ಗುರಿ ಬೆನ್ನಟ್ಟಿದ ವೆಸ್ಟ್‌ ಇಂಡೀಸ್‌ ತಂಡ ೧೫.೪ ಓವರ್‌ಗಳಲ್ಲಿ ೧೦೦ ರನ್‌ಗಳಿಗೆ ಸರ್ವಪತನ ಕಂಡು ಹೀನಾಯ ಸೋಲಿಗೆ ಒಳಗಾಯಿತು.

ಮೊದಲು ಬ್ಯಾಟ್‌ ಮಾಡಲು ಆರಂಭಿಸಿದ ಭಾರತ ತಂಡದ ಪರ ಆರಂಭಿಕರಾಗಿ ಕ್ರೀಸ್‌ಗೆ ಇಳಿದ ಶ್ರೇಯಸ್‌ ಅಯ್ಯರ್‌ ಉತ್ತಮ ಪ್ರದರ್ಶನ ನೀಡಿದರು. ೪೦ ಎಸೆತಗಳಲ್ಲಿ ೬೪ ರನ್‌ ಬಾರಿಸಿದ ಅವರು ಉಪಯುಕ್ತ ಅರ್ಧ ಶತಕದ ನೆರವಿನೊಂದಿಗೆ ದೊಡ್ಡ ಮೊತ್ತ ಪೇರಿಸುವ ಗುರಿಗೆ ಚಾಲನೆ ಕೊಟ್ಟರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಬಂದ ದೀಪಕ್‌ ಹೂಡಾ ೩೮ ರನ್‌ ಬಾರಿಸಿದರು. ಆದರೆ, ಸರಣಿಯ ಕೊನೇ ಪಂದ್ಯದಲ್ಲಿ ಆಡಲು ಅವಕಾಶ ಪಡೆದ ಇಶಾನ್‌ ಕಿಶನ್‌ (೧೧) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಸಂಜು ಸ್ಯಾಮ್ಸನ್‌ ಕೂಡ ೧೫ ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ೧೬ ಎಸೆಗಳಿಗೆ ೨೮ ರನ್‌ ಚಚ್ಚಿ ತಂಡದ ಮೊತ್ತ ಹೆಚ್ಚಲು ನೆರವಾದರು. ದಿನೇಶ್‌ ಕಾರ್ತಿಕ್‌ ೧೨ ರನ್‌ಗಳ ಕೊಡಗೆ ಕೊಟ್ಟರು. ವಿಂಡೀಸ್‌ ಬೌಲಿಂಗ್‌ ಪರ ಒಡೇನ್‌ ಸ್ಮಿತ್‌ ೩೩ ರನ್‌ಗಳಿಗೆ ೩ ವಿಕೆಟ್‌ ಪಡೆದರು.

ಗುರಿ ಬೆನ್ನಟ್ಟಲು ಆರಂಭಿಸಿದ ವಿಂಡೀಸ್‌ ಪಡೆಗೆ ಭಾರತದ ಸ್ಪಿನ್ನರ್‌ಗಳಾದ ರವಿ ಬಿಷ್ಣೋಯಿ (೧೬ ರನ್‌ಗಳಿಗೆ ೪ ವಿಕೆಟ್‌), ಕುಲ್ದೀಪ್‌ ಯಾದವ್‌ (೧೨ ರನ್‌ಗಳಿಗೆ ೩ ವಿಕೆಟ್‌), ಅಕ್ಷರ್ ಪಟೇಲ್‌ (೧೫ ರನ್‌ಗಳಿಗೆ ೩ ವಿಕೆಟ್‌) ನಿರಂತರವಾಗಿ ಕಾಡಿದರು. ಹೀಗಾಗಿ ವೆಸ್ಟ್‌ ಇಂಡೀಸ್‌ ಆಟಗಾರರು ಸತತವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದರು. ಶಿಮ್ರೋನ್ ಹೆಟ್ಮಾಯರ್‌ (೫೬) ರನ್‌ ಬಾರಿಸಿದರೂ ಉಳಿದವರಿಂದ ಅವರಿಗೆ ನೆರವು ಲಭಿಸಲಿಲ್ಲ.

ಸ್ಕೋರ್‌ ವಿವರ

ಭಾರತ : ೨೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೧೮೮ (ಶ್ರೇಯಸ್‌ ಅಯ್ಯರ್‌ ೬೪, ದೀಪಕ್‌ ಹೂಡ ೩೮, ಹಾರ್ದಿಕ್‌ ಪಾಂಡ್ಯ ೨೮, ಒಡೇನ್‌ ಸ್ಮಿತ್‌ ೩೩ಕ್ಕೆ೩).

ವೆಸ್ಟ್ ಇಂಡೀಸ್‌ : ೧೫.೪ ಓವರ್‌ಗಳಲ್ಲಿ ೧೦೦ (ಶಿಮ್ರೋನ್‌ ಹೆಟ್ಮಾಯರ್‌ ೫೬, ಶಮ್ರಾ ಬ್ರೂಕ್ಸ್‌ ೧೩, ರವಿ ಬಿಷ್ಣೋಯಿ ೧೬ಕ್ಕೆ೪, ಕುಲ್ದಿಪ್‌ ಯಾದವ್‌ ೧೨ಕ್ಕೆ೩, ಅಕ್ಷರ್‌ ಪಟೇಲ್‌ ೧೫ಕ್ಕೆ೩).

ಇದನ್ನೂ ಓದಿ | IND vs WI T20 | ಭಾರತಕ್ಕೆ 59 ರನ್‌ ಜಯ, ದಾಖಲೆ ಸಮೇತ ವಿಂಡೀಸ್‌ ವಿರುದ್ಧ ಸರಣಿ ಗೆಲುವು

Exit mobile version