Site icon Vistara News

IND vs PAK | ಹಳೆ ಸೋಲಿಗೆ ಸೇಡು ತೀರಿಸಿಕೊಂಡ ಭಾರತ, ಪಾಕಿಸ್ತಾನ ವಿರುದ್ಧ 5 ವಿಕೆಟ್‌ ಜಯ

ind vs pak

ದುಬೈ: ಸಂಘಟಿತ ಪ್ರದರ್ಶನ ನೀಡಿದ ಭಾರತ ತಂಡ ಬಾಬರ್‌ ಅಜಮ್‌ ನೇತೃತ್ವದ ಪಾಕಿಸ್ತಾನ ತಂಡದ ವಿರುದ್ಧದ ಏಷ್ಯಾ ಕಪ್‌ ಗುಂಪು ಹಂತದ ತನ್ನ ಮೊದಲ ಪಂದ್ಯದಲ್ಲಿ ೫ ವಿಕೆಟ್‌ಗಳಿಂದ ಜಯ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ ತಂಡ ಪೇರಿಸಿದ್ದ ೧೪೭ ರನ್‌ಗಳಿಗೆ ಪ್ರತಿಯಾಗಿ ಆಡಿದ ಭಾರತ ೧೯.೪ ಓವರ್‌ಗಳಲ್ಲಿ ೫ ವಿಕೆಟ್‌ ಕಳೆದುಕೊಂಡು ೧೪೮ ರನ್‌ ಬಾರಿಸಿ ವಿಜಯದ ಕೇಕೆ ಹಾಕಿತು. ಇದರೊಂದಿಗೆ ಕಳೆದ ವರ್ಷದ ಟಿ೨೦ ವಿಶ್ವ ಕಪ್‌ ಪಂದ್ಯದ ಸೋಲಿಗೆ ಪ್ರತಿಕಾರ ತೀರಿಸಿಕೊಂಡಿತು. ಅಲ್ಲದೆ ೧೦೦ನೇ ಟಿ೨೦ ಅಂತಾರಾಷ್ಟ್ರೀಯ ಪಂದ್ಯವಾಡಿದ ವಿರಾಟ್‌ ಕೊಹ್ಲಿಗೆ ಗೆಲುವಿನ ಸಿಹಿ ಪಡೆದರು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನ ಪಡೆದ ಪಾಕಿಸ್ತಾನ ತಂಡ ೧೯. ೫ ಓವರ್‌ಗಳಲ್ಲಿ ೧೪೭ ರನ್‌ಗಳಿಗೆ ಆಲ್‌ಔಟ್‌ ಅಯಿತು. ಗುರಿ ಬೆನ್ನಟ್ಟಿದ ಭಾರತ ತಂಡ ಏಳು- ಬೀಳುಗಳ ನಡುವೆ ಬ್ಯಾಟಿಂಗ್‌ ನಡೆಸಿ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತು. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ೨೫ ರನ್‌ಗಳಿಗೆ ೩ ವಿಕೆಟ್‌ ಕಬಳಿಸುವ ಜತೆಗೆ ಅಜೇಯ ೩೩ ರನ್‌ ಬಾರಿಸುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡರು. ಇವರೊಂದಿಗೆ ಇನಿಂಗ್ಸ್‌ ಕಟ್ಟಿದ ಆಲ್‌ರೌಂಡರ್‌ ರವೀಂದ್ರ ಜಡೇಜಾ ೩೫ ರನ್‌ ಬಾರಿಸಿ ಗೆಲುವಿಗೆ ತಮ್ಮ ಕೊಡುಗೆಯನ್ನೂ ನೀಡಿದರು.

ಸಾಧಾರಣ ಮೊತ್ತಕ್ಕೆ ಪ್ರತಿಯಾಗಿ ಆಡಲು ಆರಂಭಿಸಿದ ಭಾರತ ತಂಡ, ಕೆ.ಎಲ್‌ ರಾಹುಲ್‌ ಅವರು ಶೂನ್ಯಕ್ಕೆ ಔಟಾಗುವ ಮೂಲಕ ಹಿನ್ನಡೆ ಅನುಭವಿಸಿತು. ಬಳಿಕ ರೋಹಿತ್‌ ಶರ್ಮ (೧೨) ಸ್ವಲ್ಪ ಹೊತ್ತು ಕ್ರಿಸ್‌ನಲ್ಲಿದ್ದು ನಿರ್ಗಮಿಸಿದರು. ೧೦೦ನೇ ಟಿ೨೦ ಅಂತಾರಾಷ್ಟ್ರೀಯ ಪಂದ್ಯವಾಡಿದ ವಿರಾಟ್‌ ಕೊಹ್ಲಿ ಆರಂಭದಲ್ಲಿ ಆತ್ಮ ವಿಶ್ವಾಸದಿಂದ ಬ್ಯಾಟಿಂಗ್‌ ಮಾಡಿದರೂ, ೩೫ ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ಅವರು ಖಾತೆ ತೆರೆಯುವ ಮೊದಲೇ ಜೀವದಾನ ಪಡೆದರೂ ಅದರ ಲಾಭವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ವಿಫಲಗೊಂಡರು. ಬಳಿಕ ಸೂರ್ಯಕುಮಾರ್‌ ಯಾದವ್‌ ಸ್ವಲ್ಪ ಹೊತ್ತು ಆಡಿ ವಿಶ್ವಾಸ ಮೂಡಿಸಿದರೂ ೧೮ ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಜತೆಯಾದ ಹಾರ್ದಿಕ್‌ ಹಾಗೂ ಜಡೇಜಾ ತಂಡಕ್ಕೆ ಗೆಲುವು ತಂದುಕೊಟ್ಟರು.

ಸಾಧಾರಣ ಮೊತ್ತ ಪೇರಿಸಿದ ಪಾಕ್‌

ಅದಕ್ಕಿಂತ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡ ಮೊಹಮ್ಮದ್‌ ರಿಜ್ಞಾನ್‌ (43), ಇಫ್ತಿಕಾರ್‌ ಅಹಮದ್‌ (೨೮) ಅವರ ಸಮಯೋಚಿತ ಬ್ಯಾಟಿಂಗ್‌ ನೆರವಿನಿಂದ 147 ರನ್‌ ಬಾರಿಸಿತು. ಆರಂಭಿಕ ಬ್ಯಾಟರ್‌ ಬಾಬರ್‌ ಅಜಮ್‌ ೧೦ ರನ್‌ ಬಾರಿಸಿ ಭುವನೇಶ್ವರ್‌ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ ಬಂದ ಫಖರ್‌ ಜಮಾನ್‌ (೧೦) ಆವೇಶ್‌ ಖಾನ್‌ ಎಸೆತಕ್ಕೆ ಔಟಾದರು. ಬಳಿಕ ಬಂದ ಇಫ್ತಿಕಾರ್‌ ಅಹಮದ್‌ ೨೮ ರನ್‌ ಬಾರಿಸಿ ಅಪಾಯಕಾರಿಯಾಗುವ ಲಕ್ಷಣ ತೋರಿದರೂ ಹಾರ್ದಿಕ್‌ ಪಾಂಡ್ಯ ಅವರ ವಿಕೆಟ್‌ ಕಬಳಿಸಿದರು. ಕೊನೆಯಲ್ಲಿ ಶಹನವಾಜ್‌ ದಹಾನಿ ೬ ಎಸೆತಗಳಿಗೆ ೧೬ ರನ್‌ ಬಾರಿಸಿ ತಂಡದ ಗಳಿಕೆ ೧೫೦ರ ಸಮೀಪ ಬರುವಂತೆ ನೋಡಿಕೊಂಡರು.

ಸ್ಕೋರ್‌ ವಿವರ

ಪಾಕಿಸ್ತಾನ : ೧೯.೫ ಓವರ್‌ಗಳಲ್ಲಿ ೧೪೭ (ಮೊಹಮ್ಮದ್‌ ರಿಜ್ವಾನ್‌ ೪೩, ಇಫ್ತಿಕಾರ್‌ ಅಹಮದ್‌ ೨೮; ಹಾರ್ದಿಕ್‌ ಪಾಂಡ್ಯ ೨೫ಕ್ಕೆ೩, ಭುವನೇಶ್ವರ್‌ ಕುಮಾರ್‌ 2೬ಕ್ಕೆ ೪).

ಭಾರತ : ೧೯. ೪ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೪೮ (ವಿರಾಟ್‌ ಕೊಹ್ಲಿ ೩೫, ರವೀಂದ್ರ ಜಡೇಜಾ ೩೫, ಹಾರ್ದಿಕ್‌ ಪಾಂಡ್ಯ ೩೩; ಮೊಹಮ್ಮದ್‌ ನವಾಜ್‌ ೩೩ಕ್ಕೆ೩).

ಇದನ್ನೂ ಓದಿ | IND vs PAK | 100ನೇ ಪಂದ್ಯವಾಡುತ್ತಿರುವ ವಿರಾಟ್‌ ಕೊಹ್ಲಿಗೆ ಶುಭಾಶಯಗಳ ಸುರಿಮಳೆ

Exit mobile version