ಮೊಹಾಲಿ: ಪ್ರವಾಸಿ ಆಸ್ಟ್ರೇಲಿಯಾ (ind vs aus ) ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದೆ. ಭಾರತ ತಂಡದ ಪರ ಬೌಲಿಂಗ್ನಲ್ಲಿ 51 ರನ್ಗಳಿಗೆ 5 ವಿಕೆಟ್ ಉರುಳಿಸಿದ ಮೊಹಮ್ಮದ್ ಶಮಿ ಹಾಗೂ ಬ್ಯಾಟಿಂಗ್ ಮೂಲಕ ತಲಾ ಅರ್ಧ ಶತಕಗಳನ್ನು ಬಾರಿಸಿದ ಶುಭ್ಮನ್ ಗಿಲ್ (74) ಹಾಗೂ ಋತುರಾಜ್ ಗಾಯಕ್ವಾಡ್ (71), ಸೂರ್ಯಕುಮಾರ್ ಯಾದವ್ (50), ಮತ್ತು ಕೆ. ಎಲ್ ರಾಹುಲ್ (58*) ಗೆಲುವಿನ ರೂವಾರಿಗಳು ಎನಿಸಿಕೊಂಡರು. ಈ ವಿಜಯದ ಮೂಲಕ ಭಾರತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು.
ಇಲ್ಲಿನ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 276 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ. 48.4 ಓವರ್ಗಳಲ್ಲಿ. 5 ವಿಕೆಟ್ ಕಳೆದುಕೊಂಡು 281 ರನ್ ಬಾರಿಸಿ ಜಯಶಾಲಿಯಾಯಿತು.
ಗುರಿ ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ಋತುರಾಜ್ ಗಾಯಕ್ವಾಡ್ ಹಾಗೂ ಶುಭ್ ಮನ್ ಗಿಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಈ ಜೋಡಿ ಮೊದಲ ವಿಕೆಟ್ಗೆ 142 ರನ್ ಬಾರಿಸಿ ವಿಶ್ವಾಸ ಮೂಡಿಸಿತು. ಇವರಿಬ್ಬರೂ ಆಸ್ಟ್ರೇಲಿಯಾದ ಬೌಲರ್ಗಳನ್ನು ಹಿಮ್ಮಟ್ಟಿಸಿದರು.
ಆದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಶ್ರೇಯಸ್ ಅಯ್ಯರ್ ಮತ್ತೆ ವೈಫಲ್ಯ ಕಂಡರು. 3 ರನ್ಗೆ ಅವರು ರನ್ಔಟ್ ಆದರು. ಅನಗತ್ಯ ರನ್ ಕದಿಯಲು ಮುಂದಾದ ಅವರು ತಾವಿನ್ನೂ ಲಯ ಕಂಡುಕೊಂಡಿಲ್ಲ ಎಂಬುದನ್ನು ಸೂಚಿಸಿದಂತಿತ್ತು. ಅವರು ಔಟಾದ ಬಳಿಕ ಭಾರತಕ್ಕೆ ಸ್ವಲ್ಪ ಹಿನ್ನಡೆ ಉಂಟಾಯಿತು. ಆದರೆ ಈ ಇಬ್ಬರೂ ಬ್ಯಾಟರ್ಗಳು ಆಸೀಸ್ ಸ್ಪಿನ್ನರ್ ಆ್ಯಡಂ ಜಂಪಾ ಅವರ ಎಸೆತಗಳಿವೆ ವಿಕೆಟ್ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಇಶಾನ್ ಕಿಶನ್ ಭರವಸೆ ಮೂಡಿಸಿದರೂ 18 ರನ್ಗಳಿಗೆ ಔಟಾದರು. ಈ ವೇಳೆ ಭಾರತ ತಂಡ 185 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು.
ಈ ವೇಳೆ ಜತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ನಾಯಕ ಕೆ. ಎಲ್ ರಾಹುಲ್ ಅರ್ಧ ಶತಕಗಳನ್ನು ಬಾರಿಸಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ಇವರಿಬ್ಬರೂ 80 ರನ್ಗಳ ಜತೆಯಾಟ ಆಡಿದರು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಪರ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಗರಿಷ್ಠ 52 ರನ್ ಗಳಿಸಿದರು. ಜೋಶ್ ಇಂಗ್ಲಿಷ್ 45, ಸ್ಟೀವ್ ಸ್ಮಿತ್ 41, ಮಾರ್ನಸ್ ಲಾಬುಷೇನ್ 39, ಕ್ಯಾಮರೂನ್ ಗ್ರೀನ್ 31, ಮಾರ್ಕಸ್ ಸ್ಪೋಯಿನಿಸ್ 29 ಮತ್ತು ನಾಯಕ ಪ್ಯಾಟ್ ಕಮಿನ್ಸ್ 21 ರನ್ ಗಳಿಸಿ ಔಟಾಗದೆ ಉಳಿದರು. ಸ್ಮಿತ್ ಹಾಗೂ ವಾರ್ನರ್ ಭಾರತ ತಂಡದ ಬೌಲರ್ಗಳನ್ನು ಕಾಡಿದರಲ್ಲದೆ, ದೊಡ್ಡ ಮೊತ್ತ ಪೇರಿಸುವ ಆತಂಕ ಮೂಡಿಸಿದರು. ಆದರೆ, ಮೊಹಮ್ಮದ್ ಶಮಿ ಭಾರತದ ಭಯವನ್ನು ದೂರ ಮಾಡಿದರು. ಬುಮ್ರಾ.ಅಶ್ವಿನ್ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಶಮಿಗೆ ಉತ್ತಮ ಬೆಂಬಲ ನೀಡಿದರು.
ಇದನ್ನೂ ಓದಿ: Mohammed Shami : ಬೌಲಿಂಗ್ನಲ್ಲಿ ಹೊಸ ಮಿಂಚು ಸೃಷ್ಟಿಸಿದ ಮೊಹಮ್ಮದ್ ಶಮಿ; ಏನಿದು ಸಾಧನೆ
ತವರಿನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಪೂರ್ವ ಸಿದ್ಧತೆ ನಡೆಸಲು ಈ ಸರಣಿ ಭಾರತದ ಪಾಲಿಗೆ ಮಹತ್ವದನಿಸಿದೆ. ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ಕಲ್ಪಿಸಲಾಗಿದೆ.