ಬರ್ಮಿಂಗ್ಹಮ್: ಇಂಗ್ಲೆಂಡ್‌ನ ಬರ್ಮಿಂಗ್ಹಮ್‌ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬಾರ್ಬಡೋಸ್ ವಿರುದ್ಧ ಟಿ೨೦ ಪಂದ್ಯದಲ್ಲಿ ೧೦೦ ರನ್‌ಗಳಿಂದ ಭರ್ಜರಿಯಾಗಿ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಸೆಮಿ ಫೈನಲ್‌ಗೆ ಪ್ರವೇಶಿಸಿದೆ.
ಭಾರತೀಯ ಮಹಿಳೆಯರ ತಂಡ ನಿಗದಿತ ೨೦ ಓವರ್‌ಗಳಲ್ಲಿ ೪ ವಿಕೆಟ್ ನಷ್ಟದಲ್ಲಿ ೧೬೨ ರನ್‌ಗಳನ್ನು ದಾಖಲಿಸಿತ್ತು. ಪ್ರತಿಯಾಗಿ ಬಾರ್ಬಡೋಸ್ ತಂಡ ೮ ವಿಕೆಟ್ ನಷ್ಟದಲ್ಲಿ ಕೇವಲ ೬೨ ರನ್ ಗಳಿಸಿತು. ಭಾರಿ ಅಂತರದಲ್ಲಿ ಬಾರ್ಬಡೋಸ್ ಅನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿರುವುದು ತಂಡದ ವಿಶ್ವಾಸವನ್ನು ಹೆಚ್ಚಿಸಿದೆ.
ಭಾರತದ ಪರ ಜೆಮಿಮಾಹ್ ರೋಡ್ರಿಗಸ್ ಅವರು ೪೬ ಎಸೆತಗಳಿಗೆ ಅಮೋಘ ೫೬ ರನ್‌ಗಳನ್ನು ಬಾರಿಸಿದರು. ಅದರಲ್ಲಿ ೭ ಫೋರ್ ಮತ್ತು ಒಂದು ಸಿಕ್ಸರ್ ಇತ್ತು. ಶಫಿ ವರ್ಮ ಕೂಡ ಕೇವಲ ೨೬ ಎಸೆತಗಳಿಗೆ ಸ್ಫೋಟಕ ೪೩ ರನ್‌ಗಳನ್ನು ಸಿಡಿಸಿದರು. ಇದರಲ್ಲಿ ೭ ಫೋರ್ ಮತ್ತು ೧ ಸಿಕ್ಸರ್ ಇತ್ತು. ಇವರಿಬ್ಬರೂ ಬಾರ್ಬಡೋಸ್ ಬೌಲರ್‌ಗಳನ್ನು ದಂಡಿಸಿದರು.
ಈ ಸವಾಲಿಗೆ ಪ್ರತಿಯಾಗಿ ಬಾರ್ಬಡೋಸ್ ತಂಡ ಆರಂಭದಿಂದಲೇ ವಿಕೆಟ್‌ಗಳನ್ನು ತರಗೆಲೆಯಂತೆ ಕಳೆದುಕೊಂಡಿತು. ಕೇವಲ ಇಬ್ಬರು ಆಟಗಾರರು ಮಾತ್ರ ಎರಡಂಕಿ ತಲುಪಿದರು. ಭಾರತದ ರೇಣುಕಾ ಸಿಂಗ್ ಅವರು ಕೇವಲ ೧೦ ರನ್ ಬಿಟ್ಟುಕೊಟ್ಟು ೪ ವಿಕೆಟ್ ಕಬಳಿಸಿದರು.
ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಬಾರ್ಬಡೋಸ್ ತಂಡ ಈ ಟೂರ್ನಿಯಲ್ಲಿ ಭಾಗವಹಿಸಿವೆ. ೮ ತಂಡಗಳನ್ನು ೨ ಗುಂಪುಗಳಾಗಿ ವಿಭಜಿಸಲಾಗಿತ್ತು.